ADVERTISEMENT

ಎಸ್ಸೆಸ್ಸೆಲ್ಸಿ: ಚೇತರಿಕೆ ಕಂಡ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 8 ಮೇ 2018, 13:01 IST
Last Updated 8 ಮೇ 2018, 13:01 IST

ಹಾವೇರಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯು ಶೇ 76.76 ಫಲಿತಾಂಶ ಪಡೆದು ರಾಜ್ಯದಲ್ಲಿ 23ನೇ ಸ್ಥಾನ ಗಳಿಸಿದೆ. ಒಟ್ಟಾರೆ ಫಲಿತಾಂಶ ಮತ್ತು ಸ್ಥಾನವು ಕಳೆದ ವರ್ಷಕ್ಕಿಂತ ಚೇತರಿಕೆ ಕಂಡಿದೆ.

ಜಿಲ್ಲೆಯಲ್ಲಿ 8,966 ಬಾಲಕರು ಮತ್ತು 9,764 ಬಾಲಕಿಯರು ಸೇರಿದಂತೆ ಒಟ್ಟು 18,730 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 6,493 ಬಾಲಕರು ಹಾಗೂ 7,885 ಬಾಲಕಿಯರು ಸೇರಿದಂತೆ ಒಟ್ಟು 14,378 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ 76.76 ಫಲಿತಾಂಶ ಬಂದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನಪ್ಪ ಎಂ. ವಡಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ಬಾರಿಗಿಂತ ಫಲಿತಾಂಶದಲ್ಲಿ ಚೇತರಿಕೆಯಾಗಿದೆ. ಆದರೆ, ನಾವು ಇನ್ನಷ್ಟು ನಿರೀಕ್ಷೆ ಇಟ್ಟಿದ್ದೆವು’ ಎಂದು ಅವರು ಹೇಳಿದರು.ಜಿಲ್ಲೆಯ 35 ಶಾಲೆಗಳು ಶೇ 100 ಫಲಿತಾಂಶ ಪಡೆದಿವೆ. ಈ ಪೈಕಿ 17 ಸರ್ಕಾರಿ, 17 ಅನುದಾನ ರಹಿತ
ಹಾಗೂ ಒಂದು ಅನುದಾನಿತ ಶಾಲೆಗಳಿವೆ. ಕಳೆದ ವರ್ಷ 23 ಶಾಲೆಗಳು ಶೇ 100 ಫಲಿತಾಂಶ ಪಡೆದಿದ್ದವು.

ADVERTISEMENT

ಚನ್ನಪ್ಪ ಕುನ್ನೂರ ಶಾಲೆಗೆ ಶೇ 94

ಶಿಗ್ಗಾವಿ: ಪಟ್ಟಣದ ಚನ್ನಪ್ಪ ಕುನ್ನೂರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫಲಿತಾಂಶ ಶೇ 94.33ರಷ್ಟಾಗಿದೆ. 53 ವಿದ್ಯಾರ್ಥಿಗಳು ಹಾಜರಾಗಿದ್ದು, 11 ಪ್ರಥಮ ಶ್ರೇಣಿ, 34 ಪ್ರಥಮ, 5 ದ್ವಿತೀಯ ಸೇರಿದಂತೆ ಒಟ್ಟು 50 ವಿದ್ಯಾರ್ಥಿಗಳು ಪಾಸಾಗಿದ್ದಾರೆ.ಅದರಲ್ಲಿ ಸೀಮಾ ಹಲಸೂರ ಶೇ 95.36 ಪ್ರಥಮ, ಪ್ರೀತಿ ಈಳಿಗೇರ ಶೇ.91.ದ್ವಿತೀಯ, ಐಶ್ವರ್ಯ ಕರಡಿ ಶೇ.91.04 ತೃತೀಯ ಸ್ಥಾನ ಪಡೆದಿದ್ದಾರೆ .

ಕನ್ನಡ ಮಾಧ್ಯಮ: ಚನ್ನಮ್ಮ ಕುನ್ನೂರ ಪ್ರೌಢಶಾಲೆ ಶೇ 97ರಷ್ಟು ಫಲಿತಾಂಶ ಬಂದಿದೆ. 60 ವಿದ್ಯಾರ್ಥಿಗಳು ಹಾಜರಾಗಿದ್ದು, 11 ಪ್ರಥಮ ಶ್ರೇಣಿ, 28 ಪ್ರಥಮ, 17 ದ್ವಿತೀಯ, 2 ತೃತೀಯ ಸ್ಥಾನ ಸಿಕ್ಕಿವೆ. ಅರುಣ ಮುರಾರಿ ಶೇ 94.24 ಪ್ರಥಮ, ಸೌಮ್ಯಾ ಹಾವಣಗಿ ಶೇ 91.52 ದ್ವಿತೀಯ, ರೋಶನಿ ಹೊಟೆಗಾಳಿ ಶೇ 90.24 ತೃತೀಯ ಸ್ಥಾನ ಪಡೆದಿದ್ದಾರೆ.

ದೇವಿಕಾ ಸ್ಕೂಲ್‌ಗೆ ಶೇ 90 ಫಲಿತಾಂಶ

ರಾಣೆಬೆನ್ನೂರು: ನಗರದ ದೇವಿಕಾ ಪ್ರೌಢಶಾಲೆಯ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಶೇ 90 ರಷ್ಟಾಗಿದೆ. ಒಟ್ಟು 172 ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ 35 ವಿದ್ಯಾರ್ಥಿಗಳು ಡಿಸ್ಟಿಂಕ್ಷೆನ್‌, ಪ್ರಥಮ ಶ್ರೇಣಿಯಲ್ಲಿ 94, ದ್ವಿತೀಯ ಶ್ರೇಣಿಯಲ್ಲಿ 24 ಪಾಸಾಗಿದ್ದಾರೆ. ಒಟ್ಟು 153 ವಿದ್ಯಾರ್ಥಿಗಳು ತೇಗರ್ಡೆ ಹೊಂದಿದ್ದಾರೆ.

ಸುಮೀನ್ ಜವಳಿ 609 ಅಂಕಗಳನ್ನು ಪಡೆದಿದ್ದು (ಶೇ 97.44) ಶಾಲೆಗೆ ಪ್ರಥಮ ಸ್ಥಾನ, ಲತಾ ಕಲ್ಲಪ್ಪಗೌಡ್ರು ಹಾಗೂ ಬಿ.ಎನ್. ಚಂದ್ರಶೇಖರ ತಲಾ 601 ಅಂಕಗಳನ್ನು (ಶೇ 96.16) ದ್ವಿತೀಯ ಸ್ಥಾನ, ಫರತುನ್ನೀಸಾ ದೊಡ್ಡಮನಿ 593 (ಶೇ 94.88) ಅಂಕಗಳನ್ನು ಗಳಿಸಿ ತೃತೀಯ ಸ್ಥಾನವನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ಎಸ್ಸೆಸ್ಸೆಲ್ಸಿಯಲ್ಲಿ ಹಾವೇರಿ ಜಿಲ್ಲೆಯ ಸಾಧನೆ

ವರ್ಷ –ಫಲಿತಾಂಶ (ಶೇ) –ಸ್ಥಾನ
2017–18 –76.76 –23
2016–17 –70.46 –26
2015–16 –75.45 –28
2014–15 –85.59 –21

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.