ADVERTISEMENT

ಲೋಕಸಭೆ ಚುನಾವಣೆ: ವರಿಷ್ಠರು ಸೂಚಿಸಿದರೆ ಹಾಸನದಿಂದ ಸ್ಪರ್ಧೆ -ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 16:16 IST
Last Updated 7 ಡಿಸೆಂಬರ್ 2018, 16:16 IST
ಸಿ.ಟಿ.ರವಿ
ಸಿ.ಟಿ.ರವಿ   

ಹಾಸನ: ‘2019ರ ಲೋಕಸಭೆ ಚುನಾವಣೆಗೆ ಹಾಸನ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪಕ್ಷದ ವರಿಷ್ಠರು ಸೂಚಿಸಿದರೆ ಕಣಕ್ಕಿಳಿಯುತ್ತೇನೆ’ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ನಗರ ಹೊರವಲಯದ ಎಚ್.ಕೆ.ಎಸ್ ಅಂತರರಾಷ್ಟ್ರೀಯ ವಿದ್ಯಾ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

‘ಚಿಕ್ಕಮಗಳೂರಿನ ಜನರು ನನ್ನ ಮೇಲೆ ವಿಶ್ವಾಸವಿಟ್ಟು ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಅದೇ ರೀತಿ ಪಕ್ಷದ ಸಂಘಟನೆಗಾಗಿ ಹೈಕಮಾಂಡ್ ಉತ್ತಮ ಸ್ಥಾನ ನೀಡಿದೆ. ಹಾಸನ ಜಿಲ್ಲೆಯಲ್ಲಿ ಬಿಜೆಪಿ ಬಲವರ್ಧನೆಗೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಹೈಕಮಾಂಡ್ ಸೂಚಿಸಿದರೆ ಹಾಸನ ಮಾತ್ರವಲ್ಲ ಯಾವ ಕ್ಷೇತ್ರದಿಂದ ಬೇಕಾದರೂ ಸ್ಪರ್ಧಿಸುತ್ತೇನೆ’ ಎಂದರು.

ADVERTISEMENT

‘ಲೋಕಸಭೆ ಚುನಾವಣೆಗೆ ಬಿಜೆಪಿ ತಯಾರಾಗಿದೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂಬುದು ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರ ಕನಸಾಗಿದ್ದು, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ’ ಎಂದರು.

ಕಡೂರು ಕ್ಷೇತ್ರ ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ, ‘ನಮ್ಮಲ್ಲಿರುವ ಆಂತರಿಕ ಭಿನ್ನಾಭಿಪ್ರಾಯ ಬದಿಗೊತ್ತಿ ಮುಂದಿನ ಚುನಾವಣೆಗೆ ಸಜ್ಜುಗೊಳ್ಳಬೇಕಿದೆ. ರಾಜಕೀಯ ಒಬ್ಬರ ಸ್ವತ್ತಲ್ಲ ಎಂಬುದನ್ನು ಎಲ್ಲ ಕಾರ್ಯಕರ್ತರು ಅರಿಯಬೇಕು’ ಎಂದು ಸಲಹೆ ನೀಡಿದರು.

‘ಹಾಸನ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ಇದೆ. ಅದೇ ರೀತಿ ಇತರೆ ವಿಧಾನಸಭೆ ಕ್ಷೇತ್ರಗಳಲ್ಲೂ ನಿರಂತರ ಶ್ರಮದಿಂದ ಕೆಲಸ ಮಾಡಿದರೆ ಲೋಕಸಭೆ ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಬಹುದು. ಹಾಸನ ಲೋಕಸಭೆ ವ್ಯಾಪ್ತಿಗೆ ಬರುವ ಕಡೂರಿನ 60 ಸಾವಿರ ಮತಗಳು ಬಿಜೆಪಿಗೆ ಲಭ್ಯವಾಗುತ್ತದೆ. ಆದ್ದರಿಂದ ಕಾರ್ಯಕರ್ತರು ಪ್ರಚಾರದಲ್ಲಿ ಭಾಗವಹಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಲ ತುಂಬುವ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಬುದ್ದಿ ಕಲಿಸಬೇಕು’ ಎಂದು ಕಿವಿಮಾತು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯೋಗಾರಮೇಶ್ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್ ಖಾಲಿ ಮನೆಯಂತಾಗಿದೆ. ಕೆಲವೇ ದಿನಗಳಲ್ಲಿ ಅಲ್ಲಿನ ಶಾಸಕರು ಬಿಜೆಪಿ ಅಥವಾ ಜೆಡಿಎಸ್‌ಗೆ ಸೇರುವುದು ಖಚಿತ’ ಎಂದು ಅಭಿಪ್ರಾಯಪಟ್ಟರು.

‘25 ವರ್ಷಗಳಿಂದ ಜಿಲ್ಲೆಯನ್ನು ಹಿಡಿತದಲ್ಲಿಟ್ಟುಕೊಂಡಿರುವ ಸಚಿವ ರೇವಣ್ಣ ಅವರಿಂದ ಅಭಿವೃದ್ಧಿ ನಿರೀಕ್ಷಿಸುವುದು ಮೂರ್ಖತನವಾಗುತ್ತದೆ. ಪ್ರಚಾರಕ್ಕಾಗಿ ವಿವಿಧ ಯೋಜನೆಗಳನ್ನು ಘೋಷಿಸುವ ಅವರು ಯಾವುದನ್ನೂ ಕಾರ್ಯಗತಗೊಳಿಸುವುದಿಲ್ಲ. ಜೆಡಿಎಸ್‌ನ ಕುಟುಂಬ ರಾಜಕಾರಣದಿಂದ ಜಿಲ್ಲೆಯ ಜನ ಬೇಸತ್ತಿದ್ದಾರೆ’ ಎಂದು ಟೀಕಿಸಿದರು.

‘ರೇವಣ್ಣ ಅವರ ಕಣ್ಣಿಗೆ ಹೊಳೆನರಸೀಪುರ ಬಿಟ್ಟು ಬೇರೆ ತಾಲ್ಲೂಕುಗಳು ಕಾಣಿಸುತ್ತಿಲ್ಲ. ಆಲೂಗೆಡ್ಡೆ ಬೆಳೆ ಹಾನಿ, ಕಾಡಾನೆ ಸಮಸ್ಯೆಯಿಂದ ಜನ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರೂ ಅದರ ಬಗ್ಗೆ ಯೋಚನೆ ಮಾಡುತ್ತಿಲ್ಲ. ಪಕ್ಷದ ಗುತ್ತಿಗೆದಾರರ ಹಿತಕ್ಕಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿಸಿಕೊಳ್ಳುತ್ತಿದ್ದಾರೆ ಹೊರತು ಜನಸಾಮಾನ್ಯರ ಏಳಿಗೆಗಾಗಿ ಅಲ್ಲ’ ಎಂದು ಆರೋಪಿಸಿದರು.

ಮುಖಂಡರಾದ ಬಿ.ಆರ್.ಗುರುದೇವ್, ಬಿ.ವಿ.ಕರಿಗೌಡ, ಬಿ.ಎಚ್.ರೇಣುಕುಮಾರ್, ಮೈಸೂರು ವಿಭಾಗ ಮುಖ್ಯಸ್ಥ ಕೃಷ್ಣಾಜಿ, ನಾರಾಯಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.