ADVERTISEMENT

ಪ್ರತಿ ಮಂಗಳವಾರ ಇ–ಶ್ರಮ್‌ ಕಾರ್ಡ್‌ ವಿತರಿಸಿ

ಜಿಲ್ಲಾ ಮಟ್ಟದ ಜನಸ್ಪಂದನ ಸಭೆಯಲ್ಲಿ ಜನರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ಲತಾಕುಮಾರಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 4:20 IST
Last Updated 17 ಆಗಸ್ಟ್ 2025, 4:20 IST
ಹಾಸನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಜನರ ಅಹವಾಲು ಆಲಿಸಿದರು.
ಹಾಸನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ಜನರ ಅಹವಾಲು ಆಲಿಸಿದರು.   

ಹಾಸನ: ಶನಿವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಜನಸ್ಪಂದನ ಸಭೆಯಲ್ಲಿ ಜಮೀನು ದಾಖಲೆಗಳ ದುರಸ್ತಿ, ಹಕ್ಕುಪತ್ರ ವಿತರಣೆ, ಸಾಗುವಳಿ ಚೀಟಿ, ಆರ್.ಟಿ.ಸಿ. ತಿದ್ದುಪಡಿ, ಒತ್ತುವರಿ ತೆರವು, ಜಮೀನಿಗೆ ಓಡಾಡಲು ರಸ್ತೆ, ಪೋಡಿ ದುರಸ್ತಿ, ಬಸ್ ಸೌಲಭ್ಯ, ಚೆಕ್ ಬಂದಿ ತಿದ್ದುಪಡಿ, ನಿವೇಶನ ಹಂಚಿಕೆ, ಭೂ ಪರಿಹಾರ ಸೇರಿದಂತೆ ಹಲವಾರು ಮನವಿಗಳು ಸಲ್ಲಿಕೆಯಾದವು.

ಅಹವಾಲು ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎಸ್‌. ಲತಾಕುಮಾರಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಜುಲೈನಲ್ಲಿ ಸ್ವೀಕೃತಗೊಂಡಿದ್ದ ಅರ್ಜಿಗಳಲ್ಲಿ 20 ಅರ್ಜಿಗಳು ವಿಲೇವಾರಿಗೆ ಬಾಕಿ ಇದ್ದು, ಇವುಗಳನ್ನು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಸೂಚಿಸಿದರು.

ಕಾರ್ಮಿಕ ಇಲಾಖೆ ಪ್ರತಿ ಮಂಗಳವಾರ ಕಾರ್ಮಿಕರಿಗೆ ಇ-ಶ್ರಮ್ ಕಾರ್ಡ್ ವಿತರಣೆ ಮಾಡಿ ಪ್ರತಿವಾರ ವರದಿ ನೀಡಬೇಕು. ಇವರೊಂದಿಗೆ ಲೀಡ್ ಬ್ಯಾಂಕ್ ಅವರು ಸೇರಿಕೊಂಡು ಅಟಲ್ ಪಿಂಚಣಿ ಯೋಜನೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಪ್ರತಿ ಮಂಗಳವಾರ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಕಾರ್ಮಿಕರ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿದರು.

ADVERTISEMENT

ಪ್ರತಿವಾರ ಒಂದು ಗ್ರಾಮಕ್ಕೆ ಭೇಟಿ ನೀಡಬೇಕು ಎಂದ ಅವರು, ನಿರಂತರ ಜ್ಯೋತಿ ಯೋಜನೆಯಡಿ ಒಂಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮನವಿ ಬಂದ ಹಿನ್ನೆಲೆಯಲ್ಲಿ ಕ್ರಮವಹಿಸುವಂತೆ ಸೆಸ್ಕ್‌ ಅಧಿಕಾರಿಗಳಿಗೆ ತಿಳಿಸಿದರು.

ಅರಕಲಗೂಡು ತಾಲ್ಲೂಕಿನ ರಾಜ್ಯ ಹೆದ್ದಾರಿ 85ರಲ್ಲಿ 150 ಮೀಟರ್ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಬೇಕು. ಜೊತೆಗೆ ರಸ್ತೆ ಅಭಿವೃದ್ಧಿ ಸಮಯದಲ್ಲಿ ತೆರವುಗೊಳಿಸಿರುವ ಬಸ್ ನಿಲ್ದಾಣವನ್ನು ಪುನಃ ಮರು ನಿರ್ಮಾಣಕ್ಕೆ ಸಾರ್ವಜನಿಕರು ಮನವಿ ಮಾಡಿದರು.

ಬಿ.ಕಾಟೀಹಳ್ಳಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಸೈನಿಕರ ಕುಟುಂಬಗಳು ವಾಸವಿದ್ದು, ಉದ್ಯಾನಕ್ಕೆ ಮೀಸಲಿಟ್ಟಿರುವ ಒಂದು ಎಕರೆ ಜಾಗವನ್ನು ಉಳಿಸಿ, ಅಭಿವೃದ್ಧಿಪಡಿಸುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಅವರು, ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಮಹಾನಗರಪಾಲಿಕೆ ಆಯುಕ್ತರು ಭೇಟಿ ನೀಡಿ ವರದಿ ನೀಡುವಂತೆ ಸೂಚಿಸಿದರು.

ಸಾರ್ವಜನಿಕರು ಮಾರುಕಟ್ಟೆ ಮತ್ತು ಸಂತೆಗಳಿಗೆ ಹೋಗುವ ಸಂದರ್ಭದಲ್ಲಿ ಬಟ್ಟೆ, ಕೈಚೀಲ ತೆಗೆದುಕೊಂಡು ಹೋಗಲು ಜನರಲ್ಲಿ ಜಾಗೃತಿ ಮೂಡಿಸುವಂತೆ ಸೂಚಿಸಿದ ಅವರು, ಪ್ಲಾಸ್ಟಿಕ್ ಬಳಕೆ ಮಾಡದಂತೆ ಎಚ್ಚರಿಕೆ ವಹಿಸಿ ಎಂದು ನಿರ್ದೇಶನ ನೀಡಿದರು.

ಅಂಗನವಾಡಿ ಸಹಾಯಕಿಯರು ಹಾಗೂ ಕಾರ್ಯಕರ್ತೆಯರ ಆಯ್ಕೆಗೆ ಸಂಬಂಧಿಸಿದಂತೆ ಬಂದಿರುವ ಆಕ್ಷೇಪಗಳನ್ನು ಸರಿಯಾಗಿ ಪರಿಶೀಲಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಸ್ಮಶಾನದ ಜಾಗವನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಎಲ್ಲ ತಹಶೀಲ್ದಾರ್‌ಗಳು ಆಂದೋಲನದ ರೀತಿಯಲ್ಲಿ ಒತ್ತುವರಿ ಆಗದಂತೆ ಬೇಲಿ ನಿರ್ಮಿಸಿ, ಗೇಟ್ ಅಳವಡಿಸಬೇಕು. ಜೊತೆಗೆ ಕೊಳವೆಬಾವಿ ಕೊರೆಸಿ, ರಸ್ತೆಸಂಪರ್ಕ ಕಲ್ಪಿಸಿ ಎಂದು ತಿಳಿಸಿದರು.

ಸ್ಮಶಾನ ಜಾಗದ ಸುತ್ತ ಹಣ್ಣಿನ ಗಿಡಮರಗಳನ್ನು ಬೆಳೆಸಿ. ಮುಂದಿನ ದಿನಗಳಲ್ಲಿ ಜೈವಿಕ ಬೇಲಿ ನಿರ್ಮಾಣವಾಗುತ್ತದೆ. ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಮಾದಿಹಳ್ಳಿಯ ದೊಡ್ಡ ಬೆಟ್ಟದ ಬಳಿಯಲ್ಲಿ ಎರಡು ಆನೆಗಳು ನಿತ್ಯ ಸಂಚಾರ ಮಾಡುತ್ತಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಅರಣ್ಯ ಇಲಾಖೆಯಿಂದ 12 ಎಕರೆಯಲ್ಲಿ ಬೇಲಿ ನಿರ್ಮಾಣ ಮಾಡಿದ್ದಾರೆ. ಅದಕ್ಕೆ ಗೇಟ್ ಅಳವಡಿಸುವಂತೆ ಅಲ್ಲಿನ ಗ್ರಾಮಸ್ಥರು ಮನವಿ ಮಾಡಿದರು.

ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರದ 20 ಪ್ಯಾಕ್‍ಗಳನ್ನು ಕೆರೆಯ ದಡದಲ್ಲಿ ಹಾಕಿರುತ್ತಾರೆ. ಆ ಪ್ಯಾಕ್ ಮೇಲೆ ತಯಾರಾದ ಮತ್ತು ಬಳಕೆ ಮಾಡುವ ಕೊನೆಯ ದಿನಾಂಕ ನಮೂದಿಸಿಲ್ಲ ಎಂಬ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಪರಿಶೀಲಿಸಿ ವರದಿ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.

ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್, ಉಪ ವಿಭಾಗಾಧಿಕಾರಿಗಳಾದ ಮಾರುತಿ, ರಾಜೇಶ್, ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

ಹಾಸನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಜನಸ್ಪಂದನ ಸಭೆಯಲ್ಲಿ ಅಹವಾಲು ಸಲ್ಲಿಸಲು ಸರದಿಯಲ್ಲಿ ಕುಳಿತಿದ್ದ ಜನರು 

ಪರಿಸರಸ್ನೇಹಿ ಮೂರ್ತಿಗಳ ಬಳಕೆ: ಕ್ರಮ ಗೌರಿ-ಗಣೇಶ ಹಬ್ಬಗಳ ಸಂದರ್ಭದಲ್ಲಿ ಪರಿಸರ ಹಾಳು ಮಾಡದಂತೆ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಪರಿಸರಸ್ನೇಹಿ ಮೂರ್ತಿಗಳನ್ನು ಪೂಜೆಗೆ ಬಳಕೆ ಮಾಡುವಂತೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಲತಾಕುಮಾರಿ ಅಧಿಕಾರಿಗಳಿಗೆ ತಿಳಿಸಿದರು. ನಗರಕ್ಕೆ ಪಿಒಪಿ ಮೂರ್ತಿಗಳು ಪ್ರವೇಶ ಆಗದಂತೆ ನೋಡಿಕೊಳ್ಳಬೇಕು. ಪರಿಸರಸ್ನೇಹಿ ಮೂರ್ತಿಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು. ರಾಸಾಯನಿಕ ಪದಾರ್ಥಗಳನ್ನು ಬಳಸಿ ತಯಾರಿಸಿದ ಮೂರ್ತಿಗಳ ಮಾರಾಟ ಆಗದಂತೆ ತಡೆಯುವುದರ ಜೊತೆಗೆ ಎಲ್ಲಿಯಾದರೂ ಕಂಡು ಬಂದಲ್ಲಿ ಜಪ್ತಿ ಮಾಡಿ ವಿಲೇವಾರಿ ಮಾಡುವಂತೆ ಸೂಚಿಸಿದರು. ನೈಸರ್ಗಿಕ ಬಣ್ಣಗಳನ್ನು ಬಳಸಿ ತಯಾರಿಸುವ ಮೂರ್ತಿಗಳನ್ನು ಮಾತ್ರ ಬಳಕೆ ಮಾಡುವಂತೆ ಸಾರ್ವಜನಿಕರಲ್ಲಿ ತಿಳಿವಳಿಕೆ ನೀಡುವಂತೆ ಸೂಚಿಸಿದರು.

ಶೌಚಾಲಯ ನಿರ್ವಹಣೆ ಸೂಚನೆ

ನಗರದಲ್ಲಿ ಏಳು ಶೌಚಾಲಯಗಳಿದ್ದು ಸಾರ್ವಜನಿಕರಿಂದ ಬಳಕೆ ಆಗುತ್ತಿಲ್ಲ ಎಂಬ ದೂರಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಲತಾಕುಮಾರಿ ಇವುಗಳ ನಿರ್ವಹಣೆ ಮೇಲುಸ್ತುವಾರಿ ಮಾಡಲು ತಲಾ ಒಬ್ಬರು ಅಧಿಕಾರಿಗಳನ್ನು ನೇಮಕ ಮಾಡುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು. ದೇವಾಲಯದ ಬಳಿ ಶೌಚಾಲಯ ಕಡ್ಡಾಯವಾಗಿ ಇರಬೇಕು. ಜೊತೆಗೆ ಉತ್ತಮವಾಗಿ ನಿರ್ವಹಣೆ ಆಗುವಂತೆ ತಹಶೀಲ್ದಾರ್‌ಗಳು ನಿಗಾ ವಹಿಸಬೇಕು ಎಂದರು. ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಸಾರ್ವಜನಿಕರ ಬಳಕೆಗೆ ಒಂದು ಶೌಚಾಲಯ ನಿರ್ಮಾಣಕ್ಕೆ ಮನವಿ ಮಾಡಿದ್ದು ಈ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಕ್ರಮ ಕೈಗೊಳ್ಳಬೇಕು. ಮುಂದಿನ ಮಂಗಳವಾರ ನಗರ ವೀಕ್ಷಣೆ ಸಂದರ್ಭದಲ್ಲಿ ಏಳು ಶೌಚಾಲಯಗಳನ್ನು ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.