ADVERTISEMENT

ಪೊಲೀಸ್‌ ರಕ್ಷಣೆಯಲ್ಲಿ ತುಮಕೂರಿಗೆ ನೀರು

ಹೇಮಾವತಿ ನೀರು ಹರಿಸುತ್ತಿರುವುದಕ್ಕೆ ಶಾಸಕ ಎಚ್‌.ಡಿ. ರೇವಣ್ಣ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 14:08 IST
Last Updated 14 ಮಾರ್ಚ್ 2024, 14:08 IST
ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಶಾಸಕ ಎಚ್‌.ಡಿ. ರೇವಣ್ಣ ಮಾತನಾಡಿದರು
ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಶಾಸಕ ಎಚ್‌.ಡಿ. ರೇವಣ್ಣ ಮಾತನಾಡಿದರು    

ಹಾಸನ: ಜಿಲ್ಲೆಯಲ್ಲಿ ಬರಗಾಲ ತಾಂಡವ ಆಡುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಹಾಸನ ಜಿಲ್ಲೆಯನ್ನು ತಾತ್ಸಾರದಿಂದ ನೋಡುತ್ತಿದೆ. ನೂರಾರು ಸಂಖ್ಯೆಯ ಪೊಲೀಸರ ರಕ್ಷಣೆಯಲ್ಲಿ ತುಮಕೂರಿಗೆ ನೀರು ಬಿಡುವ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಹೇಮಾವತಿ ನದಿಯಿಂದ ತುಮಕೂರಿಗೆ ನೀರು ಬಿಡುತ್ತಿರುವುದನ್ನು ವಿರೋಧಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಜನಪ್ರತಿನಿಧಿಗಳ ಗಮನಕ್ಕೆ ತರದೇ, ನೀರಾವರಿ ಸಲಹಾ ಸಮಿತಿ ಸಭೆ ನಡೆಸದೇ ಏಕಾಏಕಿ ತುಮಕೂರಿಗೆ ನೀರು ಬಿಡುಗಡೆ ಮಾಡಲಾಗಿದೆ. ತುಮಕೂರಿಗೆ 2 ಟಿಎಂಸಿ ನೀರನ್ನು ಬಿಡಲು ಆದೇಶ ಮಾಡಿರುವುದು ಖಂಡನೀಯ ಎಂದು ಹೇಳಿದರು.

ಹಾಸನ ಜಿಲ್ಲೆ ಹಾಗೂ ಕೆ.ಆರ್. ಪೇಟೆ ತಾಲ್ಲೂಕಿನಲ್ಲಿ ಜನ ಜಾನುವಾರುಗಳಿಗೆ ನೀರಿಲ್ಲ. ಇಂತಹ ಸಂದರ್ಭದಲ್ಲಿ ತುಮಕೂರಿಗೆ ನೀರು ಹರಿಸುತ್ತಿದ್ದಾರೆ. ಕೂಡಲೇ ಹಾಸನ ಜಿಲ್ಲೆಯ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ADVERTISEMENT

ಜಿಲ್ಲಾಧಿಕಾರಿಗೆ ಯಾರು ಡ್ರಾಫ್ಟ್ ಮಾಡಿಕೊಟ್ಟಿದ್ದಾರೋ ಗೊತ್ತಿಲ್ಲ. ಪೊಲೀಸರಿಗೆ ದೊಣ್ಣೆ, ಬಡಿಗೆ, ತೆಗೆದುಕೊಳ್ಳಿ ಎಂದು ಡಿಸಿ, ಎಸ್ಪಿ ಹೇಳಿದ್ದಾರೆ. ಯಾರು ಬಡಿಗೆ ತೆಗೆದುಕೊಳ್ಳುತ್ತಾರೆ ನೋಡೋಣ ಎಂದು ಸವಾಲು ಹಾಕಿದರು.

ಶುಕ್ರವಾರ ಸಂಜೆಯೊಳಗೆ ನಮ್ಮ ನಾಲೆಗಳಿಗೆ ನೀರು ಬಿಡದಿದ್ದರೆ ಪ್ರತಿ ತೂಬಿನ ಬಳಿ 500 ಜನರನ್ನು ನಿಲ್ಲಿಸುತ್ತೇವೆ. ಜೆಸಿಬಿ ಮೂಲಕ ತೂಬಿನಿಂದ ನೀರು ಹರಿಸುತ್ತೇವೆ. ಅದು ಯಾರು ಬರುತ್ತಾರೋ ಬರಲಿ ನೋಡೋಣ ಎಂದು ಆಕ್ರೋಶ ಹೊರಹಾಕಿದರು.

ಶುಕ್ರವಾರ ಸಂಜೆ 5 ಗಂಟೆಯವರೆಗೆ ಸಮಯ ಕೊಡುತ್ತೇವೆ. ಅಷ್ಟರಲ್ಲಿ ಹಾಸನ ಜಿಲ್ಲೆಗೂ ನೀರು ಹರಿಸಬೇಕು. ಇಲ್ಲವಾದರೆ ಜಿಲ್ಲೆಯಲ್ಲಿ ಏನಾದರೂ ಅನಾಹುತವಾದರೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ನೇರ ಹೊಣೆ ಎಂದರು.

ಅಧಿಕಾರಿಗಳ ಬೇಜವಾಬ್ದಾರಿಯಿಂದ ಹಿಂದೆ ದೊಡ್ಡಹಳ್ಳಿಯಲ್ಲಿ ಗೋಲಿಬಾರ್ ಆಗಿತ್ತು. ಹೊಳೆನರಸೀಪುರದಲ್ಲಿ ಲಾಠಿ ಪ್ರಹಾರ ನಡೆದು ಆಗಿನ ಎಸ್ಪಿಗೆ 10 ವರ್ಷ ಜಾಮೀನು ಸಿಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವೇಗೌಡರು ಇರಲಿಲ್ಲ ಎಂದರೆ ತುಮಕೂರಿಗೆ ನೀರು ಹರಿಯುತ್ತಿರಲಿಲ್ಲ. ತುಮಕೂರಿಗೆ ನೀರು ಹರಿಸಲು ಜಿಲ್ಲೆಯ ರೈತರು ಜಮೀನು ಕಳೆದುಕೊಂಡಿದ್ದಾರೆ. ಸಲಹಾ ಸಮಿತಿ ಸಭೆ ನಡೆಸದೇ ನೀರು ಬಿಟ್ಟಿದ್ದು ಇವರಿಗೆ ನಾಚಿಕೆಯಾಗಬೇಕು. ನಮಗೆ ನೀರು ಬಿಡದಿದ್ದರೆ ಜಿಲ್ಲೆಯಲ್ಲಿ ದಂಗೆ ಹೇಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಾಸಕ ಸಿ.ಎನ್‌. ಬಾಲಕೃಷ್ಣ ಮಾತನಾಡಿ, ಹೇಮಾವತಿ ಜಲಾಶಯದಿಂದ ಏಕಾಏಕಿ ತುಮಕೂರಿಗೆ ನೀರು ಹರಿಸಿರುವುದು ಸರಿಯಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ತಾರತಮ್ಯ ತೋರಿದ್ದು, ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಕರೆಯದೇ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದು, ಇಂತಹ ಸಂದರ್ಭದಲ್ಲಿ ತುಮಕೂರಿಗೆ ಎರಡು ಟಿಎಂಸಿ ನೀರು ಬಿಡಲು ಕ್ರಮ ಕೈಗೊಂಡಿದ್ದಾರೆ. ಈಗಾಗಲೇ ಮೂರುವರೆ ಸಾವಿರ ಕ್ಯುಸೆಕ್‌ ನೀರು ಹರಿಸಲಾಗಿದ್ದು, ನಿತ್ಯ 1,500 ಕೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ. ಎರಡು ಟಿಎಂಸಿ ನೀರು ತುಮಕೂರಿಗೆ ಬಿಡುವುದಾದರೆ 18 ದಿನ ನೀರು ಹರಿಸಬೇಕಾಗುತ್ತದೆ. ಹೇಮಾವತಿ ಜಲಾಶಯದಲ್ಲಿ ಸದ್ಯ ಕೇವಲ 8 ಟಿಎಂಸಿ ಮಾತ್ರ ಬಳಕೆಗೆ ಬರಲಿದೆ. ಕುಡಿಯುವ ನೀರಿನ ಲಭ್ಯತೆಗೆ 4.5 ಟಿಎಂಸಿ ಉಳಿಸಿಕೊಂಡು ಎರಡು ಟಿಎಂಸಿಯನ್ನು ಜಿಲ್ಲೆಯ ಎಲ್ಲ ನಾಲೆಗಳಿಗೂ ಹರಿಸುವ ಮೂಲಕ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ಶಾಸಕ ಸ್ವರೂಪ್‌ ಪ್ರಕಾಶ್‌, ಜೆಡಿಎಸ್ ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಎಸ್. ದೇವೇಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಘು ಗೌಡ, ಶಂಕರ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಜೆಡಿಎಸ್‌ ಪ್ರತಿಭಟನೆ ಸಂದರ್ಭದಲ್ಲಿ ಹಾಸನದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು

ಹಿಂದೆ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದರು. ಈಗ ಕಾಂಗ್ರೆಸ್ ಸರ್ಕಾರದಲ್ಲಿ ಹಾಸನ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಾರೆ

-ಎಚ್‌.ಡಿ. ರೇವಣ್ಣ ಶಾಸಕ

ನೀರು ಹರಿಸುವ ನಾಲೆಗಳ ಪಕ್ಕದಲ್ಲಿ ಸುಮಾರು 400 ಪೊಲೀಸರನ್ನು ನಿಯೋಜಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೀರು ಹರಿಸುವ ಅಗತ್ಯ ಏನಿತ್ತು?

- ಪ್ರಜ್ವಲ್‌ ರೇವಣ್ಣ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.