ADVERTISEMENT

ಅಕ್ರಮ ಮದ್ಯ ಮಾರಾಟ: ಮಹಿಳೆಯರಿಂದ ಅಂಗಡಿ ಧ್ವಂಸ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 7:50 IST
Last Updated 20 ಫೆಬ್ರುವರಿ 2012, 7:50 IST

ಶಿಗ್ಗಾವಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಸ್ವಸಹಾಯ ಸಂಘದ ಮಹಿಳೆಯರು ದಾಳಿ ನಡೆಸಿ ಅಂಗಡಿಗೆ ಬೆಂಕಿ ಹಚ್ಚಿ ಅಂಗಡಿಯಲ್ಲಿನ ವಸ್ತುಗಳನ್ನು ಧ್ವಂಸಗೊಳಿಸಿದ ಘಟನೆ ತಾಲ್ಲೂಕಿನ ಮೂಕಬಸರಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಗ್ರಾಮದ ಬಿಡಿ ಹಾಗೂ ಚಹಾದ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಹಲವಾರು ಬಾರಿ ಗ್ರಾಮದ ಸ್ವಸಹಾಯ ಸಂಘಗಳ ಸದಸ್ಯರು ಅಬಕಾರಿ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದರೂ ಕೂಡ ಯಾವುದೇ ಪ್ರಯೋಜವಾಗಿರಲಿಲ್ಲ.

ಭಾನುವಾರ ಗ್ರಾಮದ ಬಸವಣ್ಣೆಪ್ಪ ವಿರೂಪಾಕ್ಷಪ್ಪ ಹಿತ್ತಲಮನಿ ಎಂಬಾತ ತನ್ನ  ಚಹಾದಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಗಮನಿಸಿದ ಮಹಿಳೆಯರು ಮದ್ಯ ಮಾರಾಟ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ಮಾಲೀಕನಿಂದ ಯಾವುದೇ ಖಚಿತ ಭರವಸೆ ದೊರೆಯದ ಕಾರಣ ರೊಚ್ಚಿಗೆದ್ದ ಮಹಿಳೆಯರು ಅಂಗಡಿಯೊಳಗೆ ನುಗ್ಗಿ ಧ್ವಂಸ ಮಾಡಿದ್ದಾರಲ್ಲದೇ ಮದ್ಯದ ಬಾಟಲಿಗಳನ್ನು ಒಡೆದು ನಾಶಪಡಿಸಿದರು.  ನಂತರ ಅಂಗಡಿಗೆ ಬೆಂಕಿ ಹಚ್ಚಿ ಸಂಪೂರ್ಣ ಸುಟ್ಟು ಹಾಕಿದರೆಂದು ಹೇಳಲಾಗಿದೆ.

ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಅಂಗಡಿಗೆ ಹಚ್ಚಿದ ಬೆಂಕಿಯನ್ನು ನಂದಿಸಿದ್ದಾರೆ. ಸುದ್ದಿ ತಿಳಿದು ಗ್ರಾಮಕ್ಕೆ ಆಗಮಿಸಿದ ಬಂಕಾಪುರ ಪೊಲೀಸರು, ಮಾಲೀಕನನ್ನು ವಶಕ್ಕೆ ತೆಗೆದುಕೊಂಡು ಅವನಿಂದ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದಿಲ್ಲ. ಒಂದು ವೇಳೆ ಮಾರಾಟ ಮಾಡಿದರೆ ಶಿಕ್ಷೆ ಅನುಭವಿಸಲು ಸಿದ್ಧ ಎಂದು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟ ನಂತರವೇ ಆತನನ್ನು ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.