ADVERTISEMENT

ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬಂಡಾಯದ ಬಿಸಿ!

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 13:02 IST
Last Updated 18 ಏಪ್ರಿಲ್ 2013, 13:02 IST

ಹಾವೇರಿ: ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ... ಅಧಿಕೃತ ಅಭ್ಯರ್ಥಿಗಳಲ್ಲಿ ತಳಮಳ... ಬಂಡಾಯ ಶಮನಕ್ಕೆ ವರಿಷ್ಠರ ಮೊರೆ...ಗುಟ್ಟು ಬಿಟ್ಟು ಕೊಡದ ಬಂಡಾಯ ಅಭ್ಯರ್ಥಿಗಳು... ಮನದ ತಳಮಳದ ಮಧ್ಯೆಯೂ ಮತದಾರರ ಮನೆ ತಲುಪುತ್ತಿರುವ ಅಭ್ಯರ್ಥಿಗಳು...!

ಜಿಲ್ಲೆಯ ಆರು ವಿಧಾನಸಭೆ ಕ್ಷೇತ್ರಗಳಿಗೆ ಬುಧವಾರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಕಂಡು ಬರುತ್ತಿರುವ ದೃಶ್ಯಾವಳಿಗಳು.

ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನ ಪಕ್ಷದ ಮುಖಂಡರಲ್ಲಿ ಒಗ್ಗಟ್ಟಿನ ಮಂತ್ರ, ಪಕ್ಷ ಯಾವ ಅಭ್ಯರ್ಥಿಗೆ ಟಿಕೆಟ್ ನೀಡುತ್ತೋ ಅದೇ ಅಭ್ಯರ್ಥಿ ಪರ ಕೆಲಸ ಮಾಡುವ ಘೋಷಣೆ ಸಾಮಾನ್ಯವಾಗಿದ್ದವು. ಪ್ರತಿಭಟನೆ, ಹೋರಾಟ ಹಾಗೂ ತಮ್ಮ ಪಕ್ಷದ ಸಭೆ, ಸಮಾರಂಭಗಳಲ್ಲಿ ಒಟ್ಟಿಗೆ ಭಾಗವಹಿಸಿ ಪರಸ್ಪರ ಹೊಗಳಿಕೆ ಮೂಲಕ ತಾವು ಅನ್ಯೋನ್ಯವಾಗಿದ್ದೇವೆ ಎಂಬುದನ್ನು ಜನರೆದುರು ತೋರಿಸುತ್ತಿದ್ದರು.

ಚುನಾವಣೆ ಘೋಷಣೆಯಾಗಿ ಕೇವಲ ಹದಿನೈದು ದಿನಗಳು ಗತಿಸಿವೆ. ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಘೋಷಣೆ ಮಾಡಿದೆ. ಅಭ್ಯರ್ಥಿಗಳು ಸಹ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಟಿಕೆಟ್ ಆಕಾಂಕ್ಷಿಗಳು ಟಿಕೆಟ್ ಸಿಗದ ಕಾರಣ ಪಕ್ಷದ ಮುಖಂಡರ ಹಾಗೂ ಪಕ್ಷದ ವಿರುದ್ಧವೇ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ.

ಟಿಕೆಟ್ ಸಿಗದ ಕಾರಣಕ್ಕೆ ಹಿಂದಿನ ಒಗ್ಗಟ್ಟು, ಪಕ್ಷದ ಪರ ಕೆಲಸ ಮಾಡುವ ಘೋಷಣೆ, ಪಕ್ಷ ನಿಷ್ಠೆ, ಅನ್ಯೋನ್ಯತೆ ಎಲ್ಲವೂ ಕಾಣದಾಗಿವೆ. ಹಿಂದಿದ್ದ ಸ್ನೇಹಿತರು ಈಗ ವಿರೋಧಿಗಳಾಗಿದ್ದಾರೆ. ಕೆಲ ಅಭ್ಯರ್ಥಿಗಳೂ ಪಕ್ಷಕ್ಕೆ ಸೆಡ್ಡು ಹೊಡೆದು ಬಂಡಾಯ ಅಭ್ಯರ್ಥಿಗಳಾಗಿದ್ದರೆ, ಟಿಕೆಟ್ ವಂಚಿತ ಬಹುತೇಕ ಆಕಾಂಕ್ಷಿಗಳು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯಲು ಧೈರ್ಯವಿಲ್ಲದೇ, ಮೌನವಾಗಿದ್ದುಕೊಂಡು ತಮಗೆ ಟಿಕೆಟ್ ಕೊಡದ ಪಕ್ಷಕ್ಕೆ ಹಾಗೂ ಕೊಡಿಸದ ಮುಖಂಡರಿಗೆ ತಕ್ಕ ಪಾಠ ಕಲಿಸಲು ತೆರೆಮರೆಯ ಪ್ರಯತ್ನ ನಡೆಸಿದ್ದಾರೆ.

ಬಂಡಾಯದ ಛಾಯೆ: ಹಾವೇರಿ, ರಾಣೆಬೆನ್ನೂರ, ಬ್ಯಾಡಗಿ, ಹಾನಗಲ್ ಹಾಗೂ ಹಿರೇಕೆರೂರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಸಹಜವಾಗಿ ಹೆಚ್ಚಾಗಿತ್ತು. ಆದರೆ, ಹಳೆ ತಲೆಗಳಿಗೆ ಮತ್ತೆ ಮಣೆ ಹಾಕುವ ಮೂಲಕ ಹೊಸ ಆಕಾಂಕ್ಷಿಗಳ ಆಸೆಗೆ ತಣ್ಣೀರೆಚಿದೆ. ಇದರಿಂದ ಬಂಡಾಯದ ಬಿಸಿ ಎಲ್ಲ ಪಕ್ಷಗಳಿಗಿಂತ ಕಾಂಗ್ರೆಸ್‌ನಲ್ಲಿ ಹೆಚ್ಚಾಗಿದೆ.

ರಾಣೆಬೆನ್ನೂರಿನಲ್ಲಿ ಕಾಂಗ್ರೆಸ್‌ನ ಪ್ರಬಲ ಆಕಾಂಕ್ಷಿಯಾಗಿದ್ದ ಆರ್.ಶಂಕರ್ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಈಗ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ಕೆ.ಬಿ.ಕೋಳಿವಾಡ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಮುಖಂಡರಾದ ರುಕ್ಮಿಣಿ ಸಾವುಕಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದರೂ ಕೊನೆಗಳಿಗೆಯಲ್ಲಿ ಹಿಂದೆ ಸರಿದು ಆಶ್ಚರಿ ಮೂಡಿಸಿದ್ದಾರೆ.

ಅದೇ ರೀತಿ ಹಿರೇಕೆರೂರ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದ ಜಿ.ಪಂ. ಮಾಜಿ ಸದಸ್ಯ ಪಿ.ಡಿ.ಬಸನಗೌಡರ ಅವರು ತಮಗೆ ಟಿಕೆಟ್ ದೊರೆಯದಿದ್ದಕ್ಕೆ ಬೇಸತ್ತು. ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿ ಕಾಂಗ್ರೆಸ್‌ನ ಅಭ್ಯರ್ಥಿ ಬಿ.ಸಿ.ಪಾಟೀಲ ವಿರುದ್ಧ ಬಂಡಾಯದ ಕಹಳೆ ಉದಿದ್ದಾರೆ.

ಹಿಂದೆ ಸರಿಯಲ್ಲ: ಹತ್ತು ಹಲವು ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಾ ಬಂದಿದ್ದು, ಪಕ್ಷವು ಟಿಕೆಟ್ ನೀಡದೇ ತಮ್ಮನ್ನು ಕಡೆಗಣಿಸಿದೆ. ಪಕ್ಷದ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಒತ್ತಾಸೆಯ ಮೇರೆಗೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಾಗಿದೆ. ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ಸು ಪಡೆಯುವುದಿಲ್ಲ ಎಂದು ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಪಿ.ಡಿ.ಬಸನಗೌಡರ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಬ್ಯಾಡಗಿ, ಹಾನಗಲ್ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದರೂ, ಅಲ್ಲಿ ಯಾವುದೇ ಆಕಾಂಕ್ಷಿಗಳು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿಲ್ಲ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡುವುದಾಗಿ ಹೇಳಿಲ್ಲ. ಹೀಗಾಗಿ ಅಧಿಕೃತ ಅಭ್ಯರ್ಥಿಗಳಾದ ಮಾಜಿ ಸಚಿವ ಬಸವರಾಜ ಶಿವಣ್ಣನವರ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಮನೋಹರ ತಹಶೀಲ್ದಾರ್‌ರು ಒಂದು ರೀತಿಯಲ್ಲಿ ಟಿಕೆಟ್ ವಂಚಿತರ `ಮೌನ ಬಂಡಾಯ' ಎದುರಿಸುವ ಭಯದಲ್ಲಿದ್ದಾರೆ.

ಹಾವೇರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಟಿಕೆಟ್ ಆಕಾಂಕ್ಷಿಗಳಲ್ಲಿ ರುದ್ರಪ್ಪ ಲಮಾಣಿ, ಪರಮೇಶ್ವರಪ್ಪ ಮೇಗಳಮನಿ, ಶಿವಕುಮಾರ ತಾವರಗಿ, ಜಗದೀಶ ಬೇಟಗೇರಿ ಪ್ರಮುಖರಾಗಿದ್ದರು. ರುದ್ರಪ್ಪ ಲಮಾಣಿಗೆ ಟಿಕೆಟ್ ಘೋಷಣೆಯಾದ ನಂತರ ಶಿವಕುಮಾರ ತಾವರಗಿ ಬಂಡಾಯದ ಬಾವುಟ ಹಾರಿಸಲು ಮುಂದಾಗಿದ್ದರೂ ಕೊನೆಗಳಿಗೆಯಲ್ಲಿ ಹಿಂದೆ ಸರಿದರು. ಈಗ ಬಹುತೇಕ ಟಿಕೆಟ್ ಆಕಾಂಕ್ಷಿಗಳು ಅಧಿಕೃತ ಅಭ್ಯರ್ಥಿ ರುದ್ರಪ್ಪ ಲಮಾಣಿ ಪರ ಕೆಲಸ ಮಾಡುತ್ತ್ದ್ದಿದಾರೆ. ಆದರೆ, ಜಿ.ಪಂ.ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ ಕಾಂಗ್ರೆಸ್ ತೊರೆದು ಜೆಡಿಎಸ್‌ನಲ್ಲಿ ಆಶ್ರಯ ಪಡೆಯಲು ಯಶಸ್ವಿಯಾಗಿದ್ದಲ್ಲದೇ, ಆ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ವರಿಷ್ಠರ ಮೊರೆ: ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುವ ಕೇಂದ್ರದ ರಾಜ್ಯ ರೈಲ್ವೆ ಸಚಿವ ಕೊಟ್ಲಾ ಸೂರ್ಯನಾರಾಯಣರೆಡ್ಡಿ, ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದಾರೆ. ಜಿಲ್ಲೆಯ ಬಂಡಾಯ ಶಮನ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಜಿಲ್ಲೆಯ ಬಹುತೇಕ ಟಿಕೆಟ್ ವಂಚಿತ ಆಕಾಂಕ್ಷಿಗಳನ್ನು ಭೇಟಿ ಮಾಡಲಾಗಿದೆ. ಅವರೆಲ್ಲರೂ ಪಕ್ಷದ ಅಭ್ಯರ್ಥಿಪರ ಕೆಲಸ ಮಾಡಲು ಒಪ್ಪಿದ್ದಾರೆ ಎಂದು ಸೂರ್ಯನಾರಾಯಣರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.