ಹಳೇಬೀಡು: ಮಳೆ ಹೊಡೆತಕ್ಕೆ ಈ ಭಾಗದ ತರಕಾರಿ ಬೆಳೆಗೆ ಹಾನಿಯಾಗಿದ್ದು, ಟೊಮೆಟೊ ಹಾಗೂ ಎಲೆಕೋಸು ಕೇಳುವವರೇ ಇಲ್ಲದಂತಾಗಿದೆ. ಟೊಮೆಟೊ ಬೆಳೆಯನ್ನು ರೈತರು ರಸ್ತೆಗೆ ಚೆಲ್ಲುತ್ತಿದ್ದಾರೆ.
ಮೋಡ ಕವಿದ ವಾತಾವರಣ, ತುಂತುರು ಮಳೆಯ ಕಾರಣದಿಂದ ಟೊಮೆಟೊ ಗುಣಮಟ್ಟ ಇಲ್ಲದಂತಾಗಿದೆ. ಬೆಲೆ ಇದ್ದರೂ ಖರೀದಿಸಲು ವರ್ತಕರು ಬರುತ್ತಿಲ್ಲ. ಮಾರುಕಟ್ಟೆಗೆ ಟೊಮೆಟೊ ಪೂರೈಸಲೂ ಸಾಧ್ಯವಾಗುತ್ತಿಲ್ಲ.
‘ಹಲವೆಡೆ ಹಣ್ಣಿನ ಮೇಲೆ ಚುಕ್ಕೆ ಮೂಡಿದೆ. ದೂರದ ಮಾರುಕಟ್ಟೆಗೆ ತಲುಪುವ ಹೊತ್ತಿಗೆ ಕೊಳೆತಿರುತ್ತದೆ. ಇಳುವರಿ ಹೆಚ್ಚಿದ್ದರೂ ಆದಾಯ ಸಿಗುತ್ತಿಲ್ಲ’ ಎಂದು ರೈತ ಉಮೇಶ್ ಬೇಸರ ವ್ಯಕ್ತಪಡಿಸಿದರು.
‘ತಾಲ್ಲೂಕಿನಲ್ಲಿ 400 ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದೆ. 25 ಕೆ.ಜಿ. ಟೊಮೆಟೊಗೆ ಮಾರುಕಟ್ಟೆಯಲ್ಲಿ ₹600ರಿಂದ ₹700 ದರವಿದೆ. ಆದರೆ ತಾಲ್ಲೂಕಿನ ಟೊಮೆಟೊ ₹200 ರಂತೆ ಮಾರಾಟವಾಗುತ್ತಿದೆ. ಈ ದರದಿಂದ ಖರ್ಚು –ವೆಚ್ಚ ನಿಭಾಯಿಸುವುದು ಅಸಾಧ್ಯ. ಮಾರಾಟವಾಗದೆ ಉಳಿದ ಬೆಳೆಯನ್ನು ವಾಪಸು ತರುವುದೂ ಕಷ್ಟ. ಎಲ್ಲಾದರೂ ಸುರಿಯಬೇಕಷ್ಟೆ’ ಎಂಬುದು ಬೆಳೆಗಾರ ಮಾಯಗೊಂಡನಹಳ್ಳಿ ಸತೀಶ್ ಅವರ ಅಸಹಾಯಕತೆ.
‘ಮಳೆಯಿಂದ ಎಲೆಕೋಸಿನ ಗುಣಮಟ್ಟವೂ ಕುಸಿದಿದೆ. ನಗರದ ಮಾರುಕಟ್ಟೆಯಲ್ಲಿ ಎಲೆಕೋಸು ಕೆ.ಜಿಗೆ ₹ 8ರಂತೆ ಮಾರಾಟವಾಗುತ್ತಿದೆ. ಮಾರುಕಟ್ಟೆಗೆ ಸಾಗಿಸಲು ₹4 ಖರ್ಚಾಗುತ್ತದೆ. ಸಾಗಣೆ ವೆಚ್ಚವೂ ದಕ್ಕದ ಪರಿಸ್ಥಿತಿ. ಹೊಲದಲ್ಲಿಯೇ ಖರೀದಿಸಲು ವರ್ತಕರು ಬರುತ್ತಿಲ್ಲ’ ಎಂದು ರೈತ ರವಿಶಂಕರ್ ಅಸಹಾಯಕತೆ ವ್ಯಕ್ತಪಡಿಸಿದರು.
‘ಹೊಲದಲ್ಲಿ ಎಲೆಕೋಸಿನ ಜೊತೆ ಗಿಡ, ಕಂಟಿ ಬೆಳೆಯುತ್ತಿವೆ. ಸಾಕಷ್ಟು ಜಮೀನುಗಳಲ್ಲಿ ಜಾನುವಾರು ಮೇಯಲು ಬಿಡಲಾಗಿದೆ’ ಎಂದರು.
ಬೆಳೆಗೆ ಹಾಕಿದ ಬಂಡವಾಳವೂ ಸಿಗದಂತಾದ ರೈತರು ಮಳೆಯಿಂದ ಎಲೆಕೋಸಿನ ಪದರಗಳ ಮೇಲೆ ರಂಧ್ರ ಉತ್ತಮ ಫಸಲಿದ್ದರೂ ಮಾರುಕಟ್ಟೆಯಲ್ಲಿ ಸಿಗದ ಬೆಲೆ
ಎಲೆಕೋಸು ಕಟಾವು ಆಗದೇ ಉಳಿದರೆ ಅದನ್ನು ತೆಗೆದು ಮುಂದಿನ ಬೆಳೆಗೆ ಸಿದ್ದ ಮಾಡುವುದಕ್ಕೂ ಖರ್ಚು ಬರುತ್ತದೆ. ಆದಾಯಕ್ಕಿಂತ ರೈತರಿಗೆ ನಷ್ಟ ಹೆಚ್ಚಾಗಿದೆಈಶ್ವರಪ್ಪ ಬಸ್ತಿಹಳ್ಳಿ ರೈತ
ಟೊಮೆಟೊದಲ್ಲಿ ಹುಳಿ ಅಂಶ ಇರುವುದರಿಂದ ಹೊಲದಲ್ಲಿ ಉಳಿಸಿ ಕಾಂಪೋಸ್ಟ್ ಮಾಡುವಂತಿಲ್ಲ. ಟೊಮೆಟೊ ಹಣ್ಣನ್ನು ಹೊರ ಸಾಗಿಸಲೇಬೇಕುಸುರೇಶ್ ಹಳೇಬೀಡಿನ ಟೊಮೆಟೊ ಬೆಳೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.