ADVERTISEMENT

ಎಂ.ಆರ್.ಪಿ.ಯೇ ಅಂತಿಮ ದರ: ಡಿ.ಸಿ.

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 8:37 IST
Last Updated 19 ಜುಲೈ 2017, 8:37 IST

ಹಾವೇರಿ: ‘ಯಾವುದೇ ಉತ್ಪನ್ನಕ್ಕೆ ‘ಎಂ.ಆರ್.ಪಿ.’ (ಗರಿಷ್ಠ ಚಿಲ್ಲರೆ ದರ)ಯೇ ಅಂತಿಮ ದರವಾಗಿದ್ದು, ಗ್ರಾಹಕರು ಅದಕ್ಕಿಂತ ಹೆಚ್ಚು ಪಾವತಿಸಬೇಕಾಗಿಲ್ಲ. ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್‌.ಟಿ.)ಯು ಎಂ.ಆರ್.ಪಿ.ಯಲ್ಲಿ ಅಡಕವಾಗಿರುತ್ತದೆ’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ಹೇಳಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಕರ್ನಾಟಕ ವಾಣಿಜ್ಯ ತೆರಿಗೆಗಳ ಇಲಾಖೆ ಹಾಗೂ ಕೇಂದ್ರ ಅಬಕಾರಿ ಮತ್ತು ಸೇವಾ ತೆರಿಗೆಗಳ ಇಲಾಖೆ ಸಹಯೋಗದಲ್ಲಿ ನಡೆದ  ‘ಜಿ.ಎಸ್‌.ಟಿ. ಕಾರ್ಯಾಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಜಿ.ಎಸ್‌.ಟಿ.ಯು ಪಾರದರ್ಶಕ ಮತ್ತು ಸರಳ ತೆರಿಗೆ ವ್ಯವಸ್ಥೆ. ಪ್ರತಿ ವ್ಯಕ್ತಿ ಯೂ ಪ್ರತ್ಯಕ್ಷ ಅಥವಾ ಪರೋಕ್ಷ ಗ್ರಾಹಕ. ಹೀಗಾಗಿ ಪ್ರತಿಯೊಬ್ಬರು ಈ ಬಗ್ಗೆ ಅರಿವು ಹೊಂದುವುದು ಅವಶ್ಯ’ ಎಂದರು. ‘ಜಿ.ಎಸ್‌.ಟಿ. ತೆರಿಗೆ ದರವನ್ನು 4 ಹಂತದಲ್ಲಿ ನಿಗದಿಪಡಿಸಲಾಗಿದ್ದು, ಶೇ 5, ಶೇ 12, ಶೇ 18 ಮತ್ತು ಶೇ 28 ಇವೆ. ಅಗತ್ಯ ವಸ್ತುಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ’ ಎಂದರು.

ADVERTISEMENT

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಬಿ. ಅಂಜನಪ್ಪ ಮಾತನಾಡಿ, ‘ಹೊಸ ವ್ಯವಸ್ಥೆಯಲ್ಲಿ ಆರಂಭಿಕ ಗೊಂದಲಗಳು ಸಹಜ’ ಎಂದರು. ಕೇಂದ್ರ ಅಬಕಾರಿ ಮತ್ತು ಸೇವಾ ತೆರಿಗೆಗಳ ಇಲಾಖೆಯ ಸಹಾಯಕ ಆಯುಕ್ತ ದ್ಯಾಮಪ್ಪ ಐರಣಿ ಮಾತನಾಡಿ, ‘ಜಿ.ಎಸ್.ಟಿ.ಯಿಂದ ಗ್ರಾಹಕರ ತೆರಿಗೆ ಹೊರೆ ಇಳಿಕೆಯಾಗಲಿದೆ. ಈ ವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ವಿಧಿಸುತ್ತಿದ್ದ ವಿವಿಧ ತೆರಿಗೆಗಳು ರದ್ದಾಗಲಿವೆ. ಗ್ರಾಹಕರು ಒಂದು ತೆರಿಗೆ ಮಾತ್ರ ಪಾವತಿಸಬೇಕಾಗಿದೆ’ ಎಂದರು.

‘ಉತ್ಪನ್ನಗಳ ಮೇಲೆ ಉತ್ಪಾದಕರು ಎಂ.ಆರ್‌.ಪಿ. ನಮೂದಿಸಲೇಬೇಕು. ಅದಕ್ಕಿಂತ ಹೆಚ್ಚಿನ ದರವನ್ನು ಗ್ರಾಹಕರಿಂದ ಪಡೆಯಬಾರದು. ಗ್ರಾಹಕರು ಕಡ್ಡಾಯವಾಗಿ ಖರೀದಿ ರಸೀದಿ ಪಡೆಯಬೇಕು. ಎಂ.ಆರ್.ಪಿ.ಯಲ್ಲೇ ಎಲ್ಲ ತೆರಿಗೆ ಅಡಕಗೊಂಡ ಕಾರಣ ರಸೀದಿ ಪಡೆದರೆ ಪ್ರತ್ಯೇಕ ತೆರಿಗೆ ಹಾಕುವುದಿಲ್ಲ’ ಎಂದರು.

‘ಅಂಗಡಿಗಳ ನಾಮಫಲಕದಲ್ಲಿ  ಜಿಎಸ್‌ಟಿ ನೋಂದಣಿ ಸಂಖ್ಯೆಯನ್ನು ಪ್ರದರ್ಶಿಸಬೇಕು. ಅಂಗಡಿ ಒಳಗೆ ಜಿ.ಎಸ್‌.ಟಿ. ಪ್ರಮಾಣ ಪತ್ರವನ್ನು ಪ್ರದರ್ಶಿಸಬೇಕು’ ಎಂದರು.
ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣದ ಹೆಚ್ಚುವರಿ ಆಯುಕ್ತ ವೈ.ಸಿ.ಶಿವಕುಮಾರ್‌ ಮಾತನಾಡಿ, ‘ಜಿ.ಎಸ್.ಟಿ. ಮೂಲಕ ದೇಶದಾದ್ಯಂತ ಒಂದೇ ತೆರಿಗೆ, ಒಂದೇ ನೋಂದಣಿ, ಒಂದೇ ಮಾದರಿ ತೆರಿಗೆ ವಿವರ ಸಲ್ಲಿಕೆ ಜಾರಿಗೆ ಬಂದಿದೆ’ ಎಂದರು.

‘ರಾಜ್ಯದ ಎಸ್‌.ಜಿ.ಎಸ್‌.ಟಿ., ಕೇಂದ್ರದ ಸಿ.ಜಿ.ಎಸ್‌.ಟಿ. ಹಾಗೂ ಅಂತರ ರಾಜ್ಯ ಮತ್ತು ಆಮದು– ರಫ್ತಿನ ಐ.ಜಿ.ಎಸ್‌.ಟಿ. ಸೇರಿಕೊಂಡು ಜಿ.ಎಸ್.ಟಿ. ಜಾರಿಗೆ ಬಂದಿದೆ’ ಎಂದರು. ‘ಅಗತ್ಯ ವಸ್ತುಗಳು, ‘ಬ್ರಾಂಡ್’ ರಹಿತ ಆಹಾರ ಪದಾರ್ಥಗಳು ಮತ್ತಿತರ ವಸ್ತುಗಳನ್ನು ತೆರಿಗೆಯಿಂದ ಮುಕ್ತಗೊಳಿಸಲಾಗಿದೆ. ₹20 ಲಕ್ಷದೊಳಗಿನ ವಹಿವಾಟುದಾರರಿಗೆ ವಿನಾಯಿತಿ, ಆನ್‌ಲೈನ್ ವಹಿವಾಟಿಗೆ ಕೇವಲ ಶೇ 1 ತೆರಿಗೆ, ಸಣ್ಣ ವ್ಯಾಪಾರಿಗಳಿಗೆ ರಾಜಿ ತೆರಿಗೆ, ಹಳೆಯ ವಸ್ತುಗಳಿಗೆ ವಿನಾಯ್ತಿ, ಸೇವಾವಲಯಕ್ಕೂ ತೆರಿಗೆ ವಿನಾಯ್ತಿ ನೀಡಲಾಗಿದೆ’ ಎಂದರು.

‘ಒಂದು ವಸ್ತುವನ್ನು ಉತ್ಪಾದಕರಿಂದ ಖರೀದಿಸಿ, ಬಳಿಕ ಮಾರಾಟ ಮಾಡುವ ವ್ಯಾಪಾರಿಗಳು, ‘ಇನ್‌ಫುಟ್’ ತೆರಿಗೆ ರಿಯಾಯ್ತಿ ಪಡೆಯಬಹುದು. ಸಾಮಾಜಿಕ ಸೇವೆಗಳಿಗೆ ತೆರಿಗೆ ವಿನಾಯ್ತಿ ಇದೆ’ ಎಂದರು. ಸರಕು ಮತ್ತು ಸೇವಾ ತೆರಿಗೆಗಳ ಇಲಾಖೆಯ ಹೆಚ್ಚುವರಿ ಆಯುಕ್ತ ಎಸ್.ಎಸ್.ಜಿಯಾವುಲ್ಲಾಖಾನ್, ಎಲ್.ಬಸವಣ್ಣ, ಜಂಟಿ ಆಯುಕ್ತರಾದ ಉದಯ ಶಂಕರ, ಪ್ರತಾಪ್‌ ಕುಮಾರ್, ಎಚ್.ಆರ್.ಶಿವಕುಮಾರ್  ಹಾವೇರಿ ಜಿಲ್ಲಾ ಸರಕು ಮತ್ತು ಸೇವಾ ಅಧಿಕಾರಿ ಮಹ್ಮದ್‌ ಇರ್ಫಾನುಲ್ಲಾ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತೆ ರುಕ್ಸಾನಾಬಾನು ಆರ್.ಗುಡಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.