ADVERTISEMENT

ಗ್ರೀಕ್ ಶೈಲಿಯ ಬಯಲು ರಂಗಮಂದಿರ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 6:57 IST
Last Updated 25 ಡಿಸೆಂಬರ್ 2012, 6:57 IST
ಗ್ರೀಕ್ ಶೈಲಿಯ ಬಯಲು ರಂಗಮಂದಿರ
ಗ್ರೀಕ್ ಶೈಲಿಯ ಬಯಲು ರಂಗಮಂದಿರ   

ಹಾನಗಲ್: ಧರ್ಮ ಜಾಗೃತಿ ಜತೆಗೆ ಕಲಾಕ್ಷೇತ್ರಕ್ಕೆ ಪ್ರೋತ್ಸಾಹ ನೀಡಿದ ಹಾನಗಲ್ ಲಿಂ.ಕುಮಾರ ಶಿವಯೋಗಿಗಳ ಮಠದ ಆವರಣದಲ್ಲಿ ವಿನೂತನ ತಂತ್ರಜ್ಞಾನ ಬಳಸಿ ಗ್ರೀಕ್ ಜಾನಪದ ಶೈಲಿಯ ಶ್ರೀ ಕುಮಾರೇಶ್ವರ ಬಯಲು ರಂಗಮಂದಿರ ಉದ್ಘಾಟನೆಗೆ ಸಿದ್ಧಗೊಂಡಿದೆ.

ಶ್ರೀಮಠ ಎದುರಿನಲ್ಲಿ ಕೇವಲ 20 ಗುಂಟೆ ಜಾಗಾದಲ್ಲಿ ಬಯಲು ರಂಗಮಂದಿರಗಳ ಮಾದರಿಯ ವೈಶಿಷ್ಠ್ಯಗಳನ್ನು ಅಳವಡಿಸಿಕೊಂಡು ಸುಂದರ, ಸುಸಜ್ಜಿತ ರಂಗಮಂದಿರ ಮೈದಳೆದು ನಿಂತಿದೆ. 

ಈ ರಂಗ ಮಂದಿರಕ್ಕೆ ಸ್ಥಳೀಯವಾಗಿ ದೊರಕುವ ಸಾಮಗ್ರಿಗಳ ಸೂಕ್ತ ಬಳಕೆ ಮಾಡಲಾಗಿದೆ. ಇದು ಅಪ್ಪಟ ಮಲೆನಾಡಿನ ಗ್ರಾಮೀಣ ಸೊಗಡು ಬಿಂಬಿಸುವ ರಂಗ ಮಂದಿರವಾಗಿದೆ. ಇಡೀ ಕಟ್ಟಡಕ್ಕೆ ಜಂಬಿಟ್ಟಿಗೆ ಬಳಸಿ, ಕೊಠಡಿಗಳಿಗೆ ಆರ್.ಸಿ.ಸಿ ಛಾವಣಿ ಹೊದಿಸಿ, ಇಳಿಜಾರು ಕ್ರಮದಲ್ಲಿ ಕೆಂಪುಹೆಂಚು ಜೋಡಿಸಲಾಗಿದೆ.

ವಿಶಾಲವಾದ ವೇದಿಕೆ, ಇಕ್ಕೆಲಗಳಲ್ಲಿ ಮೂರು ಜೊತೆ ದೃಶ್ಯ ಕವಾಟು, ಕಟ್ಟಡದ ಗೋಡೆಗಳ ಮೇಲೆ ಜಾನಪದ ಶೈಲಿಯ ಉಬ್ಬು ಚಿತ್ರಗಳು, ಅವುಗಳಿಗೆ ಬಳೆದ ಬಣ್ಣದ ಚಿತ್ತಾರಗಳು. ಅಲ್ಲದೆ ಇವುಗಳ ಮಧ್ಯೆದಲ್ಲಿ ದೃಶ್ಯಕನುಗುಣವಾಗಿ ಪರದೆ ಎಳೆಯುವ ವ್ಯವಸ್ಥೆ. ವೇದಿಕೆ ಮುಂಭಾಗ ಮತ್ತು ಎರಡೂ ಬದಿಯಲ್ಲಿ ಗುಣಮಟ್ಟದ ವಿದ್ಯುತ್ ದೀಪ ಮತ್ತು ಧ್ವನಿ ವ್ಯವಸ್ಥೆ ಮಾಡಲಾಗಿದೆ.

ವಿಶೇಷವಾಗಿ ನಿರ್ಮಿಸಲಾದ ಮಹಿಳಾ-ಪುರುಷ ಕಲಾವಿದರ ಪ್ರತ್ಯೇಕ ಪ್ರಸಾದನ ಕೊಠಡಿಗಳು. ಅಲ್ಲಿಂದ ವೇದಿಕೆಯಲ್ಲಿನ ದೃಶ್ಯ-ಧ್ವನಿ ಕಲಾವಿದರಿಗೆ ನೇರವಾಗಿ ಕಾಣುವ ವ್ಯವಸ್ಥೆಯಿದೆ, ಇದು ಕಲಾವಿದರಿಗೆ ದೃಶ್ಯಕ್ಕೆ ಸಿದ್ಧಗೊಳ್ಳಲು ಅನುಕೂಲ ಕಲ್ಪಿಸುತ್ತದೆ. ಪ್ರೇಕ್ಷಕರು, ಕಲಾವಿದರಿಗೆ ಪ್ರತ್ಯೇಕ ಪ್ರವೇಶ ದ್ವಾರಗಳು, ಪ್ರತ್ಯೇಕ ಶೌಚಾಲಯಗಳು, ವಾಹನ ನಿಲುಗಡೆಗೆ ಸ್ಥಳ ಮೀಸಲಿಡಲಾಗಿದೆ. ಕಲಾವಿದರಿಗೆ ತಂಗಲು, ವಿಶ್ರಾಂತಿಗೆ ಎಲ್ಲ ಸೌಲಭ್ಯಗಳುಳ್ಳ ಪ್ರತ್ಯೇಕ ಕೊಠಡಿಗಳಿವೆ.

ಗೋಲಾಕೃತಿಯಲ್ಲಿ ಒಟ್ಟು 640 ಪ್ರೇಕ್ಷಕರ ಆಸನಗಳನ್ನು ಜೋಡಿಸಲಾಗಿದೆ. ಯಾವುದೇ ಸ್ಥಳದಲ್ಲಿ ಕುಳಿತು ನೋಡಿದರೂ ವೇದಿಕೆ ಸ್ಪಷ್ಟವಾಗಿ ಕಾಣುವ ವಿನ್ಯಾಸ ಗಮನ ಸೆಳೆಯುತ್ತದೆ. ಈ ಗ್ಯಾಲರಿಯ ಎರಡೂ ಬದಿಯಲ್ಲಿ ಪ್ರವೇಶ ಧ್ವಾರ ಮಾಡುವ ಮೂಲಕ ವೇದಿಕೆಯ ಮುಂಭಾಗದಲ್ಲಿ ಪ್ರೇಕ್ಷಕರ ಓಡಾಟಕ್ಕೆ ಅವಕಾಶ ಇಲ್ಲದಂತೆ ಮಾಡಲಾಗಿದೆ. ವೇದಿಕೆ ಕಾರ್ಯಕ್ರಮಗಳಿಗೆ ಶಾಶ್ವತ ನೆಲೆ ಒದಗಿಸಿರುವ ಈ ಬಯಲು ರಂಗಮಂದಿರ ಲೋಕೋಪಯೋಗಿ ಇಲಾಖೆಯ 1.5 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಂತ ಆಕರ್ಷಣಿಯವಾಗಿ ನಿರ್ಮಿಸಿರುವುದು ಪಟ್ಟಣದ ಜನರಲ್ಲಿ ಹರ್ಷ ಮೂಡಿಸಿದೆ.

ಸಚಿವ ಉದಾಸಿ ಸ್ವಂತ ಖರ್ಚಿನಲ್ಲಿ ಶ್ರೀಮಠಕ್ಕೆ ನೂತನವಾಗಿ ನಿರ್ಮಾಣಗೊಂಡ ಮಹಾದ್ವಾರ, 10 ಮೀ ಅಗಲದ ಕಾಂಕ್ರೀಟ್ ರಸ್ತೆ ಮಠದ ಇಡೀ ವಾತಾರಣವನ್ನು ಆಕರ್ಷಕವಾಗಿಸಿದೆ.
- ಮಾರುತಿ ಪೇಟಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.