ಅಕ್ಕಿಆಲೂರ: ಸಮಾಜ ಸೇವೆಗೆ ಈ ನಾಡಿನಲ್ಲಿ ತಮ್ಮ ಬದುಕಿನ ಮೂಲಕ ಹೊಸ ವ್ಯಾಖ್ಯಾನ ಬರೆದವರು ಅಕ್ಕಿಆಲೂರಿನ ವಿರಕ್ತಮಠದ ಹಿಂದಿನ ಪೀಠಾಧ್ಯಕ್ಷರಾಗಿದ್ದ ಲಿಂ.ಚನ್ನವೀರ ಶಿವಯೋಗಿಗಳು. ಸಮರ್ಪಣಾ ಮನೋಭಾವದಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶಿವಯೋಗಿಗಳ ನಡೆ, ನುಡಿ, ಆದರ್ಶ ನಮ್ಮೆಲ್ಲರಿಗೂ ಸದಾಕಾಲ ದಾರಿದೀಪವಾಗಿದೆ ಎಂದು ಸ್ಥಳೀಯ ವಿರಕ್ತಮಠದ ಶಿವಬಸವ ಸ್ವಾಮೀಜಿ ಹೇಳಿದರು.
ಇಲ್ಲಿಯ ಚನ್ನವೀರೇಶ್ವರ ವಿರಕ್ತಮಠ ದಲ್ಲಿ ಶುಕ್ರವಾರ ಜರುಗಿದ ಲಿಂ.ಚನ್ನವೀರ ಶಿವಯೋಗಿಗಳ ಸ್ಮರಣೋತ್ಸವ ಸಮಾ ರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಧರ್ಮದ ಏಳಿಗೆಗೆ ತಮ್ಮ ಜೀವನವನ್ನು ಶ್ರೀಗಂಧದ ಕೊರಡಿನಂತೆ ಸವೆಸಿದ ಪೂಜ್ಯರು ತ್ರಿಕಾಲ ಪೂಜಾ ನಿಷ್ಠರಾಗಿ, ಅನುಷ್ಠಾನ ಮೂರ್ತಿಗಳಾಗಿ ಶ್ರೀಮಠದ ಜೀರ್ಣೋದ್ಧಾರ ಮತ್ತು ಸದ್ಭಕ್ತರ ಶ್ರೇಯೋಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ನುಡಿದ ಅವರು ಗುಣಾತ್ಮಕ ಚಿಂತನೆಯ ಸದಾಚಾರ ಸಂಪನ್ನವನ್ನು ಅಳವಡಿಸಿ ಕೊಳ್ಳುವಲ್ಲಿ ಪ್ರತಿಯೊಬ್ಬರೂ ಗಮನ ಹರಿಸಬೇಕಿದೆ.
ಶರಣರ ಸಾಮಿಪ್ಯದಿಂದ ಬದುಕು ಹಸನಾಗಲಿದೆ. ಶಿವಯೋಗ ಸುಖವನ್ನು ಅನುಭವಿಸಿ ಬದುಕು ಸಾರ್ಥಕ ಪಡಿಸಿಕೊಳ್ಳುವಂತೆ ಕಿವಿಮಾತು ಹೇಳಿದ ಅವರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಮುನ್ನೆಡೆಯುವಂತೆ ಕರೆ ನೀಡಿದರು.
ಅಕ್ಕನ ಬಳಗದ ಶರಣೆಯರು, ಸದ್ಭಕ್ತ ಮಂಡಳಿ ಸದಸ್ಯರು ಈ ವೇಳೆ ಪಾಲ್ಗೊಂಡಿದ್ದರು. ಪುಣ್ಯಸ್ಮರಣೋತ್ಸವದ ಪ್ರಯುಕ್ತ ಶಿವಬಸವ ಸ್ವಾಮೀಜಿ ಸಾನಿಧ್ಯದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.