ADVERTISEMENT

ಅವಧಿ ಮುಗಿದರೂ ಶೇ 70ರಷ್ಟು ಕಾಮಗಾರಿ ಬಾಕಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 6:25 IST
Last Updated 10 ಏಪ್ರಿಲ್ 2012, 6:25 IST

ಹಾವೇರಿ: ನಗರದ ಮಹತ್ವಾಕಾಂಕ್ಷೆಯ ಯೋಜನೆಗಳ್ಲ್ಲಲಿ ಒಂದಾದ ಒಳಚರಂಡಿ ಯೋಜನೆ ಕಾಮಗಾರಿ ಪೂರ್ಣಗೊಳಿಸಲು ನಿಗದಿಪಡಿಸಿದ ಸಮಯ ಮುಗಿದು 10 ತಿಂಗಳು ಗತಿಸಿದೆ. ಈವರೆಗೆ ಶೇ 30 ರಷ್ಟು ಕಾಮಗಾರಿ ಮಾತ್ರ ಮುಗಿದಿದ್ದು, ಇನ್ನೂ ಶೇ 70 ರಷ್ಟು ಕಾಮಗಾರಿ ಬಾಕಿಯಿದೆ.

ಜಿಲ್ಲಾ ಕೇಂದ್ರವಾಗಿ 12 ವರ್ಷಗಳ ನಂತರ ಹಾವೇರಿ ನಗರವನ್ನು ಸುಂದರಗೊಳಿಸುವ ಉದ್ದೇಶದಿಂದ ಸರ್ಕಾರ 32 ಕೋಟಿ ರೂ. ಗಳ ಒಳಚರಂಡಿ ಯೋಜನೆ ಮಂಜೂರಿ ಮಾಡಿತ್ತು. 2009 ರಲ್ಲಿ ಆರಂಭವಾದ ಈ ಒಳಚರಂಡಿ ಕಾಮಗಾರಿ ಜೂನ್ 2011ಕ್ಕೆ ಪೂರ್ಣಗೊಳ್ಳ ಬೇಕಿತ್ತು. ಆದರೆ, ಸ್ಥಳೀಯ ಜನಪ್ರತಿನಿಧಿಗಳ ಮೃದು ದೋರಣೆಯಿಂದಲೋ ಅಥವಾ ಗುತ್ತಿಗೆ ಪಡೆದ ಕಂಪೆನಿಯ ನಿರ್ಲಕ್ಷದಿಂದಲೋ ಕಾಮ ಗಾರಿ ಮಾತ್ರ ಆಮೆ ವೇಗಕ್ಕೆ ಸ್ಪರ್ಧೆ ಯೊಡ್ಡುವಂತೆ ನಡೆದಿದೆ.

ಕಾಮಗಾರಿ ಗುತ್ತಿಗೆ ಪಡೆದ ಬೆಂಗಳೂರು ಮೂಲದ ಗೌತಮ್ ಜಾಹ್ನವಿ ಕನಸ್ಟ್ರಕ್ಷನ್ ಕಂಪೆನಿ ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣ ಗೊಳಿಸುವಲ್ಲಿ ವಿಫಲವಾದಾಗ ತಾಂತ್ರಿಕ ಕಾರಣ ನೀಡಿ 50 ಲಕ್ಷ ರೂ. ದಂಡದೊಂದಿಗೆ ಒಂದು ವರ್ಷ ವಿನಾಯಿತಿ ಪಡೆದುಕೊಂಡಿತ್ತು. ಆ ವಿನಾಯಿತಿ ಪ್ರಕಾರ ಜೂನ್ 2012 ರಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿದೆ. ಆದರೆ, ಈಗ ನಡೆದಿರುವ ಕಾಮಗಾರಿ ವೇಗ ನೋಡಿದರೆ, ಈ ವರ್ಷವೂ ಪೂರ್ಣಗೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎನ್ನುತ್ತಾರೆ ಕರ್ನಾಟಕ ರಾಜ್ಯ ಒಳಚರಂಡಿ ಮಂಡಳಿ ಅಧಿಕಾರಿಗಳು.

ಈಗಾಗಲೇ ಆಗಿರುವ ವಿಳಂಬಕ್ಕೆ ಕಾರಣ ಕೇಳಿ ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಗುತ್ತಿಗೆ ಕಂಪೆನಿಗೆ ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದು, ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಬಾಕಿ ಉಳಿದಿರುವ ಕಾಮಗಾರಿ ಕೈಗೊಳ್ಳಲು ಬೇರೆ ಗುತ್ತಿಗೆದಾರರಿಗೆ ವಹಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಯೋಜನೆಯ 32 ಕೋಟಿ ರೂ.ಗಳಲ್ಲಿ ನಗರದ 63.7 ಕಿ.ಮೀ. ಒಳಚರಂಡಿ ಕಾಮಗಾರಿ ಯಲ್ಲಿ ಈವರೆಗೆ ಕೇವಲ ರೂ 13.50 ಕೋಟಿ  ಖರ್ಚು ಮಾಡಿ 20 ಕಿ.ಮೀ. ಕಾಮಗಾರಿ ಮಾತ್ರ ನಡೆಸಲಾಗಿದೆ. ಉಳಿದ ರೂ 19.50 ಕೋಟಿ  ಗಳಲ್ಲಿ  43.7 ಕಿಮೀ ಕಾಮಗಾರಿ ನಡೆಸ ಬೇಕಿದೆ. ಈವರೆಗೆ ಗುತ್ತಿಗೆದಾರರಿಗೆ ಕೇವಲ ರೂ 11.50 ಕೋಟಿಗಳನ್ನು ಸಂದಾಯ ಮಾಡಲಾಗಿದೆ. 

ಗುತ್ತಿಗೆ ಪಡೆದ ಕಂಪೆನಿ ಕೋರಿಕೊಂಡ ಸಮಯ ಮುಗಿಯಲು ಕೇವಲ ಎರಡು ತಿಂಗಳು ಬಾಕಿಯಿದೆ. ಆದರೆ, ಉಳಿದ ಕಾಮಗಾರಿ ನಡೆಸಲು ಕನಿಷ್ಟ ಒಂದರಿಂದ ಒಂದುವರೆ ವರ್ಷ ಬೇಕಾಗಿರುವುದರಿಂದ ನಗರದ ನಾಗರಿಕರು ಇನ್ನೂ ಎರಡು ಮಳೆಗಾಲವನ್ನು ಒಳ ಚರಂಡಿ ಕಾಮಗಾರಿಯೊಂದಿಗೆ ಕಳೆಯಬೇಕಾದ ಅನಿವಾ ರ್ಯತೆಯನ್ನು ಅಧಿಕಾರಿಗಳೇ ತಳ್ಳಿಹಾಕುತ್ತಿಲ್ಲ.

ಕಾಮಗಾರಿಯ ವಿಳಂಬದಿಂದ ಹತ್ತು ಹಲವು ಸಮಸ್ಯೆಗಳು ಪರಿಹಾರ ಕಾಣದೇ ಹಾಗೆ ಉಳಿಯಲಿವೆ. ಈಗಾಗಲೇ ಸಂಪೂರ್ಣ ಹಾಳಾ ಗಿರುವ ರಸ್ತೆಗಳ ಸುಧಾರಣೆ. ಗಟಾರುಗಳ ನಿರ್ಮಾಣವೂ ವಿಳಂಬವಾಗುವುದರಲ್ಲಿ ಯಾವುದೇ ಸಂಸಯವಿಲ್ಲ. ಅಲ್ಲದೇ ಮಳೆಗಾಲ ದಲ್ಲಿ ರಸ್ತೆಗಳು ಕೆಸರು ಗದ್ದೆಯಂತೆಯಾದರೆ, ಬೇಸಿಗೆಯಲ್ಲಿ ದೂಳು ಉತ್ಪಾದಿಸುವ ಕಾರ್ಖಾನೆಗಳಾಗುತ್ತವೆ. ಅದೇ ಕಾರಣಕ್ಕಾಗಿ ಕಾಮಗಾರಿ ವಿಳಂಬಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಇತ್ತೀಚಿಗೆ ನಗರಕ್ಕೆ ಭೇಟಿ ನೀಡಿದ ನಗರಾಭಿ ವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅರವಿಂದ ಶ್ರೀವಾಸ್ತವ ಅವರು, ನಗರದಲ್ಲಿ ನಡೆದಿರುವ ಒಳ ಚರಂಡಿ ಕಾಮಗಾರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ಕಾಮಗಾರಿ ಕುರಿತು ಪ್ರತ್ಯೇಕ ಪರಿಶೀಲನೆ ನಡೆಸು ವುದಾಗಿ ತಿಳಿಸಿದ್ದಾರೆ.
 
ಒಳ ಚರಂಡಿ ಕಾಮಗಾರಿ ವಿಳಂಬವಾಗಿರುವ ಕುರಿತು ಗುತ್ತಿಗೆದಾರರಿಗೆ  ಮಾರ್ಚ್ ತಿಂಗಳಲ್ಲಿ ಎರಡು ಬಾರಿ ನೊಟೀಸ್ ಜಾರಿ ಮಾಡಲಾಗಿದೆ. ಇನ್ನೊಂದು ನೊಟೀಸ್ ಜಾರಿ ಮಾಡಿದ ನಂತರ ಮೇಲಾಧಿಕಾರಿಗಳು  ತೆಗೆದು ಹಾಕಿ ಬೇರೆಯವರಿಗೆ ನೀಡುವ ಸಾಧ್ಯತೆ ಇದೆ ಎಂದು ಒಳ ಚರಂಡಿ ಮಂಡಳಿಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ವಿ.ಎನ್. ಹಾದಿಮನಿ ಹೇಳುತ್ತಾರೆ.
ಈಗಾಗಲೇ ಹಲವು ಕಡೆಗಳಲ್ಲಿ ಕಾಮಗಾರಿ ವಿಳಂಬ ಹಾಗೂ ಕಾಮಗಾರಿಯಿಂದ ಉಂಟಾದ ಸಮಸ್ಯೆಗಳ ನಿವಾರಣೆಗೆ ಒತ್ತಾಯಿಸಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಇದೇ ರೀತಿ ವಿಳಂಬವಾದರೆ, ಸಾರ್ವಜನಿಕರೊಂದಿಗೆ ಸೇರಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕರವೇ ಮುಖಂಡ ಶಾಹೀದ್ ದೇವಿಹೊಸೂರು ಎಚ್ಚರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.