ಹೆತ್ತೂರು: ಕಾಡಾನೆ ದಾಳಿಯಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾಗೂ ಆಸ್ತಿ ಹಾನಿ ಆಗುತ್ತಿದ್ದು, ಆನೆಗಳ ಹಾವಳಿಯಿಂದ ಮುಕ್ತಿ ನೀಡುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಯಸಳೂರು, ಹೆತ್ತೂರು ಹೋಬಳಿಯ ಭಾಗಗಳಲ್ಲಿ ಒಂದು ವಾರದಿಂದ ನಿರಂತರವಾಗಿ ಕಾಡಾನೆ ಹಾವಳಿ ನಡೆಯುತ್ತಿದೆ. ಸಮೀಪದ ಹಳ್ಳಿಬಯಲು ಗ್ರಾಮದಲ್ಲಿ ದಿನೇಶ್, ಮಲ್ಲಪ್ಪ ಅವರ ಕಾಫಿ ತೋಟಕ್ಕೆ ಸುಮಾರು 3 ಕಾಡಾನೆಗಳು ಪ್ರತ್ಯೇಕ ಗುಂಪಿನಲ್ಲಿ ಬಂದು ದಾಳಿ ಮಾಡಿವೆ. ಕಾಫಿ, ಬಾಳೆ, ಬವುನೆ, ಏಲಕ್ಕಿ, ತೆಂಗಿನ ಮರಗಳನ್ನು ಮುರಿದಿವೆ. ಪೈಪ್‌ಗಳು, ಬ್ಯಾರೆಲ್‌ಗಳನ್ನು ತುಳಿದು ನಾಶ ಮಾಡಿವೆ.
ವಳಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಚನ್ನಯ್ಯ, ಸುನಿತಾ, ಹೇಮಶೇಖರಯ್ಯ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ರೈತರ ಜಮೀನುಗಳಿಗೆ ಒಂದು ತಿಂಗಳಿಂದ ಆನೆಗಳು ದಾಳಿ ಮಾಡುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಹೋಬಳಿಯ ಕೊಡಗು ಗಡಿ ಗ್ರಾಮ ತಂಬಲಗೇರಿಯಲ್ಲಿ 5ಕ್ಕೂ ಹೆಚ್ಚು ಕಾಡಾನೆಗಳು ಕೃಷ್ಣಮೂರ್ತಿ ಎಸ್ಟೇಟ್, ಸುಬ್ರಹ್ಮಣ್ಯ, ಧರ್ಮ ರಾಜ್ ಎಂಬುವವರ ಕಾಫಿ ತೋಟಗಳಲ್ಲಿ ಕಾಫಿ, ಏಲಕ್ಕಿ, ಅಡಿಕೆ ಗಿಡಗಳನ್ನು ನಾಶಪಡಿಸಿವೆ. ಇದೇ ಗ್ರಾಮದ ವಿನೋದ್, ಮಧು ಎಂಬುವವರ ಭತ್ತದ ಗದ್ದೆ ಹಾಗೂ ತೋಟದ ಕೆರೆಯನ್ನು ಪೂರ್ಣ ನಾಶಪಡಿಸಿವೆ.
ಯಸಳೂರು ಹೋಬಳಿ ಉಚ್ಚಂಗಿ ಪಂಚಾಯಿತಿ ವ್ಯಾಪ್ತಿ ಚಿಕ್ಕಂದೂರು, ಬಾಳಕೇರಿ, ದೊಡ್ಡಕುಂದೂರು ಸುತ್ತ ಕಾಡಾನೆಗಳು 15 ದಿನಗಳಿಂದ ಬೀಡು ಬಿಟ್ಟಿದ್ದು, ಕಾಡಾನೆ ಉಪಟಳದಿಂದ ಕಾಫಿ, ಭತ್ತದ ಸಸಿ ಮಡಿ, ಏಲಕ್ಕಿ, ಅಡಿಕೆ, ಬಾಳೆ ಬೆಳೆ ನಾಶ ಮಾಡಿವೆ. ಬೆಳೆ ನಾಶವಾದ ರೈತರಿಗೆ ಕೂಡಲೇ ಪರಿಹಾರ ನೀಡಬೇಕು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಬೇಕು ಎಂದು ಬೆಳೆಗಾರರ ಸಂಘದ ಹೆತ್ತೂರು ಹೋಬಳಿ ಘಟಕದ ಅಧ್ಯಕ್ಷ ದೇವರಾಜ್ ಎಚ್.ಜಿ. ಆಗ್ರಹಿಸಿದ್ದಾರೆ.
ತಿಂಗಳಿಂದ ನಿರಂತರ ದಾಳಿ ಇಡುತ್ತಿರುವ ಕಾಡಾನೆ ಹಿಂಡು ಪ್ರತ್ಯೇಕ ಗುಂಪಿನಲ್ಲಿ ಬರುತ್ತಿರುವ ಕಾಡಾನೆಗಳು: ಜಮೀನಿಗೆ ಲಗ್ಗೆ ಭತ್ತ, ಕಾಫಿ, ಏಲಕ್ಕಿ, ಅಡಿಕೆ ಬೆಳೆಗಳಿಗೆ ಹಾನಿ: ಪರಿಹಾರಕ್ಕೆ ಆಗ್ರಹ
ಕಳೆದೊಂದು ತಿಂಗಳಿನಿಂದ ಈ ಭಾಗದಲ್ಲಿ ಕಾಡಾನೆಗಳು ವಿಪರೀತ ಉಪಟಳ ನೀಡುತ್ತಿದ್ದು ಅರಣ್ಯ ಇಲಾಖೆ ಸಿಬ್ಬಂದಿ ನಷ್ಟವಾಗಿರುವ ಪ್ರದೇಶಕ್ಕೆ ಭೇಟಿ ನೀಡಿಲ್ಲ.ಲೋಕೇಶ್ ತಂಬಲಗೇರಿ ಕೃಷಿಕ
ಸರ್ಕಾರವು ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಭತ್ತ ಬೆಳೆಯುವ ಒಂದು ಎಕರೆ ಗದ್ದೆಗೆ ಪ್ರತಿ ವರ್ಷ ₹ 20 ಸಾವಿರ ಶಾಶ್ವತ ಪರಿಹಾರ ನೀಡಬೇಕು.ಕೆ.ಬಿ. ಗಂಗಾಧರ ಬೆಳೆಗಾರರ ಸಂಘದ ಯಸಳೂರು ಹೋಬಳಿ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.