ADVERTISEMENT

ಎಪಿಎಂಸಿಗೆ ರೈತರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 9:00 IST
Last Updated 8 ಫೆಬ್ರುವರಿ 2011, 9:00 IST

ರಾಣೆಬೆನ್ನೂರು: ನಗರದ ಎಪಿಎಂಸಿ ಮಾರುಕಟ್ಟೆಗೆ  ತಂದ ಹತ್ತಿಯನ್ನು ಖರೀದಿಸಲು ವ್ಯಾಪಾರಸ್ಥರು ಹಿಂದೇಟು ಹಾಕಿದ್ದಾರೆ ಎಂದು ಆರೋಪಿಸಿ ರೈತರು ಸೋಮವಾರ ಎಪಿಎಂಸಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಹಲಗೇರಿಯ ಮೈಲಪ್ಪ ಬ್ಯಾಡಗಿ, ಮಾರುಕಟ್ಟೆ ದಿನವಾದ ಸೋಮವಾರ ರೈತರು ಹತ್ತಿಯನ್ನು ತಂದಿದ್ದು ವ್ಯಾಪಾರಸ್ಥರು ಟೆಂಡರ್ ಹಾಕುವುದಿಲ್ಲ, ಎಪಿಎಂಸಿಯಿಂದ  ಸಾಗಾಣಿಕೆ ಪರವಾನಿಗೆ ಪತ್ರ ಸಿಗದ ಕಾರಣ ಎಪಿಎಂಸಿಯವರನ್ನೇ ಕೇಳಿ ಎಂದು ಹೇಳಿದ್ದಾರೆ. ಹೀಗಾಗಿ ರೈತರು ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿಸಿದರು.

‘ಮಾರುಕಟ್ಟೆ ಬಂದ್ ಇದೆ ಎಂದು ಹಿಂದಿನ ದಿನವೇ ತಿಳಿಸಿದ್ದರೆ ಮಾರುಕಟ್ಟೆಗೆ ಬರುತ್ತಿರಲಿಲ್ಲ.  ವಾಹನ ಬಾಡಿಗೆ ಕೊಡಲಿಕ್ಕೂ ನಮ್ಮಲ್ಲಿ ಹಣ ಇಲ್ಲ’ ಎಂದು ಕೆಲ ರೈತರು ದೂರಿದರು.
ಹತ್ತಿ ದರ ಕಡಿಮೆ ಮಾಡಬಾರದು, ಎಷ್ಟು ತಡವಾದರೂ ಇಂದೇ ಟೆಂಡರ್ ಹಾಕಿ ಎಲ್ಲ ರೈತರಿಗೆ ಬಿಲ್ ಪಾವತಿ ಮಾಡಬೇಕು ಎಂದು ರೈತರು ಆಗ್ರಹಿಸಿದರು.

ಎಪಿಎಂಸಿ ಅಧಿಕಾರಿ ಆರ್. ಚಂದ್ರಣ್ಣ ಮಾತನಾಡಿ, ಸಾಗಾಣಿಕೆ ಪತ್ರ ನೀಡಲು ಎಪಿಎಂಸಿ ವಿಳಂಬ ಮಾಡಿಲ್ಲ. ಆನ್‌ಲೈನ್ ಮೂಲಕ ವರ್ತಕರಿಗೆ ಸ್ಟಾಕ್ ಬಗ್ಗೆ ಮಾಹಿತಿ ನೀಡಲು ಸೂಚಿಸಲಾಗಿತ್ತು. ವರ್ತಕರು ‘35-ಎ’ ಫಾರ್ಮ್ ಅನ್ನು ತುಂಬಿದ ಮೇಲೆ ‘35-ಬಿ’ ಫಾರ್ಮ್ ನೀಡಲಾಗುವುದು. ಇನ್ನು ಮೇಲೆ ಸ್ಟಾಕ್ ತೋರಿಸಿದ ಮೇಲೆ ಸಾಗಾಣಿಕೆ ಪರವಾನಿಗೆ ನೀಡಲಾಗುವುದು ಎಂದರು.

ವರ್ತಕರ ಸಂಘದ ಅಧ್ಯಕ್ಷ ಆರ್.ಎನ್. ಪಾಟೀಲ ಹಾಗೂ ಕರ್ನಾಟಕ ರಾಜ್ಯ ಕಾಟನ್ ಅಸೋಸಿಯೇಷನ್‌ನ ಅಧ್ಯಕ್ಷ ವಿ. ಪಿ. ಲಿಂಗನಗೌಡ್ರ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿ, ಸಂಜೆ ಎಷ್ಟೇ ತಡವಾದರೂ ಸಾಗಾಣಿಕೆ ಪರವಾನಿಗೆ ನೀಡಲಾಗುವುದು, ಆದ್ದರಿಂದ ಟೆಂಡರ್ ಹಾಕಿ ಎಂದು ತಿಳಿಸಿದ ನಂತರ  ರೈತರು ಪ್ರತಿಭಟನೆ ಹಿಂದಕ್ಕೆ ತೆಗೆದುಕೊಂಡರು.

ಜಿಲ್ಲಾ ವಿಶೇಷ ಉಪವಿಭಾಗಾಧಿಕಾರಿ ಚೆನ್ನಬಸಪ್ಪ, ತಹಸೀಲ್ದಾರ ಮಹ್ಮದ್ ಝುಬೈರ್ ಹಾಗೂ ಎಪಿಎಂಸಿ ಕಾರ್ಯದರ್ಶಿ ಆರ್. ಚಂದ್ರಣ್ಣ ಚರ್ಚೆ ನಡೆಸಿದರು. ಮೈಲಪ್ಪ ಬ್ಯಾಡಗಿ, ಬಸವರಾಜ ಬಣಕಾರ, ಪುಟ್ಟಪ್ಪ ಕೆರೂಡಿ, ಶಂಭನಗೌಡ ಮರಕಳ್ಳಿ, ಜೆಟ್ಟೆಪ್ಪ ಹಲಗೇರಿ, ಬಸವರಾಜ ಕಜ್ಜರಿ, ಹಾಫೀಸ್‌ಸಾಬ್ ಉಕ್ಕುಂದ, ಕೋಟಿಹಾಳ ಬಿ.ಟಿ. ಪಾಟೀಲ, ಹರೀಶ ಕಾಯಕದ, ಲಿಂಗರಾಜ ಸಿದ್ದನಗೌಡ ಬಸರೀಹಳ್ಳಿ  ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.