ADVERTISEMENT

ಗೋಶಾಲೆ ತೆರೆಯಲು ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2012, 8:50 IST
Last Updated 23 ಜುಲೈ 2012, 8:50 IST

ಹಾವೇರಿ: ಜಿಲ್ಲೆಯಲ್ಲಿ ಗೋಶಾಲೆ ತೆರೆಯುವ ಅಗತ್ಯವಿದ್ದಲ್ಲಿ ರೈತರ ಅಭಿಪ್ರಾಯ ಪಡೆದು ಪ್ರಾರಂಭಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ. ಉದಾಸಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆಡಳಿತ ಭವನದಲ್ಲಿ ಶನಿವಾರ ನಡೆದ ಜಿಲ್ಲೆಯ ಬರ ಪರಸ್ಥಿತಿ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾನುವಾರುಗಳಿಗೆ ಮೇವಿನ ಕೊರತೆ ಯಿದ್ದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಗೋಶಾಲೆ ಆರಂಭಿಸಲು ಸ್ಥಳ ಪರಿಶೀಲಿಸಿ ವರದಿ ನೀಡಬೇಕು. ಗೋಶಾಲೆ ತೆರೆದರೆ ರೈತರು ಜಾನು ವಾರುಗಳನ್ನು ಗೋಶಾಲೆಯಲ್ಲಿ ಬಿಡಲು ಸಿದ್ಧರಿದ್ದಾರೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಬೆಕು ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ADVERTISEMENT

ಜಿಲ್ಲೆಯಲ್ಲಿ ಬೀಜ, ರಸಗೊಬ್ಬರ ಸಮಸ್ಯೆ ಎದುರಾದ ಕೂಡಲೆ ತಮ್ಮ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಗಮನಹರಿಸಬೇಕು. ಜಿಲ್ಲೆಯ ಬರ ನಿರ್ವಹಣೆಗೆ ಅನುದಾನದ ಕೊರತೆ ಯಿಲ್ಲ. ಆದರೆ,  ಬರ ಪರಸ್ಥಿತಿಯನ್ನು ಅಚ್ಚುಕಟ್ಟಾಗಿ ನಿಬಾಯಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕ ಶಿವರಾಮ ಬಟ್ ಮಾತ ನಾಡಿ, ಜಿಲ್ಲೆಯಲ್ಲಿ ಜಾನುವಾರು ಗಳಿಗೆ ಮೂರು ತಿಂಗಳಿಗಾಗುವಷ್ಟು ಮೇವು ಸಂಗ್ರಹವಿದೆ ಅಲ್ಲದೇ, ಸದ್ಯಕ್ಕೆ ಮೇವಿನ ಕೊರತೆಯಿಲ್ಲ ಎಂದು ತಿಳಿಸಿದರು.
ಜಿ.ಪಂ. ಎಂಜಿನಿಯರ್ ಶ್ರೀಕಾಂತ ಮೈಸೂರ ಮಾತನಾಡಿ, ಜಿಲ್ಲೆಯ ರಾಣೆಬೆನ್ನೂರ 27, ಬ್ಯಾಡಗಿ 23, ಹಿರೇಕೆರೂರ 57, ಶಿಗ್ಗಾವಿ 56, ಸವಣೂರ 41 ಸೇರಿದಂತೆ ಅಗತ್ಯವಿದ್ದಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ ನೀರನ್ನು ಪೂರೈಸಲಾಗುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಇದ್ದ ಗ್ರಾಮಗಳಲ್ಲಿ ಈಗಾಗಲೇ ನೀರು ಪೂರೈಸುವ  ಕಾರ್ಯ ಆರಂಭವಾಗಿದೆ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೆಶಕ ಗಣೇಶ ಮಾತನಾಡಿ, ಜಿಲ್ಲೆಯಲ್ಲಿ ಶೇ.50ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಪ್ರಸಕ್ತ ಜಿಲ್ಲೆಗೆ ಪೂರೈಕೆಯಾಗಿದ 54,129 ಟನ್ ರಸಗೊಬ್ಬರದಲ್ಲಿ 30,969 ಟನ್ ರಸಗೊಬ್ಬರ ರೈತರಿಗೆ ವಿತರಿಸಲಾಗಿದ್ದು, 23,160 ಟನ್ ರಸಗೊಬ್ಬರ ದಾಸ್ತಾನಿದೆ ಎಂದ ಅವರು, 4 ಲಕ್ಷ ಬಿ.ಟಿ. ಹತ್ತಿ ಪ್ಯಾಕೆಟ್‌ಗಳು ಜಿಲ್ಲೆಗೆ ಬಂದಿದ್ದು, ಅದರಲ್ಲಿ 3 ಲಕ್ಷ ಪ್ಯಾಕೆಟ್‌ಗಳನ್ನು ರೈತರಿಗೆ ವಿತರಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅರವಿಂದ ಶ್ರೀವಾಸ್ತವ್, ಶಾಸಕ ನೆಹರೂ ಓಲೇಕಾರ, ಶಾಸಕರಾದ ಜಿ. ಶಿವಣ್ಣ, ಬಿ.ಸಿ.ಪಾಟೀಲ್, ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ, ಜಿ.ಪಂ.ಅಧ್ಯಕ್ಷೆ ಸಾವಿತ್ರಿ ತಳವಾರ, ಉಪಾಧ್ಯಕ್ಷೆ ಪಾರ್ವತಿ ಭೊಗಾವಿ, ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ್, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ ಅಪರ ಜಿಲ್ಲಾಧಿಕಾರಿ ಜಿ.ಜಗದೀಶ, ಉಪ ವಿಭಾಗಾಧಿಕಾರಿ ಸುರೇಶ ಇಟ್ನಾಳ, ಪ್ರೋಬೇಶನರಿ ಉಪವಿಭಾಗಾಧಿಕಾರಿ ಸತೀಶ ಕುಮಾರ, ಜಿ.ಪಂ. ಉಪ ಕಾರ್ಯದರ್ಶಿ ಜಿ. ಗೋವಿಂದಸ್ವಾಮಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.