ADVERTISEMENT

ಅರಕಲಗೂಡು | ಉದ್ಯಾನ ಜಾಗಗಳ ಒತ್ತುವರಿ ತೆರವುಗೊಳಿಸಿ: ಅಧ್ಯಕ್ಷ ಪ್ರದೀಪ್ ಸೂಚನೆ

ಅರಕಲಗೂಡು ಪಟ್ಟಣ ಪಂಚಾಯಿತಿ ಸಭೆಯಲ್ಲಿ ಅಧ್ಯಕ್ಷ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 1:47 IST
Last Updated 3 ಸೆಪ್ಟೆಂಬರ್ 2025, 1:47 IST
ಅರಕಲಗೂಡಿನಲ್ಲಿ ಮಂಗಳವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ಸಿ.ಡಿ. ನಾಗೇಂದ್ರಕುಮಾರ್ ಮಾತನಾಡಿದರು. ಅಧ್ಯಕ್ಷ ಎಸ್.ಎಸ್. ಪ್ರದೀಪ್ ಕುಮಾರ್, ಉಪಾಧ್ಯಕ್ಷ ಸುಬಾನ್ ಷರೀಪ್ ಭಾಗವಹಿಸಿದ್ದರು
ಅರಕಲಗೂಡಿನಲ್ಲಿ ಮಂಗಳವಾರ ನಡೆದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮುಖ್ಯಾಧಿಕಾರಿ ಸಿ.ಡಿ. ನಾಗೇಂದ್ರಕುಮಾರ್ ಮಾತನಾಡಿದರು. ಅಧ್ಯಕ್ಷ ಎಸ್.ಎಸ್. ಪ್ರದೀಪ್ ಕುಮಾರ್, ಉಪಾಧ್ಯಕ್ಷ ಸುಬಾನ್ ಷರೀಪ್ ಭಾಗವಹಿಸಿದ್ದರು   
ಸಂತೆ ಮೈದಾನದ ಗಣಪತಿ ದೇವಾಲಯ ದುರಸ್ತಿಗೆ ಆಗ್ರಹ | ಬಡಾವಣೆಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಒಪ್ಪಿಗೆ | ಫಲಾನುಭವಿಗಳಿಗೆ ವಿವಿಧ ಯೋಜನೆಗಳಿಗೆ ಸಮ್ಮತಿ

ಅರಕಲಗೂಡು: ‘ಪಟ್ಟಣ ಪಂಚಾಯಿತಿಗೆ ಹೊಂದಿಕೊಂಡಂತಿರುವ ಗ್ರಾಮ ಪಂಚಾಯಿತಿ ಜಾಗದಲ್ಲಿ ನಿರ್ಮಿಸಿರುವ ಹೊಸ ಬಡಾವಣೆಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅಧಿಕಾರಿಗಳು ಮುಂದಾಗಬಾರದು’ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಸ್. ಎಸ್. ಪ್ರದೀಪ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಮೂಲಸೌಕರ್ಯಕ್ಕಾಗಿ ಹಲವು ಮನವಿಗಳು ಬರುತ್ತಿದ್ದು, ಆರ್ಥಿಕ ಕೊರತೆ ಪರಿಣಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸೌಕರ್ಯ ಕಲ್ಪಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ಅಲ್ಲಿನ ನಿವಾಸಿಗಳು ಗ್ರಾಮ ಪಂಚಾಯಿತಿಗೆ ತೆರಿಗೆ ಕಟ್ಟುತ್ತಿದ್ದು ಸೌಲಭ್ಯ ಕಲ್ಪಿಸುವ ಹೊಣೆಯೂ ಅವರದ್ದೇ ಆಗಿದೆ’ ಎಂದರು.

ಪಟ್ಟಣ ವ್ಯಾಪ್ತಿಯಲ್ಲಿ ಉದ್ಯಾನಕ್ಕಾಗಿ ಮೀಸಲಿರಿಸಿದ ಜಾಗಗಳು ಒತ್ತುವರಿಯಾಗಿದ್ದರೆ ಒಂದು ವಾರದಲ್ಲಿ ಸ್ಥಳ ಪರಿಶೀಲಿಸಿ ತೆರವುಗೊಳಿಸಬೇಕು’ ಎಂದರು.

ADVERTISEMENT

‘ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಜನ, ಜಾನುವಾರು ಓಡಾಡಲು ಭಯಪಡುವ ಪರಿಸ್ಥಿತಿ ಎದುರಾಗಿದೆ. ಕೂಡಲೆ ಕ್ರಮ ಕೈಗೊಳ್ಳಬೇಕು’ ಎಂದು ಸದಸ್ಯರು ಆಗ್ರಹಿಸಿದರು.

ಬೀದಿನಾಯಿಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಕೂಡಲೇ ಟೆಂಡರ್ ಪ್ರಕಿಯೆ ನಡೆಸುವಂತೆ ಅಧ್ಯಕ್ಷರು ಸೂಚಿಸಿದರು.

‘ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿಲ್ಲ, ರಾತ್ರಿ ವೇಳೆ ಪಟ್ಟಣ ಕಗ್ಗತ್ತಲಿನಲ್ಲಿ ಮುಳುಗುವಂತಾಗಿದೆ. ಗುತ್ತಿಗೆ ರದ್ದು ಪಡಿಸಿ ಹೊಸದಾಗಿ ಟೆಂಡರ್ ಕರೆಯಬೇಕು’ ಎಂದು ಸದಸ್ಯ ಕೃಷ್ಣಯ್ಯ ಆಗ್ರಹಿಸಿದರು.

‘ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಹೊಸದಾಗಿ ₹10 ಲಕ್ಷ ವೆಚ್ಚದಲ್ಲಿ ಪ್ರತಿ ಬಡಾವಣೆಯಲ್ಲಿ ಎಲ್ಇಡಿ ದೀಪಗಳ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಮುಖ್ಯಾಧಿಕಾರಿ ಸಿ.ಡಿ. ನಾಗೇಂದ್ರಕುಮಾರ್ ತಿಳಿಸಿದರು.

‘ಪಟ್ಟಣದಲ್ಲಿ ಕುಡಿಯುವ ನೀರಿನ ಸಮರ್ಪಕ ವ್ಯವಸ್ತೆಗೆ ₹22 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿದ್ದು, ಇದಕ್ಕೆ ಪಟ್ಟಣ ಪಂಚಾಯಿತಿ ₹6 ಕೋಟಿ ನೀಡಬೇಕು, ಈವರಗೆ ₹5 ಲಕ್ಷ ಮಾತ್ರ ನೀಡಲಾಗಿದೆ. 24*7 ಮಾದರಿಯ ನೀರು ಸರಬರಾಜು ವ್ಯವಸ್ತೆ ಜಾರಿಗೆ ಬರಲಿದ್ದು, ಕೊಳವೆ ಅಳವಡಿಕೆ ಕಾರ್ಯ ನಡೆದಿದೆ’ ಎಂದು ಮುಖ್ಯಾಧಿಕಾರಿ ಮಾಹಿತಿ ನೀಡಿದರು.

ಸಂತೆ ಮೈದಾನದಲ್ಲಿರುವ ಗಣಪತಿ ದೇವಾಲಯ ದುರಸ್ತಿಗೆ ಕ್ರಮ ವಹಿಸುವಂತೆ ಸದಸ್ಯರು ಒತ್ತಾಯಿಸಿದರು.

‘ಪಟ್ಟಣ ಪಂಚಾಯಿತಿ ಅನುದಾನದ ಜತೆಗೆ ಸಾರ್ವಜನಿಕರ ಸಹಭಾಗಿತ್ವ ಪಡೆಯುವ ಕುರಿತು ಚಿಂತನೆ ನಡೆಸಬೇಕು’ ಎಂದು ಮುಖ್ಯಾಧಿಕಾರಿ ಸಲಹೆ ನೀಡಿದರು.

ಸದಸ್ಯರಾದ ಅನಿಕೇತನ್, ಹೂವಣ್ಣ, ಅಬ್ದುಲ್ ಬಾಸಿದ್, ಸುಮಿತ್ರಾ, ಲಕ್ಷ್ಮೀ, ಚರ್ಚೆಯಲ್ಲಿ ಭಾಗವಹಿಸಿದ್ದರು. ಉಪಾಧ್ಯಕ್ಷ ಸುಭಾನ್ ಷರೀಪ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.