ADVERTISEMENT

ಅನ್ನಭಾಗ್ಯ ಅಕ್ಕಿ ಸಂಗ್ರಹಕ್ಕೆ ಗೋದಾಮು ಹುಡುಕಿ

ಆಹಾರ ಇಲಾಖೆ ಅಧಿಕಾರಿಗಳಿಗೆ ದ್ಯಾಬೇರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 5:07 IST
Last Updated 10 ಡಿಸೆಂಬರ್ 2013, 5:07 IST

ಹಾವೇರಿ: ಅನ್ನಭಾಗ್ಯದ ಅಕ್ಕಿ ಸಂಗ್ರಹಿಸಿಡಲು ಉಗ್ರಾಣದ ಕೊರತೆಯಾಗದಂತೆ ಬೇರೆ ಇಲಾಖೆಗಳನ್ನು ಸಂಪರ್ಕಿಸಿ ಖಾಲಿ ಇದ್ದ ಉಗ್ರಾಣಗಳಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಬಿ.ದ್ಯಾಬೇರಿ ಆಹಾರ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲೆಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅನ್ನಭಾಗ್ಯ ಅಕ್ಕಿ ಸಂಗ್ರಹಕ್ಕೆ ಸವಣೂರು, ಶಿಗ್ಗಾವಿಗಳಲ್ಲಿ ಉಗ್ರಾಣದ ಕೊರತೆ ಇದ್ದು, ಕೂಡಲೇ ಬೇರೆ ಇಲಾಖೆಗಳ ಉಗ್ರಾಣಗಳನ್ನು ಗುರುತಿಸಿ ಅಲ್ಲಿ ಅಕ್ಕಿ ಸಂಗ್ರಹಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.

ಕ್ಷೀರಭಾಗ್ಯ ಯೋಜನೆಯಡಿ ಜಿಲ್ಲೆಯ ೧,೯೧೪ ಅಂಗನವಾಡಿ ಕೇಂದ್ರಗಳ ಒಟ್ಟು ೭೧,೮೧೬ ಮಕ್ಕಳಿಗೆ ವಾರದಲ್ಲಿ ಮೂರು ದಿನ ವಿತರಿಸುವ ಹಾಲು ಹಾಗೂ ಗುಣಮಟ್ಟದ ಪೌಷ್ಠಿಕ ಆಹಾರ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಎಲ್ಲಿಯಾದರೂ ದೂರುಗಳು ಬಂದರೆ, ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯು ತೋಟಗಾರಿಕೆ ಇಲಾಖೆ ಹಾಗೂ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಶೇ. ೧೦೦ರ ಪ್ರಗತಿ ಸಾಧಿಸಬೇಕು ಎಂದು ಸೂಚಿಸಿದ ಅವರು, ಜಿಲ್ಲೆಯಲ್ಲಿ ಸಂಜೀವಿನಿ ಯೋಜನೆ ಜಾರಿಯಾದರೆ, ಎಲ್ಲ ಇಲಾಖೆಗಳ ಸ್ವಸಹಾಯ ಸಂಘಗಳ ವಿವರಗಳನ್ನು ನಿಗದಿಪಡಿಸಿದ ನಮೂನೆಯಲ್ಲಿ ಕ್ರೋಢಿಕರಿಸಿ ಗ್ರಾ.ಪಂ.ನ ಪಂಚತಂತ್ರಾಂಶದಲ್ಲಿ ಅಳವಡಿಸುವಂತೆ ಸಲಹೆ ಮಾಡಿದರು.

ಸಕಾಲ ಯೋಜನೆಯಡಿ ಕೆಲ ಇಲಾಖೆಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಜಿಲ್ಲೆಯ ಪ್ರಗತಿ ಸಾಧ್ಯವಾಗಿಲ್ಲ. ಆದ್ದರಿಂದ ಅಧಿಕಾರಿಗಳು ಸಕಾಲಕ್ಕೆ ಮಾಹಿತಿಯನ್ನು ದಾಖಲಿಸಬೇಕು.ಹಾವೇರಿ ನಗರದ ರಸ್ತೆ ಮತ್ತು ಒಳಚರಂಡಿಗಳನ್ನು ಆದಷ್ಟು ಬೇಗನೆ ಸ್ವಚ್ಛಗೊಳಿಸುಂತೆ ನಗರಸಭೆ ಆಯುಕ್ತರಿಗೆ ಸೂಚಿಸಿದರು.

ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಮಹಿಳಾ ಸಹಾಯವಾಣಿ ಕೇಂದ್ರಗಳಲ್ಲಿ ಸಮಾಲೋಚನೆ ಮೂಲಕ ಪರಿಹಾರ ಕೊಡಿಸಿ, ಅಗತ್ಯವಿದ್ದಲ್ಲಿ ಕಾನೂನು ನೆರವು ನೀಡುವಂತೆ ಜಿಲ್ಲಾ ಪಂಚಾಯಿತಿ ಸಿಇಓ ಕೆ.ಬಿ.ಆಂಜನಪ್ಪಗೆ ತಿಳಿಸಿದರು. ೨೦೧೩–-೧೪ರ ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ಈವರೆಗೂ ೯೫,೭೬೦ ಟನ್ ರಸಗೊಬ್ಬರ ಪೂರೈಕೆಯಾಗಿದ್ದು, ಅದರಲ್ಲಿ ೭೦,೮೬೧ ಟನ್ ವಿತರಣೆಯಾಗಿದೆ. ೨೪,೮೯೯ ಟನ್ ದಾಸ್ತಾನಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದರಲ್ಲದೆ, ಜಿಲ್ಲೆಯ ೯ ಲಕ್ಷ ಜಾನುವಾರುಗಳ ಪೈಕಿ ೩೦,೧೩೭೯ ಜಾನುವಾರುಗಳಿಗೆ ಚಿಕಿತ್ಸೆ ಹಾಗೂ ೪,೬೦,೧೧೦ ಜಂತು ನಾಶಕ ಔಷಧ ವಿತರಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಮಾತನಾಡಿ, ಮಾರ್ಚ್‌ ತಿಂಗಳ ಒಳಗಾಗಿ ಜಿಲ್ಲಾ ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಗೆ ನಿಗದಿಪಡಿಸಿರುವ ಅಭಿವೃದ್ಧಿ ಕಾರ್ಯಹಳನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿ.ಪಂ.ಉಪಕಾರ್ಯದರ್ಶಿ ಜಿ.ಗೋವಿಂದಸ್ವಾಮಿ, ಅಪರ ಜಿಲ್ಲಾಧಿಕಾರಿ ಶಶಿಧರ ಕುರೇರ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಜಗಮಯ್ಯ, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಶಿವಪುತ್ರಪ್ಪ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.