ADVERTISEMENT

ಕಲುಷಿತ ನೀರು ಪೂರೈಕೆ: ಆರೋಪ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 5:15 IST
Last Updated 15 ಸೆಪ್ಟೆಂಬರ್ 2011, 5:15 IST
ಕಲುಷಿತ ನೀರು ಪೂರೈಕೆ: ಆರೋಪ
ಕಲುಷಿತ ನೀರು ಪೂರೈಕೆ: ಆರೋಪ   

ಅಕ್ಕಿಆಲೂರ: ಕಲುಷಿತಗೊಂಡ ಕುಡಿಯುವ ನೀರು ಸೇವನೆಯಿಂದ ಗ್ರಾಮಸ್ಥರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಇಲ್ಲಿಗೆ ಸಮೀಪದ ಸೋಮಾಪುರ ಗ್ರಾಮಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ನೀರು ಪೂರೈಸುವ ಪೈಪ್‌ಲೈನ್ ಕಾಮ ಗಾರಿ ಯನ್ನು ವೀಕ್ಷಿಸಿದರು.

ಇದೆ ವೇಳೆ ತಮ್ಮ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ ವಿಫಲರಾಗಿದ್ದಾರೆ. ಪೈಪ್‌ಲೈನ್ ಹಳೆಯದಾಗಿದ್ದು, ಕೆಲವು ಸ್ಥಳಗಳಲ್ಲಿ ದುರಸ್ತಿ ಕೈಗೊಳ್ಳಬೇಕಾಗಿದೆ. ಹಲವು ವರ್ಷಗಳಿಂದ ದುರಸ್ತಿ ಮಾಡದೇ ಇರುವ ಹಿನ್ನೆಲೆಯಲ್ಲಿ ಚರಂಡಿ ಹಾಗೂ ಮಳೆ ನೀರು ಪೈಪ್‌ಲೈನ್‌ಗೆ ಸೇರುತ್ತಿ ದೆ.

ಪರಿಣಾಮವಾಗಿ ಅಶುದ್ಧ ನೀರು ಲಭ್ಯವಾಗುತ್ತಿದೆ. ಈ ಬಗ್ಗೆ ಗ್ರಾ.ಪಂ. ಮೌನ ತಾಳಿದೆ ಎಂದು ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ದೂರಿದರು. ಗ್ರಾಮದ ಬಸವೇಶ್ವರ ದೇವಸ್ಥಾನದ ಹಿಂದಿನ ಪ್ರದೇಶದಲ್ಲಿರುವ ಮನೆಗಳಿಗೆ ಅಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿರುವುದು ಈ ವೇಳೆಯಲ್ಲಿ ಗಮನಕ್ಕೆ ಬಂದಿತು.

ಕಳೆದ ಕೆಲವು ತಿಂಗಳುಗಳ ಹಿಂದೆ ಮನೆಗಳ ಎದುರಿನ ನಲ್ಲಿಗಳನ್ನು ಎತ್ತರಿಸಲಾಗಿತ್ತು. ಪೈಪ್‌ಲೈನ್ ಸಾಕಷ್ಟು ಹಳೆಯದಾಗಿದ್ದರಿಂದ ಎತ್ತರದ ನಲ್ಲಿಗಳ ಮುಖಾಂತರ ನೀರು ಬರುತ್ತಿರಲಿಲ್ಲ. ಈ ಬಗ್ಗೆ ಗ್ರಾ.ಪಂ. ಕೂಡ ನಿರ್ಲಕ್ಷ್ಯ ತಾಳಿತ್ತು.

ಹೀಗಾಗಿ ಅನಿವಾರ್ಯವಾಗಿ ಅಲ್ಲಿನ ನಿವಾಸಿಗಳು ನಲ್ಲಿಗಳನ್ನು ತುಂಡರಿಸಿ ಗುಂಡಿ ಭಾಗದಲ್ಲಿದ್ದ ಪೈಪ್‌ಗಳ ಮೂಲಕವೇ ನೀರು ಸಂಗ್ರಹಿಸುತ್ತಿದ್ದರು. ಈ ಪೈಪ್‌ಗಳಲ್ಲಿ ಅಶುದ್ಧ ನೀರು ಸಂಗ್ರವಾಗಿ ಈ ಘಟನೆಗೆ ನಡೆದಿದೆ ಎಂದು ಸ್ವತಃ ಗ್ರಾಮಸ್ಥರೇ ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ಅಕ್ಕಿಆಲೂರ ಕ್ಷೇತ್ರದ ಜಿಲ್ಲಾ ಪಂಚಾಯತಿ ಸದಸ್ಯೆ ಗೀತಾ ಅಂಕಸಖಾನಿ ಗ್ರಾ.ಪಂ.ನಲ್ಲಿ ಲಭ್ಯವಿರುವ ಅನದಾನದಲ್ಲಿ ಕೂಡಲೇ ನೂತನ ಪೈಪ್‌ಲೈನ್ ಕಾಮಗಾರಿ ಅಳವಡಿಸುವ ಮೂಲಕ ಶುದ್ಧ ನೀರು ಪೂರೈಸುವಂತೆ ಗ್ರಾ.ಪಂ. ಆಡಳಿತಕ್ಕೆ ಸೂಚಿ ಸಿದರು.

ಗ್ರಾಮ ಪಂಚಾಯತಿ ಸದಸ್ಯ ನಿಜಲಿಂಗಪ್ಪ ಮುದಿಯಪ್ಪ ನವರ, ಡಾ.ಮಾರುತಿ ಚಿಕ್ಕಣ್ಣನವರ, ರಾಜಣ್ಣ ಅಂಕಸಖಾನಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಲ್. ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಗ್ರಾಮದಲ್ಲಿ ಅಸ್ವಸ್ಥತೆ ಪ್ರಕರಣಗಳು ನಿಯಂತ್ರಣಕ್ಕೆ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.