ADVERTISEMENT

ವಕ್ಫ್ ಆಸ್ತಿ ಒತ್ತುವರಿ ತೆರವಿಗೆ ಒತ್ತಾಯ

ಹೇಮಾವತಿ ಪ್ರತಿಮೆ ಬಳಿ ಮುಸ್ಲಿಮ್ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 13:32 IST
Last Updated 26 ಅಕ್ಟೋಬರ್ 2018, 13:32 IST
ಹಾಸನದ ಹೇಮಾವತಿ ಪ್ರತಿಮೆ ಎದುರು ಮುಸ್ಲಿಮ್ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಹಾಸನದ ಹೇಮಾವತಿ ಪ್ರತಿಮೆ ಎದುರು ಮುಸ್ಲಿಮ್ ಸಂಘಟನೆಗಳು ಪ್ರತಿಭಟನೆ ನಡೆಸಿದವು.   

ಹಾಸನ : ಜಿಲ್ಲೆಯಲ್ಲಿ ವಕ್ಫ್ ಮಂಡಳಿ ಆಸ್ತಿ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸುವಂತೆ ಆಗ್ರಹಿಸಿ ಮುಸ್ಲಿಮ್‌ ಸಂಘಟನೆಗಳು ಶುಕ್ರವಾರ ಹೇಮಾವತಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದವು.

‘ಮಂಡಳಿಗೆ ಸೇರಿದ ಸುಮಾರು ₹ 400 ಕೋಟಿ ಮೌಲ್ಯದ 113 ಎಕರೆ ಜಾಗ ಒತ್ತುವರಿಯಾಗಿದ್ದು, ಕೂಡಲೇ ಅದನ್ನು ತೆರವು ಮಾಡಿಸಿ ವಕ್ಫ್‌ ಮಂಡಳಿಗೆ ಹಸ್ತಾಂತರಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

‘ಜಿಲ್ಲೆಯ ಚನ್ನರಾಯಪಟ್ಟಣ, ಅರಕಲಗೂಡು ಮತ್ತು ಹಾಸನ ತಾಲ್ಲೂಕಿನಲ್ಲಿ ಮಂಡಳಿಯ ಸುಮಾರು ಹತ್ತು ಸಂಸ್ಥೆಗಳಿಗೆ ಸೇರಿದ ಅಂದಾಜು 113 ಎಕರೆ ಭೂಮಿ ಸರ್ಕಾರ ಹಾಗೂ ಖಾಸಗಿ ವ್ಯಕ್ತಿಗಳಿಂದ ಕಬಳಿಕೆಯಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ’ ಎಂದು ಹೇಳಿದರು.

ADVERTISEMENT

‘ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಬೇಕು. ಮಂಡಳಿಗೆ ಆಸ್ತಿಯನ್ನು ಉಳಿಸಿಕೊಡುವ ಮೂಲಕ ನ್ಯಾಯ ಒದಗಿಸಬೇಕು ’ ಎಂದು ಮನವಿ ಮಾಡಿದರು.

ಹಾಸನ ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷ ಸಯ್ಯದ್ ಕಾಸಿಂ, ಗುಜರಾತಿ ಬಾದ್ ಷಾ ದರ್ಗಾದ ಮಾಜಿ ಅಧ್ಯಕ್ಷ ಎಚ್.ವಿ.ಅಮೀರ್ ಜಾನ್, ಸಾಮಾಜಿಕ ಕಾರ್ಯಕರ್ತ ಮೊಹಿದ್ದೀನ್ ಷರೀಫ್, ಮುಖಂಡರಾದ ಬಷೀರ್ ಅಹಮ್ಮದ್, ಆರ್.ಪಿ.ಐ ಮುಸಾವೀರ್ ಪಾಷ, ದಸ್ತಗಿರ್‌ ಶ್ರೀನಗರ, ಮುಬಾಷಿರ್ ಅಹಮ್ಮದ್, ಅಕ್ಮಲ್ ಜಾವಿದ್, ಸಮೀರ್‌ ಅಹಮ್ಮದ್‌, ತೌಫಿಕ್ ಪಾಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.