ADVERTISEMENT

ಕಸಾಯಿಖಾನೆ ಬಂದ್ ಮಾಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 9:19 IST
Last Updated 23 ಸೆಪ್ಟೆಂಬರ್ 2013, 9:19 IST

ಹಾವೇರಿ: ‘ಗೋವು ಹಿಂದುಗಳ ಧೈವಿ ಸ್ವರೂಪ. ಗೋವು ಭಕ್ಷಿಸುವುದು ಮಹಾಪಾಪ. ಆದ್ದರಿಂದ ಜಿಲ್ಲೆಯಲ್ಲಿ­ರುವ ಕಸಾಯಿಖಾನೆ­ಗಳನ್ನುಕೂಡಲೇ ಬಂದ್ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ’ ಎಂದು ಅಖಿಲ ಭಾರತ ಹಿಂದು ಮಹಾಸಭಾ ರಾಜ್ಯ ಘಟಕದ ಗೌರವಾಧ್ಯಕ್ಷ ಪ್ರಣವಾ­ನಂದ ರಾಮ್ ಶ್ರೀ ಎಚ್ಚರಿಸಿದರು.

ನಗರದ ಶಿವಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಅಖಿಲ ಭಾರತ ಹಿಂದು ಮಹಾಸಭಾದ ಜಿಲ್ಲಾ ಸಂಘಟನಾ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ದೇಶದಲ್ಲಿ ಗೋಹತ್ಯೆಯನ್ನು ಸಂಪೂ­ರ್ಣವಾಗಿ ನಿಷೇಧಿಸಬೇಕು. ಹಿಂದುಗಳ ಮೇಲೆ ನಡೆಯುವ ಶೋಷಣೆ ನಿಲ್ಲ­ಬೇಕು ಎಂದ ಪ್ರಣವಾನಂದ ಶ್ರೀ,  ‘ಹಿಂದು ಸಂಘಟನೆ ಮತ್ತು ಹಿಂದುತ್ವದ ಬಗ್ಗೆ ಮಾತನಾಡುವ ವ್ಯಕ್ತಿಗಳ ಮೇಲೆ ಪೊಲೀಸರಿಂದ ಆಗುತ್ತಿರುವ ಅನಗತ್ಯ ಕಿರುಕುಳವನ್ನು ತಪ್ಪಿಸಬೇಕು’ ಎಂದು ಆಗ್ರಹಿಸಿದರು.

‘ದೇಶದ ಸಾಹಿತಿಗಳಿಂದಲೂ ಹಿಂದು­ತ್ವಕ್ಕೆ ಅಪಮಾನ­ವಾಗಿದೆ. ಯೊಗೀಶ ಮಾಸ್ಟರ್ ‘ಢುಂಢಿ’ ಕೃತಿಯಲ್ಲಿ ಗಣಪತಿ ಬಗ್ಗೆ ಅವಹೇಳನಕಾರಿಯಾಗಿ ಬರೆದು ಅವಮಾನಿಸಿದ್ದಾರೆ. ಸಾಹಿತಿ ಯು.­ಆರ್. ಅನಂತಮೂರ್ತಿ ಅವರು ನರೇಂದ್ರ ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವುದಾಗಿ ಹೇಳಿದ್ದಾರೆ. ಇಂತಹ ಸಾಹಿತಿಗಳನ್ನು ಪೊಲೀಸರು ಗಡಿಪಾರು ಮಾಡಬೇಕು’ ಎಂದು ಒತ್ತಾಯಿಸಿ­ದರು.

ಚಿತ್ರದುರ್ಗದ ಬಂಜಾರ ಪೀಠದ ಸರ್ದಾರ್ ಸೇವಾಲಾಲ್ ಶ್ರೀ ಮಾತನಾಡಿ, ‘ಜಗತ್ತಿಗೆ ಶಾಂತಿ ಸಂದೇಶ ಸಾರಿದ ಕೀರ್ತಿ ದೇಶಕ್ಕಿದೆ. ಧಾರ್ಮಿಕ, ಆಧ್ಯಾತ್ಮಿಕ ಶಕ್ತಿ ಕೇಂದ್ರವಾದ ಭಾರತದಲ್ಲಿ ಹಿಂದು ಸಂಸ್ಕೃತಿ, ಸಂಸ್ಕಾರ ಮತ್ತು ಧಾರ್ಮಿಕ ರಕ್ಷಣೆಗೆ ಹಿಂದುಗಳು ಸಂಘಟಿತರಾಗಬೇಕು’ ಎಂದು ಸಲಹೆ ಮಾಡಿದರು.

ಚಿತ್ರದುರ್ಗ ಮಡಿವಾಳ ಮಠದ ಬಸವ ಮಾಚೀ ದೇವರು, ವೇದಾಂತ ಶ್ರೀಗಳು, ಅಖಿಲ ಭಾರತ ಹಿಂದು ಮಹಾಸಭಾದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಾ. ಸಂತೋಷ್ ರಾಯ್, ರಾಜ್ಯ ಅಧ್ಯಕ್ಷ ಶ್ರವಣಕು­ಮಾರ ರಾಯ್ಕರ್, ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಕೆ. ರವಿಚಂದ್ರ ರಾವ್ ಮತ್ತಿತರರು ಸಮಾರಂಭದಲ್ಲಿ ಭಾಗವ­ಹಿಸಿದ್ದರು.

ಸಮಾರಂಭಕ್ಕೂ ಮುನ್ನ ಹಿಂದು ಧರ್ಮ ರಕ್ಷಣೆ ಮತ್ತು ಜಾಗೃತಿ ಕುರಿತು ಹಿಂದು ಮಹಾಸಭಾದ ಜಿಲ್ಲಾ ಸಂಘಟ­ನೆಯ ಕಾರ್ಯಕರ್ತರು ಮೆರವಣಿಗೆ ನಡೆಸಿ­ದರು.

ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರ ಮೈಲಾರ ಮಹಾದೇವ ಸರ್ಕಲ್‌ನಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸಿದ್ದಪ್ಪ ವೃತ್ತದಲ್ಲಿ ಸಭೆಯಾಗಿ ಮಾರ್ಪಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.