ADVERTISEMENT

ನೀರಿನ ಸಮಸ್ಯೆ: ಮುಂಜಾಗ್ರತೆ ವಹಿಸಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 15:33 IST
Last Updated 6 ಏಪ್ರಿಲ್ 2022, 15:33 IST
ಹಾಸನ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಅಧಿಕಾರಿಗಳ ಸಭೆ ನಡೆಸಿದರು. ಜಿಲ್ಲಾಧಿಕಾರಿ ಗಿರೀಶ್‌, ಸಿಇಒ ಕಾಂತರಾಜ್, ಶಾಸಕ ಕೆ.ಎಸ್.ಲಿಂಗೇಶ್‌, ಎಡಿಸಿ ಕವಿತಾ ರಾಜಾರಾಂ, ಉಪವಿಭಾಗಾಧಿಕಾರಿ ಪ್ರತೀಕ್‌ ಬಯಾಲ್‌ ಇದ್ದಾರೆ
ಹಾಸನ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಅಧಿಕಾರಿಗಳ ಸಭೆ ನಡೆಸಿದರು. ಜಿಲ್ಲಾಧಿಕಾರಿ ಗಿರೀಶ್‌, ಸಿಇಒ ಕಾಂತರಾಜ್, ಶಾಸಕ ಕೆ.ಎಸ್.ಲಿಂಗೇಶ್‌, ಎಡಿಸಿ ಕವಿತಾ ರಾಜಾರಾಂ, ಉಪವಿಭಾಗಾಧಿಕಾರಿ ಪ್ರತೀಕ್‌ ಬಯಾಲ್‌ ಇದ್ದಾರೆ   

ಹಾಸನ: ಬೇಸಿಗೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದು ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ನೀರಿನ ಕೊರತೆ ಇರುವ ಗ್ರಾಮದಲ್ಲಿ ಅಗತ್ಯವಿದ್ದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯಿರಿ, ಕೊಳವೆ ಬಾವಿಗಳಿಗೆ ವಿದ್ಯುತ್ ಪೂರೈಕೆ ಬಾಕಿ ಬಿಲ್ ಇರುವುದನ್ನು ಗ್ರಾಮ ಪಂಚಾಯಿತಿ ವತಿಯಿಂದ ಪಾವತಿಗೆ ಕ್ರಮವಹಿಸಬೇಕು. ಈಗಾಗಲೇ ವಿಫಲವಾಗಿರುವ ಆಗಿರುವ ಕೊಳವೆ ಬಾವಿಗಳಿಂದ ನೀರೆತ್ತುವ ಯಂತ್ರವನ್ನು ಹೊರ ತೆಗೆದು ಅವುಗಳನ್ನು ನೀರು ಲಭ್ಯವಿರುವ ಹೊಸ ಬೋರ್‌ವೆಲ್‌ಗಳಿಗೆ ಅಳವಡಿಸಿ ಎಂದು ತಿಳಿಸಿದರು.

ಸಕಲೇಶಪುರ- ಹಾಸನ ಮಾರ್ಗದ ನಾಲ್ಕು ಪಥದ ಹೆದ್ದಾರಿ ರಸ್ತೆ ಕಾಮಗಾರಿಕಳಪೆಯಿದೆ ಎಂಬ ದೂರುಗಳಿವೆ. ಖುದ್ದು ಸ್ಥಳ ಪರಿಶೀಲನೆ ನಡೆಸುವುದಾಗಿ ತಿಳಿಸಿದ ಸಚಿವರು, ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಆದೇಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ADVERTISEMENT

ಎತ್ತಿನಹೊಳೆ ಯೋಜನೆಯಿಂದ ಪ್ರಾಯೋಗಿಕವಾಗಿ ನೀರು ಹರಿಸುವ ಕೆಲಸವನ್ನು ಪ್ರಸಕ್ತ ವರ್ಷವೇ ಮಾಡಬೇಕು ಮತ್ತು ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದರು.

ಬೇಲೂರು ಕ್ಷೇತ್ರದ ಶಾಸಕ ಕೆ.ಎಸ್. ಲಿಂಗೇಶ್ ಮಾತನಾಡಿ, ‘ಕೆಲ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಶಾಶ್ವತ ನೀರು ಪೂರೈಕೆಗೆ ನೆರವು ನೀಡಬೇಕು. ಈಗಾಗಲೇ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಿರುವ ರೈತರಿಗೆ ಚೀಲದ ಹಣವನ್ನು ಕೊಡಿಸುವಂತೆ’ ಮನವಿ ಸಲ್ಲಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕಾಂತರಾಜು ಮಾತನಾಡಿ, ‘ಕುಡಿಯುವ ನೀರಿನ ಸಮಸ್ಯೆಯನ್ನು ವ್ಯವಸ್ಥಿತವಾಗಿನಿಭಾಯಿಸಲಾಗುತ್ತಿದೆ. ಕೆಲವೆಡೆ ಪೈಪ್‌ಲೈನ್ ಸಮಸ್ಯೆ ಹಾಗೂ ದುರಸ್ತಿಗಳಿಂದ ನೀರು ಪೂರೈಕೆ ವ್ಯತ್ಯಯವಾಗುತ್ತಿದ್ದು, ಸರಿಪಡಿಸಲು ಸೂಚನೆನೀಡಲಾಗಿದೆ’ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ್ ಮಾತನಾಡಿ, ‘ವರ್ಷದಲ್ಲಿ 7 ಮಂದಿ ಆನೆ ದಾಳಿಗೆ ಬಲಿಯಾಗಿದೆ. ರೈಲ್ವೆ ತಡೆಗೋಡೆ ನಿರ್ಮಾಣಕ್ಕೆ ₹49 ಕೋಟಿ ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್. ರವಿ ಮಾತನಾಡಿ, ‘ಜಿಲ್ಲೆಯಲ್ಲಿ28,175 ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಮಾಡಲಾಗಿದೆ. ಇದರಲ್ಲಿ ಡಿಎಪಿ9397 ಮೆಟ್ರಿಕ್ ಟನ್ ಮತ್ತು ಯೂರಿಯ 1800 ಮೆಟ್ರಿಕ್ ಟನ್ ಇದ್ದು. ಮುಂಗಾರಿಗೆ ಬೇಕಾದ ಹೆಸರು, ಉದ್ದು ಬಿತ್ತನೆ ಬೀಜಗಳ ಪೂರೈಕೆಮಾಡಲಾಗುವುದು’ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಯೋಗೀಶ್‌ ಮಾತನಾಡಿ, ಈ ಬಾರಿ ಪಂಜಾಬ್‌ನಲ್ಲಿ ಆಲೂಗಡ್ಡೆ ಬಿತ್ತನೆ ತಡವಾಗಿದ್ದರಿಂದ ಇಳುವರಿ ಶೇ 30ರಷ್ಟು ಕಡಿಮೆ ಆಗಿದೆ. ಇದರಿಂದ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ. ಜೊತೆಗೆ ಲಾರಿಗಳ ಮೂಲಕ ಆಲೂಗಡ್ಡೆ ತರಬೇಕಾಗಿದ್ದು, ಸಾಗಾಟ ವೆಚ್ಚ ಹೆಚ್ಚಲಿದೆ. ಆದ್ದರಿಂದ ಬಿತ್ತನೆ ಆಲೂಗಡ್ಡೆಗೆ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಮೇ ತಿಂಗಳ ಅಂತ್ಯಕ್ಕೆ ಬಿತ್ತನೆಗೆ ಸೂಕ್ತ ಕಾಲ. ಅಂಗಾಂಶ ಕೃಷಿ ಬಿತ್ತನೆ ಆಲೂಗಡ್ಡೆ ಈ ಬಾರಿಯೂ ಬಳಸುತ್ತಿದ್ದು, ಶೇ 5ರಷ್ಟು ಕೊರತೆ ನೀಗಲಿದೆ ಎಂದು ವಿವರಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ, ಉಪ ವಿಭಾಗಾಧಿಕಾರಿಗಳಾದ ಪ್ರತೀಕ್ಬಯಾಲ್, ಬಿ.ಎ. ಜಗದೀಶ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.