ಅರಸೀಕೆರೆ: ಮಹಿಳೆ ದುರ್ಬಲಳು ಎನ್ನುತ್ತಿದ್ದ ಕಾಲಘಟ್ಟದಲ್ಲಿ ಮಹಿಳೆ ದುರ್ಬಲ ಅಲ್ಲ, ಪ್ರಬಲಳು ಎಂಬ ಸಂದೇಶವನ್ನು ಜಗತ್ತಿಗೆ ಸಾರಿದ ಅಹಲ್ಯಾಬಾಯಿ ಹೊಳ್ಕರ್ ಸ್ತ್ರೀ ಶಕ್ತಿಯ ಜ್ಯೋತಕ ಎಂದು ಅಹಲ್ಯಾಬಾಯಿ ಹೊಳ್ಕರ್ ಸಂಘದ ಅಧ್ಯಕ್ಷೆ ಶಿಲ್ಪಾ ಚಂದ್ರು ಬಾಣಾವರ ಹೇಳಿದರು.
ಇಲ್ಲಿನ ಸಹಕಾರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಅಹಲ್ಯಾಬಾಯಿ ಹೊಳ್ಕರ್ ಅವರ 300ನೇ ವರ್ಷದ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
ರಾಜಮಾತೆಯಾಗಿದ್ದ ಅಹಲ್ಯಾಬಾಯಿ, ಮಹಿಳೆಯರ ಸಬಲೀಕರಣಕ್ಕೆ ನೀಡಿದ ಕೊಡುಗೆ ಹಾಗೂ ಹಿಂದೂಗಳ ಪವಿತ್ರ ಧಾರ್ಮಿಕ ಯಾತ್ರಾ ಕ್ಷೇತ್ರವಾಗಿರುವ ಕಾಶಿ ದೇವಾಲಯದ ಜೀರ್ಣೋದ್ಧಾರ ಮಾಡಿದ ರೀತಿ ಸೇರಿದಂತೆ ಅವರಲ್ಲಿದ್ದ ಸಾಮಾಜಿಕ ಕಳಕಳಿಗಳು ನಮ್ಮ ಕಣ್ಣ ಮುಂದಿವೆ. ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದೇ ಇದ್ದರೂ ಶತಮಾನಗಳಿಂದ ನಮ್ಮೆಲ್ಲರಿಗೂ ಆದರ್ಶರಾಗಿದ್ದಾರೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷೆ ಕಾವ್ಯಾ ಮಾತನಾಡಿ, ಅಹಲ್ಯಾಬಾಯಿ ಹೊಳ್ಕರ್ ಅವರ ಹೆಸರಿನಲ್ಲಿ ನಾವು ಸ್ಥಾಪಿಸಿಕೊಂಡಿರುವ ಸಹಕಾರ ಸಂಘವು ಕೇವಲ ಹಣದ ವ್ಯವಹಾರ ಮಾಡುತ್ತಿಲ್ಲ. ಅಹಲ್ಯಾಬಾಯಿ ಅವರ ಸಂದೇಶವನ್ನು ಪಾಲಿಸುತ್ತ, ಸಮಾಜದ ಮಹಿಳೆಯರನ್ನ ಸಂಘಟಿಸುವ ಕೆಲಸ ಮಾಡುತ್ತಿದೆ ಎಂದರು.
ಸಹಕಾರ ಸಂಘದ ಗೌರವಾಧ್ಯಕ್ಷೆ ಯಶೋದಮ್ಮ, ನಿರ್ದೇಶಕರಾದ ಯಮುನಾ, ಮೀನಾಕ್ಷಮ್ಮ, ವನಜಾಕ್ಷಿ, ಲಲಿತಮ್ಮ, ನೇತ್ರಾವತಿ, ಚೇತನಾ, ಗೀತಾಮಣಿ, ವಿಶಾಲಾಕ್ಷಿ, ಕಾರ್ಯದರ್ಶಿ ಭಾಗ್ಯಲಕ್ಷ್ಮಿ, ಕುರುಬ ಸಮಾಜದ ಮುಖಂಡರಾದ ಚಂದ್ರು ಬಾಣಾವರ, ವಿಜಯ್ ಕುಮಾರ್, ತಿಮ್ಮೇಗೌಡ ಹಾಗೂ ಹೊಳ್ಕರ್ ಅಭಿಮಾನಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.