ADVERTISEMENT

ಆದಿತ್ಯನೇ ಈ ಮನೆಯ ಆದಾಯದ ಮೂಲ

ಪಿ.ಆರ್‌.ಹರ್ಷವರ್ಧನ
Published 10 ಡಿಸೆಂಬರ್ 2017, 9:43 IST
Last Updated 10 ಡಿಸೆಂಬರ್ 2017, 9:43 IST
ಹಾವೇರಿಯ ಅಶ್ವಿನಿ ನಗರದ ಮನೆಯ ಮೇಲೆ ಅಳವಡಿಸಲಾದ ಸೌರಶಕ್ತಿ ಘಟಕ
ಹಾವೇರಿಯ ಅಶ್ವಿನಿ ನಗರದ ಮನೆಯ ಮೇಲೆ ಅಳವಡಿಸಲಾದ ಸೌರಶಕ್ತಿ ಘಟಕ   

‘ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು’ ಎಂಬುದು ಹಿರಿಯರ ಅನುಭವದ ಉಕ್ತಿ. ಇವೆರಡೂ ಜವಾಬ್ದಾರಿ ಹಾಗೂ ನಿಗದಿತ ಖರ್ಚು ನಿರ್ಧರಿಸಲಾಗದ ಕಾರ್ಯ ಎಂಬುದೇ ಬಹುತೇಕರ ಮಾತು. ಆದರೆ, ಮನೆಯಲ್ಲಿ ವಾಸ ಮಾಡಿಕೊಂಡೇ ಆದಾಯವೂ ಪಡೆಯಬಹುದಾದರೆ? ಇಂತಹದ್ದೊಂದು ಪ್ರಯತ್ನ ಹಾವೇರಿ ನಗರದಲ್ಲಿ ನಡೆದಿದೆ. ನಗರದ ಸುಮಾರು 11 ಮನೆಗಳ ಚಾವಣಿಯ ಮೇಲೆ ‘ಆದಾಯದ ತಟ್ಟೆ’ ತಲೆ ಎತ್ತಿದೆ.

ಮನೆಯಿಂದ ಆದಾಯ ಬರಬೇಕಾದರೆ, ಬಾಡಿಗೆ ನೀಡಬೇಕು. ಬಾಡಿಗೆ ನೀಡಿದರೆ ಹಲವು ಸಮಸ್ಯೆಗಳನ್ನೂ ನಿಭಾಯಿಸಬೇಕು. ಆದರೆ, ಯಾವ ಸಮಸ್ಯೆ– ನಿರ್ವಹಣೆ ಇಲ್ಲದೇ, ಮನೆಯಲ್ಲಿ ವಾಸ ಮಾಡಿಕೊಂಡೇ ಆದಾಯ ಪಡೆಯುವ ಸುಲಭ ವಿಧಾನವೇ ‘ಸೌರ ಶಕ್ತಿ ಮೇಲ್ಚಾವಣಿ ಘಟಕ’.

ಅಶ್ವಿನಿ ನಗರದಲ್ಲಿನ ‘ಪ್ರಜಾವಾಣಿ’ ಏಜೆಂಟ್ ಜಯಪ್ಪ ಬಣಕಾರ ಅವರ ಇಂಥ ಪ್ರಯತ್ನಕ್ಕೆ ಆರ್ಬ್‌ ಎನರ್ಜಿ ಜೊತೆಯಾಗಿ ಹೆಜ್ಜೆ ಇಟ್ಟಿದ್ದು, ಭಾನುವಾರ (ಡಿ.10) ಬೆಳಿಗ್ಗೆ 10.30ಕ್ಕೆ ವಿದ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ.

ADVERTISEMENT

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ಆರ್ಬ್‌ ಎನರ್ಜಿಯ ಪ್ರಧಾನ ವ್ಯವಸ್ಥಾಪಕ ದತ್ತಾನಂದ ಶೆಟ್ಟಿ, ‘ಪ್ರಜಾವಾಣಿ’ ಪ್ರಸರಣ ವಿಭಾಗದ ಹಿರಿಯ ವ್ಯವಸ್ಥಾಪಕ ಶಿವರಾಜ ಎಸ್. ನರೋಣ ಮತ್ತಿತರರು ಸಾಕ್ಷಿಯಾಗಲಿದ್ದಾರೆ.

ಮನೆಯ ಚಾವಣಿಯ ಮೇಲೆ ಸಾವಿರ ಚದರ ಅಡಿಯಲ್ಲಿ 10 ಕಿಲೊ ವ್ಯಾಟ್‌ ವಿದ್ಯುತ್ ಉತ್ಪಾದಕ ಸೌರ ತಟ್ಟೆಗಳನ್ನು ಹಾಕಲಾಗಿದೆ. ಇದು, ಗಂಟೆಗೆ 10 ಯೂನಿಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ದಿನಕ್ಕೆ ಕನಿಷ್ಠ ನಾಲ್ಕು ಗಂಟೆಯ ವಿದ್ಯುತ್ ಉತ್ಪಾದನೆಯನ್ನು ಪರಿಗಣಿಸಿದರೂ, 40 ಯೂನಿಟ್ ಸಿಗುತ್ತದೆ. ಅಂದರೆ, ತಿಂಗಳಿಗೆ ಕನಿಷ್ಠ 1,200 ಯೂನಿಟ್ ಉತ್ಪಾದನೆ ಖಚಿತ.

ವಿದ್ಯುಚ್ಛಕ್ತಿ ಮಂಡಳಿಯು (ಹೆಸ್ಕಾಂ) ಪ್ರತಿ ಯೂನಿಟ್‌ಗೆ ₹7.08 ರಂತೆ ಖರೀದಿಸುತ್ತಿದ್ದು, ತಿಂಗಳಿಗೆ ₹8,429 ಆದಾಯ ಸಿಗಲಿದೆ. ಸುಮಾರು ₹8 ಲಕ್ಷದೊಳಗಿನ ಹೂಡಿಕೆಯಲ್ಲಿ ಈ ಆದಾಯ ಪಡೆಯಬಹುದು.

ಈ ಪೈಕಿ ನಿವ್ವಳ (net) ಮೀಟರಿಂಗ್ ಅಡಿ ಉತ್ಪಾದನೆಯಾದ ವಿದ್ಯುತ್ ಅನ್ನು ಮನೆಗೆ ಬಳಸಿಕೊಂಡು, ಉಳಿದುದ್ದನ್ನು ಹೆಸ್ಕಾಂಗೆ ಮಾರಬಹುದು. ಒಟ್ಟು (gross) ಮೀಟರಿಂಗ್ ವ್ಯವಸ್ಥೆಯಲ್ಲಿ ಎಲ್ಲ ವಿದ್ಯುತ್ ಅನ್ನು ನೇರವಾಗಿ ಹೆಸ್ಕಾಂಗೆ ಕೊಡಬಹುದಾಗಿದೆ.

ಸ್ವಂತ ಮನೆಗಳ ಮೇಲೆ ಸೌರಶಕ್ತಿ ಮೇಲ್ಚಾವಣಿ ಘಟಕ ಹಾಕಿಸಿದರೆ, ಒಟ್ಟು ಮೀಟರಿಂಗ್ ಹಾಗೂ ವಾಣಿಜ್ಯ ಉದ್ದೇಶಗಳಲ್ಲಿ ನಿವ್ವಳ ಮೀಟರಿಂಗ್ ಲಾಭದಾಯಕವಾಗಿದೆ ಎನ್ನುತ್ತಾರೆ ಆರ್ಬ್ ಎನರ್ಜಿಯ ಶಾಖಾ ಪ್ರಬಂಧಕ ಅಶೋಕ ಗಾಣಿಗ ಹಾಗೂ ಪ್ರತಿನಿಧಿ ಪ್ರಶಾಂತ ಕುಮಾರ್.

‘ಸೌರಶಕ್ತಿ ಘಟಕಕ್ಕೆ ಸಂಸ್ಥೆ 25 ವರ್ಷ ಗ್ಯಾರೆಂಟಿ ನೀಡುತ್ತದೆ. ನೀವು ಹೆಸ್ಕಾಂ ಜೊತೆ 25 ವರ್ಷಗಳ ಒಪ್ಪಂದ ಮಾಡಿಕೊಳ್ಳಬಹುದು. ಅಲ್ಲದೇ, ಸುಮಾರು 8 ವರ್ಷಗಳಲ್ಲಿ ಹೂಡಿಕೆ ವಾಪಸ್ ಪಡೆಯಬಹುದು. ವಾಣಿಜ್ಯ ಉದ್ದೇಶಿತ ಘಟಕಗಳಲ್ಲಿ ಮೂರರಿಂದ ನಾಲ್ಕು ವರ್ಷಗಳಲ್ಲಿ ಹೂಡಿಕೆ ವಾಪಸ್ ಬರಲಿದೆ. ಆದಾಯವೂ ಹೆಚ್ಚು’ ಎನ್ನುತ್ತಾರೆ ಆರ್ಬ್‌ ಎನರ್ಜಿಯ ಪ್ರಧಾನ ವ್ಯವಸ್ಥಾಪಕ ದತ್ತಾನಂದ ಶೆಟ್ಟಿ.

ಈಗ ಗೃಹ ಸಾಲ ನೀಡುವಾಗ ಸೌರಶಕ್ತಿ ಮೇಲ್ಚಾವಣಿ ಘಟಕವನ್ನೂ ಪರಿಗಣಿಸುತ್ತಾರೆ. ಹೀಗಾಗಿ ಕಡಿಮೆ ಬಡ್ಡಿಯಲ್ಲಿ ಸಾಲ ಪಡೆದುಕೊಳ್ಳಲು ಸಾಧ್ಯ ಎನ್ನುತ್ತಾರೆ ಅಶೋಕ ಗಾಣಿಗ. ಎಲ್ಲರೂ ದುಡಿದು ಮನೆಗೆ ಹಾಕಿ ಸುಸ್ತಾದರೆ, ಸೌರಶಕ್ತಿ ಘಟಕ ಹೊಂದಿದ ಮನೆಯೇ ನಮಗೆ ಆದಾಯ ನೀಡುತ್ತದೆ. ಈ ಘಟಕದಿಂದ ಮನೆಯ ತಾರಸಿಯ ರಕ್ಷಣೆ, ಪರಿಸರ ಸ್ನೇಹಿ ಆಗಿದೆ’ ಎನ್ನುತ್ತಾರೆ ಜಯಪ್ಪ ಬಣಕಾರ.

* * 

ಸ್ವಂತ ಮನೆ, ಕಟ್ಟಡ ಹೊಂದಿದವರು ಸುಲಭವಾಗಿ ಆದಾಯ ಪಡೆಯುವ ಸಾಧನ ಸೌರ ಶಕ್ತಿ ಫಲಕ 
ದತ್ತಾನಂದ ಶೆಟ್ಟಿ ಆರ್ಬ್‌ ಎನರ್ಜಿಯ ಪ್ರಧಾನ ವ್ಯವಸ್ಥಾಪಕ

ಹಾವೇರಿಯ ಅಶ್ವಿನಿ ನಗರದ ಮನೆಯ ಮೇಲೆ ಅಳವಡಿಸಲಾದ ಸೌರಶಕ್ತಿ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.