ಹಾವೇರಿ: ಗ್ರಾಮದಲ್ಲಿ ನಡೆಯುತ್ತಿ ರುವ ಅಕ್ರಮ ಮದ್ಯ ಮಾರಾಟವನ್ನು ಸ್ಥಗಿತಗೊಳಿಸ ಬೇಕೆಂದು ಒತ್ತಾಯಿಸಿ ತಾಲ್ಲೂಕಿನ ಕನವಳ್ಳಿ ಗ್ರಾಮದಲ್ಲಿ ಬುಧವಾರ ಗ್ರಾಮದ ಸ್ತ್ರೀ ಶಕ್ತಿ ಸಂಘ ಟನೆಗಳ ಸದಸ್ಯೆಯರು, ರೈತ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಸುಮಾರು ಆರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ ಮಹಿಳೆಯರು ಮದ್ಯ ಮಾರಾಟ ನಿಷೇಧಕ್ಕೆ ಹಿಂದೇಟು ಹಾಕುತ್ತಿರುವ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.ಮಹಿಳೆಯರು ಗ್ರಾ.ಪಂ.ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದರಿಂದ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ನಡೆಯಬೇಕಿದ್ದ ಗ್ರಾಮಸಭೆ ರದ್ದಾಯಿತು.
ಗ್ರಾಮದಲ್ಲಿ ಹಲವಾರು ವರ್ಷ ಗಳಿಂದ ಮದ್ಯ ಮಾರಾಟ ನಡೆಯುತ್ತಿದ್ದು, ಯಾವುದೇ ರೀತಿಯ ನಿಯಂತ್ರಣ ಇಲ್ಲದಾಗಿದೆ. ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರ ಗಂಡನೇ ಮದ್ಯ ಮಾರಾಟದಲ್ಲಿ ತೊಡಗಿದ್ದಾರೆ. ಇದರಿಂದಾಗಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಇಲ್ಲದಂತಾಗಿದೆ ಎಂದು ಪ್ರತಿಭಟನಾ ನಿರತ ಮಹಿಳೆಯರು ಆರೋಪಿಸಿದರು.
ಮಧ್ಯಾಹ್ನ 2 ಗಂಟೆವರೆಗೂ ಪ್ರತಿಭಟನೆ ಮುಂದುವರೆಸಿದ ಮಹಿಳೆ ಯರು ಸ್ಥಳಕ್ಕೆ ತಹಸೀಲ್ದಾರ್‌ರು ಬರುವವರೆಗೆ ಗ್ರಾಮ ಪಂಚಾ ಯಿತಿಗೆ ಹಾಕಿದ ಬೀಗ ತೆರೆಯುವುದಿಲ್ಲ ಎಂದು ಪಟ್ಟು ಹಿಡಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಲವೇಶ ಗಿರಿಯಮ್ಮನವರ, ಪೊಲೀಸ್ ಸಿಬ್ಬಂದಿ ಮತ್ತಿ ತರರು ಮಹಿಳೆಯರ ಮನ ವೊಲಿಸಲು ವಿಫಲ ಪ್ರಯತ್ನ ನಡೆಸಿದರು.
ಮಹಿಳೆಯರು ಯಾವುದೇ ರೀತಿಯ ಸಂದಾನಕ್ಕೂ ಮುಂದಾಗದೇ ಇದ್ದಾಗ ಪೊಲೀಸರು ಹಾಗೂ ಗ್ರಾಪಂ ಅಧ್ಯಕ್ಷರು ಪಂಚಾಯಿತಿಗೆ ಹಾಕಲಾದ ಕೀಲಿಯನ್ನು ತೆಗೆಯಲು ಮುಂದಾ ದಾಗ ನಮ್ಮ ಬೇಡಿಕೆ ಈಡೇರುವವರೆಗೆ ಬೀಗ ತೆಗೆಯಲು ಬೀಡುವುದಿಲ್ಲ ಎಂದು ಮಹಿಳೆಯರು ಬಾಗಿಲಿಗೆ ಅಡ್ಡ ನಿಂತರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ, ಪರಸ್ಪರ ವಾಗ್ವಾದ ನಡೆದು ಕೆಲ ಹೊತ್ತು ಗೊಂದಲದ ವಾತಾವರಣ ಉಂಟಾಯಿತು.
ಆದರೂ ಪ್ರತಿಭಟನೆಯಿಂದ ಹಿಂದೆ ಸರಿಯದ ಮಹಿಳೆಯರು ತಹಸೀಲ್ದಾರ್ ಅವರು ಬರುವವರೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಚುನಾವಣೆ ಕಾರ್ಯದಲ್ಲಿ ತಹಶೀಲ್ದಾರ್ ಸ್ಥಳಕ್ಕೆ ಬರುಲು ಸಾಧ್ಯವಾಗುವುದಿಲ್ಲ ಎಂದು ಪ್ರತಿಭಟನಾ ನಿರತ ಮಹಿಳೆಯರಿಗೆ ಪೊಲೀಸರು ತಿಳಿಸಿದಾಗ, ಒಂದು ವಾರದಲ್ಲಿ ಮದ್ಯ ಮಾರಾಟ ಸ್ಥಗಿತ ಗೊಳಿಸುವುದಾಗಿ ಗ್ರಾ.ಪಂ.ಅಧ್ಯಕ್ಷರು ಲಿಖಿತ ಹೇಳಿಕೆ ಕೊಟ್ಟರೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಾಗಿ ತಿಳಿಸಿದರು.
ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಗ್ರಾ.ಪಂ. ಅಧ್ಯಕ್ಷರು ಒಂದು ವಾರದೊಳಗಾಗಿ ಕನವಳ್ಳಿ ಗ್ರಾಮವನ್ನು ಸಾರಾಯಿ ಮುಕ್ತ ಗ್ರಾಮವನ್ನಾಗಿ ಮಾಡುವ ಬಗ್ಗೆ ಲಿಖಿತವಾಗಿ ಬರೆದುಕೊಟ್ಟ ನಂತರ ಮಹಿಳೆಯರು ಗ್ರಾಮ ಪಂಚಾಯತಿಗೆ ಹಾಕಿದ್ದ ಬೀಗ ತೆಗೆದು ಪ್ರತಿಭಟನೆಯಿಂದ ಹಿಂದೆ ಸರಿದರು.
ಸ್ತ್ರೀ ಶಕ್ತಿ ಸಂಘಟನೆಗಳ ಮುಖಂಡರಾದ ಯಲ್ಲಮ್ಮ ಮಾಳಮ್ಮನವರ, ಲಕ್ಷ್ಮವ್ವ, ಗಂಗವ್ವ ಹರಪನಹಳ್ಳಿ, ಫಕೀರವ್ವ ಮಾಳಮ್ಮನವರ, ಚನ್ನವ್ವ ಉಪ್ಪಾರ, ಭಾಗೀರತಿ ಕಾಟೇನರ, ಶಾಂತವ್ವ ಕಾಟೇನರ, ಹೊನ್ನವ್ವ ಬಾಕಿ, ರೈತ ಸಂಘದ ಮಂಜುನಾಥ ಕದಂ, ಪಾಲಾಕ್ಷಯ್ಯ ಹಿರೇಹಾಳಮಠ, ಭರಮಣ್ಣ ಮರಗಾಲ, ಯಲ್ಲಪ್ಪ ಕಾಟೇನರ, ಬಸವಂತಪ್ಪ ಶೆಟ್ಟರ, ಅಜೀಂಸಾಬ ಕಲ್ಲೇದೇವರ, ಅಜೀಂಸಾಬ ಬೇವಿನಮರದ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.