ADVERTISEMENT

ಅರೆಮಲೆನಾಡಿನಲ್ಲಿ ಬಾರದ ಮಳೆ; ಒಣಗಿದ ಬೆಳೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 8:30 IST
Last Updated 19 ಜುಲೈ 2012, 8:30 IST

ಅಕ್ಕಿಆಲೂರ: ದಟ್ಟವಾದ ಅರಣ್ಯ ಪ್ರದೇಶವನ್ನು ಹೊಂದಿರುವಂತಹ ಶಿರಸಿ ಗಡಿಯ ಅಂಚಿಗೆ ಹೊಂದಿಕೊಂಡಿರುವ ಅರೇಮಲೆನಾಡು ಪ್ರದೇಶ ಅಕ್ಕಿಆಲೂರ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಮಳೆ ಕೈಕೊಟ್ಟಿದ್ದು ಬರದ ಛಾಯೆ ಆವರಿಸಿದೆ. ಮಳೆ ಅಭಾವದಿಂದಾಗಿ ಬಿತ್ತನೆಯಾದ ಬೆಳೆಗಳಿಗೆ ಕೀಟಬಾಧೆ ತಗುಲಿದ್ದು ರೈತ ಸಮೂಹ ಸಂಕಷ್ಟಕ್ಕೆ ಸಿಲುಕಿದೆ.

ಈ ಪ್ರದೇಶದಲ್ಲೆಗ ಶೇ 80ರಷ್ಟು ಕೃಷಿ ಭೂಮಿಯಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು ಇನ್ನುಳಿದ ರೈತರು ಭತ್ತದ ನಾಟಿಗಾಗಿ ಮಳೆಯನ್ನು ಎದುರು ನೋಡುತ್ತಿದ್ದಾರೆ. ರೈತನ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಮಳೆ ಆಗೊಮ್ಮೆ ಈಗೊಮ್ಮೆ ಹನಿ ಹನಿಯಾಗಿ ಉದುರಿ ಭರವಸೆ ಮೂಡಿಸುತ್ತಿದೆಯಾದರೂ ಧಾರಾಕಾರವಾಗಿ ಸುರಿಯುತ್ತಿಲ್ಲ.

ಮುಂಗಾರು ಪೂರ್ವದಲ್ಲಿ ಇಲ್ಲಿ ಸುರಿದ ಮಳೆಯಿಂದ ರೈತರು ಸಂತಸಗೊಂಡು ಲಘುಬಗೆಯಿಂದಲೇ ಭೂಮಿಯನ್ನು ಬಿತ್ತನೆಗೆ ಅಣಿಗೊಳಿಸಿದ್ದರು. ಮುಂಗಾರು ಮುನ್ನ ಸುರಿದ ಮಳೆ ನಂತರದ ದಿನಗಳಲ್ಲಿ ಕಣ್ಮರೆಯಾಗಿದ್ದು ಇದುವರೆಗೂ ಈ ಪ್ರದೇಶದಲ್ಲಿ ಹೇಳಿಕೊಳ್ಳುವಂತಹ ಮಳೆ ಒಮ್ಮೆಯೂ ಸುರಿದಿಲ್ಲ.
ಮಳೆ ಅಭಾವದ ನಡುವೆಯೂ ಬಿತ್ತನೆ ಕಾರ್ಯ ಪೂರ್ಣಗೊಳಿಸಿರುವ ರೈತರು ಮಳೆಗಾಗಿ ಆಕಾಶದತ್ತ ಮುಖಮಾಡಿ ಕಾಯ್ದು ಕುಳಿತಿದ್ದಾರೆ.

ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿಯ ರೈತರು ಗೋವಿನ ಜೋಳ ಹಾಗೂ ಹತ್ತಿಯನ್ನು ಬಿತ್ತಿದ್ದಾರೆ. ಮೊಳಕೆಯೊಡೆದು ಭೂಮಿಯಿಂದ ಮೇಲೆದ್ದಿರುವ ಬೆಳೆ ಮಳೆ ಇಲ್ಲದೇ ಸತ್ವವನ್ನು ಕಳೆದುಕೊಂಡಿದೆ. ಆರ್ಥಿಕ ತೊಂದರೆಯ ಮಧ್ಯೆಯೂ ಕಂಡ ಕಂಡಲ್ಲಿ ಸಾಲ-ಸೋಲ ಮಾಡಿ ಬಿತ್ತನೆ ಮುಗಿಸಿರುವ ರೈತರು ಆಘಾತಕ್ಕೀಡಾಗಿದ್ದಾರೆ. ಕೊಳವೆಬಾವಿಯನ್ನು ಹೊಂದಿರುವ ರೈತರು ಹಗಲುರಾತ್ರಿಯೆಲ್ಲಾ ಶ್ರಮವಹಿಸಿ ಬೆಳೆ ಒಣಗದಂತೆ ನೋಡಿಕೊಳ್ಳುತ್ತಿರುವುದು ಮನ ಕಲಕುತ್ತಿದೆ.

ಭತ್ತ ನಾಟಿಗೂ ಸಂಕಷ್ಟ: ನಾಗರ ಪಂಚಮಿಗೆ ಒಂದು ವಾರ ಬಾಕಿ ಇರುವಾಗಲೇ ಭತ್ತದ ನಾಟಿ ಕಾರ್ಯ ಪೊರೈಸುವುದು ವಾಡಿಕೆ. ಪಂಚಮಿ ಹತ್ತಿರ ಬಂದರೂ ಇಲ್ಲಿ ಭತ್ತದ ನಾಟಿ ನಡೆದಿಲ್ಲ. ಸಾಮಾನ್ಯವಾಗಿ ಈ ಸಮಯದಲ್ಲಿ ಸ್ವಲ್ಪವೂ ವ್ಯತ್ಯಾಸವಾದರೆ ಇಳುವರಿ ಮೇಲೆ ದುಷ್ಪರಿಣಾಮ ಬೀರಲಿದೆ ಎಂಬ ಆತಂಕ ರೈತನದ್ದು.

ನಾಟಿ ಕಾರ್ಯವನ್ನು ಎದುರು ನೋಡುತ್ತಿರುವ ರೈತರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ಮಳೆ ಸುರಿಯದೇ ಹೋದರೆ ಭತ್ತದ ನಾಟಿಯ ಬದಲಿಗೆ ಪರ್ಯಾಯ ಬೆಳೆಗಳತ್ತ ಗಮನ ನೀಡುವ ಅನಿವಾರ್ಯತೆ ಇದೆ.

ಮಳೆ ಅಭಾವದಿಂದ ರೈತನಿಗೆ ಹೊಸದೊಂದು ಸಮಸ್ಯೆ ಹೆಗಲೇರಿದ್ದು ಗೋವಿನ ಜೋಳ, ಹತ್ತಿ, ಭತ್ತ ಸೇರಿದಂತೆ ಬಹುತೇಕ ಎಲ್ಲ ಬೆಳೆಗಳಿಗೆ ಕೀಟಬಾಧೆ ತಗುಲಿದೆ. ಕಾಂಡಕೊರಕ ಹುಳು ಬಾಧೆಯಿಂದಾಗಿ ಗೋವಿನ ಜೋಳ ನಲುಗಿದ್ದರೆ, ಮೂತಿಹುಳುವಿನಿಂದಾಗಿ ಹತ್ತಿ ಬೆಳೆ ತನ್ನ ಕಾಂತಿಯನ್ನು ಕಳೆದುಕೊಂಡು ಬಾಡಿದಂತಾಗಿದೆ.

ಇನ್ನು ಭತ್ತಕ್ಕೆ ಬೇರುಹುಳ ಒಕ್ಕರಿಸಿರುವುದು ರೈತನ ಕಣ್ಣಲ್ಲಿ ನೀರು ತರಿಸಿದೆ. ಕೀಟಬಾಧೆ ನಿಯಂತ್ರಣಕ್ಕೆ ಕೃಷಿ ಇಲಾಖೆ ಈಗಾಗಲೇ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದ್ದು ಕೂಡಲೇ ಔಷಧೋಪಚಾರ ಕೈಗೊಳ್ಳುವಂತೆ ಕಿವಿಮಾತು ಹೇಳಿದೆ.

ಈಗಾಗಲೇ ಬಿತ್ತನೆ ಕಾರ್ಯಕ್ಕೆ ಸಾಲ ಮಾಡಿರುವ ರೈತರು ರೋಗ ನಿಯಂತ್ರಣಕ್ಕೆ ಬೇಕಿರುವ ಕ್ರಿಮಿನಾಶಕವನ್ನು ಕೊಳ್ಳಲು ಕೈಯಲ್ಲಿ ಬಿಡಿಗಾಸೂ ಇಲ್ಲದೇ ಪರದಾಡುತ್ತಿದ್ದಾರೆ. ಮಳೆ ಚೆನ್ನಾಗಿ ಸುರಿದರೆ ಕೀಟಬಾಧೆ ದೂರವಾಗಲಿದೆ ಎಂಬ ನಂಬಿಕೆಯೊಂದಿಗೆ ಸಾಕಷ್ಟು ಸಂಖ್ಯೆಯ ರೈತರು ಕಾಲ ಕಳೆಯುತ್ತಿದ್ದಾರೆ. ಆದರೆ ರೈತರ ನಂಬಿಕೆ ಮಾತ್ರ ಕೈಗೂಡುತ್ತಿಲ್ಲ.

`ಪ್ರಜಾವಾಣಿ~ಯೊಂದಿಗೆ ಅಳಲು ತೋಡಿಕೊಂಡ ಅರಳೇಶ್ವರ ಗ್ರಾಮದ ರೈತ ಮಹೇಶ ಪೂಜಾರ, ಮಳೆ ಇಲ್ಲದಂಗ ಆಗಿ ಪೀಕೆಲ್ಲಾ ಹಾಳ ಆಗಾಕತ್ಯಾವ್ರಿ. ಇಲ್ಲಿವರಗೂ ವಾಡಿಕಿ ಮಳಿನೂ ಬಿದ್ದಿಲ್ಲರ‌್ರೀ. ಬಿತ್ತಗಿ ಮಾಡಿರೋ ರೈತರೆಲ್ಲಾ ಮಳೀನ ಎದುರು ನೋಡಾಕತ್ತಾರ‌್ರೀ. ಇನ್ನ ಮಳಿ ಬೀಳಲಿಲ್ಲಂದ್ರ ರೈತನ ಪರಿಸ್ಥಿತಿ ಬಾಳ ವಜ್ಜಾಕ್ಕೇತ್ರಿ... ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.