ADVERTISEMENT

ಕ್ಷೇತ್ರ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 10:01 IST
Last Updated 31 ಮಾರ್ಚ್ 2018, 10:01 IST

ಶಿಗ್ಗಾವಿ (ಹಾವೇರಿ ಜಿಲ್ಲೆ): ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿನಮರದ ಹೇಳಿರುವಂತೆ, ಕ್ಷೇತ್ರ ಬಿಟ್ಟು ಕೊಡುವ ಕುರಿತು ತಮ್ಮಿಬ್ಬರ ನಡುವೆ ಮಾತುಕತೆಯೇ ನಡೆದಿಲ್ಲ. ಹೀಗಾಗಿ, ಕ್ಷೇತ್ರ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಬಸವರಾಜ ಬೊಮ್ಮಾಯಿ ಶುಕ್ರವಾರ ಇಲ್ಲಿ ಸ್ಪಷ್ಟಪಡಿಸಿದರು.ಬೇವಿನಮರದ ಹಾಗೂ ಮಾಜಿ ಶಾಸಕ ರಾಜಶೇಖರ ಸಿಂಧೂರ ಅವರ ಬಂಡಾಯವು ತಮ್ಮ ವಿರುದ್ಧವಲ್ಲ; ಬದಲಿಗೆ ಇಡೀ ಕ್ಷೇತ್ರದ ಮತದಾರರ ವಿರುದ್ಧದ ಬಂಡಾಯ ಎಂದ ಅವರು, ಪ್ರಬುದ್ಧರಾಗಿರುವ ಕ್ಷೇತ್ರದ ಜನರಿಗೆ ಪ್ರಸ್ತುತ ರಾಜಕೀಯ ವಿದ್ಯಮಾನದ ಅರಿವಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ನಾನು ಸಚಿವನಾಗಿದ್ದಾಗ ಬೇವಿನಮರದ ಅವರನ್ನು ಕಾಡಾ ಅಧ್ಯಕ್ಷರನ್ನಾಗಿ, ಸಿಂಧೂರ ಅವರನ್ನು ನಿಗಮದ ಅಧ್ಯಕ್ಷರನ್ನಾಗಿ ಮಾಡಲಾಯಿತು. ಬಿಜೆಪಿ ನೀಡಿದ ಎಲ್ಲ ರಾಜಕೀಯ ಸ್ಥಾನ ಅನುಭವಿಸಿ ಈಗ ಪಕ್ಷಕ್ಕೆ ಹಾನಿಯಾಗುವಂತೆ ಅವರು ನಡೆದುಕೊಳ್ಳುತ್ತಿದ್ದಾರೆ. ಈ ಕುರಿತು ವರಿಷ್ಠರಿಗೂ ಮಾಹಿತಿಯಿದೆ. ಸೂಕ್ತ ಸಂದರ್ಭದಲ್ಲಿ ಅವರು ಕ್ರಮ ಕೈಗೊಳ್ಳುತ್ತಾರೆ’ ಎಂದರು.

ಪಕ್ಕಾ ಸ್ಥಳೀಯ: ಶಿಗ್ಗಾವಿ–ಸವಣೂರ ಕ್ಷೇತ್ರಕ್ಕೆ ಸಂಬಂಧಿಸಿ ತಾವು ಪಕ್ಕಾ ಸ್ಥಳೀಯ ವ್ಯಕ್ತಿ ಎಂದ ಬೊಮ್ಮಾಯಿ, ‘ನನ್ನ ತಾಯಿ ಊರು ಧುಂಡಸಿ. ತಂದೆ ಊರು ಕಾರಡಗಿ. ನಾನು ಈ ಕ್ಷೇತ್ರದಲ್ಲಿಯೇ ನನ್ನ ಬಾಲ್ಯ ಕಳೆದಿದ್ದೇನೆ. ಶಾಸಕನಾಗುವ ಮುಂಚೆಯೇ ಕ್ಷೇತ್ರದೊಂದಿಗೆ ನಂಟು ಬೆಳೆಸಿಕೊಂಡಿದ್ದೇನೆ. ನನ್ನ ಅಜ್ಜ, 1952ರಲ್ಲಿ ಶಿಗ್ಗಾವಿ ಕ್ಷೇತ್ರದ ಮೊದಲ ಶಾಸಕರಾಗಿದ್ದರು’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.