ಸಕಲೇಶಪುರ: ಚಂಗಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗನಹಳ್ಳಿಯಲ್ಲಿ ಚರಂಡಿ ನಿರ್ಮಿಸಲು ಜೆಸಿಬಿಯಿಂದ ರಸ್ತೆ ಬಗೆಯುತ್ತಿದ್ದು, ವಾಹನ ಸವಾರರೊಬ್ಬರು ಗುಂಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗ್ರಾಮದ ನಿವಾಸಿ ಪ್ರತಾಪ್ ಗಾಯಗೊಂಡ ಯುವಕ. ಮಳೆಗಾಲದಲ್ಲಿ ಚರಂಡಿ ನಿರ್ಮಿಸಲು ರಸ್ತೆಯುದ್ದಕ್ಕೂ ಮಣ್ಣು ಬಗೆದು ಹೊಂಡ ಮಾಡಿರುವುದೇ ಕಾರಣ ಎಂದು ಆರೋಪಿಸಿ ಗ್ರಾಮಸ್ಥರು ಚಂಗಡಿಹಳ್ಳಿ ಗ್ರಾ.ಪಂ. ಕಚೇರಿ ಮುಂದೆ ಈಚೆಗೆ ದಿಢೀರ್ ಪ್ರತಿಭಟನೆ ನಡೆಸಿದರು. ಬೇಸಿಗೆಯಲ್ಲಿ ಚರಂಡಿ ಕಾಮಗಾರಿ ಮಾಡದೆ, ಸುರಿಯುತ್ತಿರುವ ಮಳೆಯಲ್ಲಿ ಗುತ್ತಿಗೆದಾರ ಚರಂಡಿ ತೋಡಿಸಿದ್ದು, ಅದರ ಮಣ್ಣನ್ನು ರಸ್ತೆಗೆ ಹಾಕಲಾಗಿದೆ.
ಪ್ರತಾಪ್ ಅವರಿಗೆ ತೀವ್ರ ಪೆಟ್ಟುಬಿದ್ದಿದ್ದು, ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಚಿಕಿತ್ಸೆ ಪಡೆಯುತ್ತಿರುವ ಯುವಕನ ಚಿಕಿತ್ಸಾ ವೆಚ್ಚವನ್ನು ಅಧಿಕಾರಿಗಳು ಹಾಗೂ ಗುತ್ತಿಗೆದಾರ ಭರಿಸಬೇಕು. ಮಣ್ಣು ತೆಗೆದು ಗುಂಡಿ ಮಾಡಿರುವ ಚರಂಡಿಯನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಹೇರೂರು ಗ್ರಾಮದ ರೇಣುಕಾ, ಪವನ್, ನಾಗನಹಳ್ಳಿ ಗ್ರಾಮದ ಅಶೋಕ್ ಕುಮಾರ್, ಗಣೇಶ, ಸ್ವಾಗತ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.