ADVERTISEMENT

`ಅಕ್ರಮ ಮರಳು ಗಣಿಗಾರಿಕೆ ತಡೆಯಿರಿ'

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2013, 11:37 IST
Last Updated 14 ಫೆಬ್ರುವರಿ 2013, 11:37 IST
ರಾಣೆಬೆನ್ನೂರಿನಲ್ಲಿ ಅಕ್ರಮ ಮರಳು ದಂದೆಗೆ ಕಡಿವಾಣ ಹಾಕುವಂತೆ ಹಾಗೂ ಕುಡಿಯುವ ನೀರು ಸಂಗ್ರಹಕ್ಕೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಮಂಗಳವಾರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ರಾಣೆಬೆನ್ನೂರಿನಲ್ಲಿ ಅಕ್ರಮ ಮರಳು ದಂದೆಗೆ ಕಡಿವಾಣ ಹಾಕುವಂತೆ ಹಾಗೂ ಕುಡಿಯುವ ನೀರು ಸಂಗ್ರಹಕ್ಕೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಮಂಗಳವಾರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.   

ರಾಣೆಬೆನ್ನೂರು: `ತಾಲ್ಲೂಕಿನ ತುಂಗಭದ್ರಾ ನದಿ ತೀರದಲ್ಲಿ ನಡೆಯುತ್ತಿರವ ಅಕ್ರಮ ಮರಳು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿ, ನದಿಯಲ್ಲಿ ನೀರು ಸಂಗ್ರಹಕ್ಕೆ ಅನುಕೂಲ ಮಾಡಿಕೊಡಬೇಕು' ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಮಂಗಳವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಸತೀಶಕುಮಾರ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, `ತಾಲ್ಲೂಕಿನ ತುಂಗಭದ್ರಾ ನದಿ ತೀರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಯಥೇಚ್ಛವಾಗಿ ನಡೆಯುತ್ತಿದ್ದು, ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಅಕ್ರಮ ದಂದೆಗೆ ಕಡಿವಾಣ ಹಾಕಬೇಕು' ಎಂದು ಆಗ್ರಹಿಸಿದರು.

`ನದಿ ತೀರದಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂದೆಯಿಂದಾಗಿ ನದಿಯಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಇದಕ್ಕೆ ಕಡಿವಾಣ ಹಾಕಿ ನದಿಯಲ್ಲಿ ನೀರು ಸಂಗ್ರಹಕ್ಕೆ ಅನುಕೂಲ ಕಲ್ಪಿಸಬೇಕು' ಎಂದು ರವೀಂದ್ರಗೌಡ ಒತ್ತಾಯಿಸಿದರು.

ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದ ರವೀಂದ್ರಗೌಡ, ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶಪ್ಪ ಗರಡಿಮನಿ, ಗೋವಿಂದರಡ್ಡಿ ಚಳಗೇರಿ, ಹನುಮಗೌಡ ಮುಳಗುಂದ, ಹಾಲೇಶಪ್ಪ ಬಂಗಿಗೌಡ್ರ, ಸುರೇಂದ್ರ ಜ್ಯೋತಿ, ಮಾತೇಶ ಕಣದಮನಿ, ಶಿವಪ್ಪ ಜಾನಪ್ಪನವರ, ಬಸಪ್ಪ ಹಿಂಡೇರ, ಬಸಪ್ಪ ಮಳೆಯಪ್ಪನವರ, ಜಿ.ಕೆ. ಹಿರೇಮಠ, ಚೌಡಪ್ಪ ಮುದೇನೂರು, ಕುಬೇರಪ್ಪ ಹೂಲಿಹಳ್ಳಿ, ಬಸಪ್ಪ ಕೂಲೇರ, ಶಂಬಣ್ಣ ಲಕ್ಕೊಳ್ಳಿ, ಮಲ್ಲೇಶಪ್ಪ ಬಿಳಿಎಲಿ, ಶಿವಾನಂದಪ್ಪ ಲಿಂಗದಳ್ಳಿ, ಕೊಟ್ರೇಶ ಹುಬ್ಬಳ್ಳಿ ಮತ್ತಿತರರು ಹಾಜರಿದ್ದರು.

ಮರಳು ವಶ
ರಾಣೆಬೆನ್ನೂರು: ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ ಬುಧವಾರ ದಾಳಿ ನಡೆಸಿ 2935 ಕ್ಯೂಬಿಕ್ ಮೀಟರ್ ಮರಳನ್ನು ತಾಲ್ಲೂಕಿನ ಕೋಣನತಂಬಿಗಿ ಗ್ರಾಮದಲ್ಲಿ ವಶಪಡಿಸಿಕೊಂಡು, 17.60 ಲಕ್ಷ ರೂಪಾಯಿ ದಂಡವನ್ನು ವಿಧಿಸಿದ್ದಾರೆ.

ಖಾದರ್‌ಸಾಬ್ ಬಡಿಗಿ, ಮೆಹಬೂಬ್‌ಸಾಬ್ ಮುಜಾವರ, ಅಜಗರ್‌ಸಾಬ್ ಬಡಿಗಿ, ನಾಗಪ್ಪ ಹೀಲದಹಳ್ಳಿ, ಬಸವರಾಜ ತಳವಾರ, ನಾಗಪ್ಪ ಬಾರ್ಕಿ, ಅರುಣ ಮಲ್ಲಾಪುರ, ನಾಗರಾಜ ಬಾರ್ಕಿ, ಹನುಮಂತಪ್ಪ ಹಿರೇಬಿದರಿ, ಕರಿಯಪ್ಪ ಹಿರೇಬಿದರಿ, ಕೃಷ್ಣಮೂರ್ತಿ, ಆನಂದ ಹೀಲದಹಳ್ಳಿ, ನಜೀಮ್‌ಸಾಬ್, ಮೌನೇಶ ತಳವಾರ, ಪರಶುರಾಮ ತಳವಾರ ಎಂಬುವರು ಅಕ್ರಮ ಮರಳು ಸಂಗ್ರಹಿಸಿಟ್ಟದನ್ನು ಅಧಿಕಾರಿಗಳು ಪತ್ತೆ ಹಚ್ಚಿ ದಂಡ ವಿಧಿಸಿದ್ದಾರೆ.

ತಹಶೀಲ್ದಾರ್ ಸತೀಶಕುಮಾರ ಡಿ.ಎಂ, ಗಣಿ ಇಲಾಖೆಯ ಶಬ್ಬೀರ್‌ಅಹ್ಮದ್, ಮಲ್ಲಿಕಾರ್ಜುನ ಕೆಂಚರಡ್ಡಿ, ವಿಶ್ವನಾಥ ಟಿ.ಆರ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.