ADVERTISEMENT

ಅಂಗವಿಕಲರಿಗೆ ವಂಚನೆ ಆರೋಪ: ಕ್ರಮಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 7:05 IST
Last Updated 19 ಅಕ್ಟೋಬರ್ 2012, 7:05 IST

ಹಿರೇಕೆರೂರ: ತಾಲ್ಲೂಕಿನಲ್ಲಿ ಅಂಗನ ವಾಡಿ ಕಾರ್ಯಕರ್ತೆಯರ ಹುದ್ದೆಗೆ ಮಹಿಳಾ ಅಂಗವಿಕಲ ಅಭ್ಯರ್ಥಿಗಳನ್ನು ಆಯ್ಕೆ ಮಾಡದೆ ವಂಚಿಸಿದ್ದಾರೆ ಎಂದು ಆರೋಪಿಸಿ ಅಂಗವಿಕಲರ ಸಂಘದ ತಾಲ್ಲೂಕು ಘಟಕದ ವತಿಯಿಂದ ಗುರುವಾರ ತಹಸೀಲ್ದಾರ್ ಇಸ್ಮಾಯಿಲ್ ಶಿರಹಟ್ಟಿ ಅವರಿಗೆ ಮನವಿ ಸಲ್ಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಂಗವಿಕಲರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎ.ಸಿ.ಹರಿಹರ, ಸರ್ಕಾರದ ಆದೇಶದಂತೆ ಅಂಗನವಾಡಿ ಕಾರ್ಯ ಕರ್ತೆಯರ ಹುದ್ದೆಗೆ ಅರ್ಹ ಅಂಗವಿಕಲ ಮಹಿಳೆಯರನ್ನು ಆಯ್ಕೆ ಮಾಡದೆ ಅನ್ಯಾಯ ಮಾಡಲಾಗಿದೆ.

ಈ ಹುದ್ದೆ ಗಳಿಗೆ ಅಂಗವಿಕಲರನ್ನು ನೇರ ನೇಮಕ ಮಾಡಬೇಕೆಂಬ ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಸೆ.28ರಂದು ಸಂದರ್ಶನಕ್ಕೆ ಜಿಲ್ಲಾಧಿಕಾರಿಗಳು ಬರುವ ಮೊದಲೇ ಸ್ಥಳೀಯ ಅಧಿಕಾರಿಗಳು ಅರ್ಜಿ ಲಕೋಟೆಗಳನ್ನು ತೆರೆದು, ಅವರ ಗಮನಕ್ಕೆ ತರದೇ ತಮಗೆ ಬೇಕಾದವರ ಅರ್ಜಿಗಳನ್ನು ಮಾತ್ರ ಗಮನಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು.

ಅರ್ಹ ಅಂಗವಿಕಲ ಮಹಿಳೆಯರನ್ನು ಹುದ್ದೆಯಿಂದ ವಂಚಿತರನ್ನಾಗಿ ಮಾಡಿ ರುವ ಕುರಿತು ಸಾಕ್ಷಿಗಳ ಸಮೇತ ರುಜುವಾತು ಮಾಡಲಾಗಿದೆ. ಕೂಡಲೇ ಎಲ್ಲ ಅರ್ಹ ಅಂಗವಿಕಲ ಮಹಿಳೆಯರನ್ನು ಹುದ್ದೆಗೆ ಆಯ್ಕೆ ಮಾಡಲು  ಕ್ರಮ ಕೈಗೊಳ್ಳಬೇಕು. ತಾರತಮ್ಯ ಮಾಡಿ ಕರ್ತವ್ಯಲೋಪ ಎಸಗಿರುವ ಸಿಡಿಪಿಒ ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿ ಸಿದರು.

ಅಂಗವಿಕಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಜು ಜವಳಿ, ಉಪಾ ಧ್ಯಕ್ಷೆ ಕುಸುಮಾ ಹುಳಿಬುತ್ತಿ, ಮಂಜುಳಾ ದೊಡ್ಡಬಾವಿ, ರಮೇಶ ತೋಟಗೇರ, ಸೋಮಣ್ಣ ನೇಶ್ವಿ, ಶಾಂತಾ ಮಳವಳ್ಳಿ, ಸುಮಂಗಲಾ ಶ್ರೀರಾಮಕೊಪ್ಪ, ಪವಿತ್ರಾ ಸುಣಗಾರ, ಚೈತ್ರಾ ಎಸ್., ಸುರೇಶ ಅಜ್ಜಪ್ಪನವರ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.