ADVERTISEMENT

ಜಿ.ಪಂ ಉಪಾಧ್ಯಕ್ಷರಿಗೆ ಡಿ.ಸಿ ನೋಟಿಸ್‌

ಅಕ್ರಮ ಮರಳು ಸಂಗ್ರಹಕ್ಕೆ ಶಿಫಾರಸು ಆರೋಪ

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 13:11 IST
Last Updated 23 ಜನವರಿ 2019, 13:11 IST
ಸುಪ್ರದೀಪ್ ಯಜಮಾನ್‌
ಸುಪ್ರದೀಪ್ ಯಜಮಾನ್‌   

ಹಾಸನ: ಸಕಲೇಶಪುರ ತಾಲ್ಲೂಕಿನ ಅರೆಕೆರೆಯಲ್ಲಿ ಎತ್ತಿನ ಹೊಳೆ ಯೋಜನೆಗಾಗಿ ಅಕ್ರಮವಾಗಿ ಮರಳು ಸಂಗ್ರಹಿಸಿದ ಪ್ರಕರಣದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸುಪ್ರದೀಪ್ ಯಜಮಾನ್ ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೋಟಿಸ್ ಜಾರಿ ಮಾಡಿದ್ದಾರೆ.

ಜ.10 ರಂದು ₹ 2 ಕೋಟಿ ಮೌಲ್ಯದ ಮರಳನ್ನು ಜಿಲ್ಲಾಧಿಕಾರಿ ನೇತೃತ್ವದ ಮರಳು ಟಾಸ್ಕ್ ಫೋರ್ಸ್ ತಂಡ ವಶಕ್ಕೆ ಪಡೆದಿತ್ತು. ಈ ಸಂಬಂಧ ಓಷಿಯನ್ ಕನ್ ಸ್ಟ್ರಕ್ಷನ್ ಕಂಪೆನಿ ವಿರುದ್ಧ ಪ್ರಕರಣ ದಾಖಲಾಗಿತ್ತು.

ಸುಪ್ರದೀಪ್‌ ಯಜಮಾನ್ ಅವರೇ ಮರಳು ಸಂಗ್ರಹಕ್ಕೆ ಶಿಫಾರಸು ಮಾಡಿದ್ದರು ಎಂದು ಗುತ್ತಿಗೆದಾರ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅವರಿಗೆ ರೋಹಿಣಿ ನೋಟಿಸ್ ನೀಡಿದ್ದಾರೆ.

ADVERTISEMENT

‘ಪಂಚಾಯತ್ ರಾಜ್ ಕಾಯ್ದೆ ಕಲಂ 175 ರನ್ವಯ ಅಪಕೀರ್ತಿಕರ ನಡತೆ ಹೊಂದಿದ್ದು, ನಿಮ್ಮ ಹುದ್ದೆಗೆ ತರವಲ್ಲದ ರೀತಿ ನಡೆದುಕೊಂಡಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ನಿಮ್ಮ ವಿರುದ್ಧ ಏಕೆ ಕ್ರಮ ವಹಿಸಬಾರದು’ ಎಂದು ತಕ್ಷಣ ಸಮಜಾಯಿಷಿ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

‘ಮರಳು ಸಂಗ್ರಹಕ್ಕೆ ನಾನು ಶಿಫಾರಸು ಮಾಡಿರುವ ಬಗ್ಗೆ ದಾಖಲೆ ಇದ್ದರೆ ನೀಡಲಿ. ದಾಳಿ ವೇಳೆ ಓಷಿಯನ್‌ ಕಂಪನಿಯವರು ನನ್ನ ಹೆಸರು ಹೇಳಿದ್ದಾರೋ, ಇಲ್ಲವೋ ಎಂಬುದು ಗೊತ್ತಿಲ್ಲ. ಒಂದು ವೇಳೆ ಹೇಳಿದ್ದರೆ ಯಾವ ಕಾರಣಕ್ಕೆ ಎಂಬುದುನ್ನು ತಿಳಿದುಕೊಳ್ಳಬೇಕು. ಮಂಗಳೂರಿನಲ್ಲಿರುವ ಗುತ್ತಿಗೆದಾರನನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಮೊಬೈಲ್‌ ಸ್ವಿಚ್‌ ಆಗಿತ್ತು. ಗುರುವಾರ ನೋಟಿಸ್‌ಗೆ ಉತ್ತರ ನೀಡಲಾಗುವುದು’ ಎಂದು ಸುಪ್ರದೀಪ್‌ ಯಜಮಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.