ADVERTISEMENT

ಹಾಸನ: ಮನಸ್ಸಾಕ್ಷಿ ಮದುವೆನೇ ಸುಖವೆಂದ ವಧು–ವರ

ಪ್ರಮಾಣ ವಚನದ ಮೂಲಕ ದಾಂಪತ್ಯಕ್ಕೆ ಕಾಲಿಟ್ಟ ವೀಕ್ಷಿತಾ–ಲೋಕಕಿರಣ್‌

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 13:43 IST
Last Updated 14 ಜೂನ್ 2025, 13:43 IST
ಹಾಸನದಲ್ಲಿ ನಡೆದ ಮನಸ್ಸಾಕ್ಷಿ ಮದುವೆಯಲ್ಲಿ ವಧು–ವರರಿಗೆ ಲೇಖಕಿ ರೂಪ ಹಾಸನ ಶುಭ ಹಾರೈಸಿದರು.
ಹಾಸನದಲ್ಲಿ ನಡೆದ ಮನಸ್ಸಾಕ್ಷಿ ಮದುವೆಯಲ್ಲಿ ವಧು–ವರರಿಗೆ ಲೇಖಕಿ ರೂಪ ಹಾಸನ ಶುಭ ಹಾರೈಸಿದರು.   

ಹಾಸನ: ಇಲ್ಲಿನ ಪಾಲಿಕಾ ಕನ್ವೆನ್ಷನ್ ಹಾಲ್‌ನಲ್ಲಿ ಜೂನ್‌ 12 ರಂದು ನಡೆದ ಅಂತರ್ಜಾತಿ ಸರಳ ವಿವಾಹ ಸಮಾರಂಭದಲ್ಲಿ ಮಧು–ವರರು, ‘ಮನಸ್ಸಾಕ್ಷಿ ಮದುವೆ’ ಪ್ರಮಾಣವಚನ ಸ್ವೀಕರಿಸುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಚನ್ನರಾಯಪಟ್ಟಣದ ವೀಕ್ಷಿತಾ ಮತ್ತು ಹಾಸನದ ಲೋಕಕಿರಣ್ ಪರಸ್ಪರ ಪ್ರೀತಿಸುತ್ತಿದ್ದು, ಬಾಳ ಸಂಗಾತಿಗಳಾಗಲು ನಿಶ್ಚಯಿಸಿ, ಅಂತರ್ಜಾತಿ ಸರಳ ವಿವಾಹ ಆಗಲು ತೀರ್ಮಾನಿಸಿದ್ದರು. ಈ ಸರಳ ಮದುವೆ ಸಮಾರಂಭದಲ್ಲಿ ವಧು– ವರರಿಗೆ ಲೇಖಕಿ, ಸಾಮಾಜಿಕ ಕಾರ್ಯಕರ್ತೆ ರೂಪ ಹಾಸನ ಅವರು, ‘ಮನಸ್ಸಾಕ್ಷಿ ಮದುವೆ ಪ್ರಮಾಣ ವಚನ’ ಬೋಧಿಸುವ ಮೂಲಕ ಶುಭ ಹಾರೈಸಿದರು.

ಸಂಸ್ಕೃತಿ ಚಿಂತಕ ಪ್ರೊ. ಕಾಳೇಗೌಡ ನಾಗವಾರ ಮಾತನಾಡಿ, ಇಂತಹ ಸರಳ ಮದುವೆಗಳು ಹೆಚ್ಚಾಗಿ ಎಲ್ಲರಿಗೂ ಮಾದರಿಯಾಗಬೇಕೆ ವಿನಾ, ದುಬಾರಿ ವೆಚ್ಚದ, ಆಡಂಬರದ ಮದುವೆ ಸಮಾರಂಭಗಳು ಸಮಾಜದಲ್ಲಿ ಅಸಮಾನತೆಗಳನ್ನು ಸೃಷ್ಟಿಸುತ್ತವೆ ಎಂದರು.

ADVERTISEMENT

ಸಿಪಿಎಂ ಮುಖಂಡ ಧರ್ಮೇಶ್ ಮಾತನಾಡಿ, ಸಮಾಜದಲ್ಲಿ ಇಂತಹ ಅಂತರ್ಜಾತಿ ವಿವಾಹಗಳು ಹೆಚ್ಚಾಗಬೇಕು. ಪ್ರಜ್ಞಾವಂತರಾದ ನಾವು ಮತ್ತು ಸಮಾಜ ಅವರಿಗೆ ಬೆಂಬಲವಾಗಿ ನಿಂತು, ಅವರಲ್ಲಿ ಬದುಕಿನ ಭರವಸೆ ಮೂಡಿಸಬೇಕಿದೆ. ಸಮಾಜದಲ್ಲಿ ಮಾತ್ರವಲ್ಲದೇ ಕುಟುಂಬದಲ್ಲಿಯೂ ಗಂಡು-ಹೆಣ್ಣು, ಮೇಲು–ಕೀಳೆಂಭ ಭಾವನೆ ಇರದೇ, ಪ್ರಜಾಪ್ರಭುತ್ವ ನೆಲೆಸಬೇಕಿದೆ. ಪ್ರೀತಿಸಿ ಮದುವೆಯಾದವರು ಜವಾಬ್ದಾರಿಯಿಂದ ಮಾದರಿಯಾಗಿ ಬದುಕಬೇಕು ಎಂದು ಸಲಹೆ ನೀಡಿದರು.

ಚಿತ್ರಕಲಾವಿರಾದ ಕೆ.ಟಿ. ಶಿವಪ್ರಸಾದ್, ಮಹದೇವಮ್ಮ ಮತ್ತು ಸರೋಜಮ್ಮ ವೇದಿಕೆಯಲ್ಲಿದ್ದರು. ಲೋಕಕಿರಣ್ ಅವರ ತಂದೆ, ಸಾಹಿತಿ ಹರೀಶ್ ಕಟ್ಟೆ ಬೆಳಗುಲಿ ಸ್ವಾಗತಿಸಿದರು. ಡಿವೈಎಫ್ಐ ಪೃಥ್ವಿ ಎಂ.ಜಿ. ನಿರ್ವಹಿಸಿದರು. ಸಾಹಿತಿ ಜ.ನಾ. ತೇಜಶ್ರಿ, ದಲಿತ ಮುಖಂಡರಾದ ಕೃಷ್ಣದಾಸ್, ಎಂ.ಬಿ. ಪುಟ್ಟಸ್ವಾಮಿ, ಡಾ. ಸೋಮಣ್ಣ ಸೇರಿ ಅನೇಕರು ವಧು-ವರರಿಗೆ ಶುಭ ಹಾರೈಸಿದರು.

ಡಾ.ಹಂಪನಹಳ್ಳಿ ತಿಮ್ಮೇಗೌಡ, ಡಾ. ಜಯಶಂಕರ್ ಹಲಗೂರ್, ಎಚ್.ಕೆ. ಸಂದೇಶ್, ಟಿ.ಆರ್. ವಿಜಯ್ ಕುಮಾರ್ ಸೇರಿ ಹಲವು ಗಣ್ಯರು, ಸಂಬಂಧಿಕರು ಮದುವೆಗೆ ಸಾಕ್ಷಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.