ಹಾನಗಲ್: ಹಾನಗಲ್ ತಾಲ್ಲೂಕಿನ ಕೂಸನೂರ ಗ್ರಾಮದ ಮನೆಯೊಂದರಲ್ಲಿ ಕಳೆದ ಬಕ್ರೀದ್ ಹಬ್ಬದ ದಿನದಂದು ಆಕಳೊಂದು ಕರುವಿಗೆ ಜನ್ಮ ನೀಡಿದ್ದು, ಜನಿಸಿದ ಕರುವಿನ ಹಣೆಯ ಮೇಲೆ ಅರ್ಧಚಂದ್ರಾಕೃತಿ ಮತ್ತು ನಕ್ಷತ್ರದ ಚಿನ್ನೆಯ ಕುರುಹುಗಳು ಮೂಡಿದ್ದರಿಂದ ಇದೀಗ ಈ ಕರು ಭಯ, ಭಕ್ತಿ ಮತ್ತು ನಂಬಿಕೆಗಳಿಗೆ ಕಾರಣವಾಗಿದೆ.
ಕೂಸನೂರ ಗ್ರಾಮದ ಪ್ಲಾಟ್‌ನ ನಿವಾಸಿ ಹನುಮಂತಪ್ಪ ನಿಂಗಪ್ಪ ಆಲೂರ ಎಂಬ ಕೃಷಿಕರ ಮನೆಯಲ್ಲಿ ಜರ್ಸಿ ತಳಿಯ ಆಕಳು ಜನ್ಮ ನೀಡಿದ ಕರು ಮುಸಿಂ್ಲ ಧರ್ಮದ ನಕ್ಷತ್ರ ಮತ್ತು ಅರ್ಧಚಂದ್ರಾಕೃತಿಯ ಕುರುಹುಗಳೊಂದಿಗೆ ಎಲ್ಲರ ಗಮನಸೆಳೆಯುತ್ತಿದೆ. ಬಕ್ರೀದ್ ಹಬ್ಬದ ಸಂಜೆಯ ಪ್ರಾರ್ಥನೆ (ಅಜಾ) ಸಮಯದಲ್ಲಿ ಈ ಕರುವಿನ ಜನನವಾಗಿದೆ.
ಕರುವಿನ ಹಣೆಯ ಮೇಲೆ ಮೂಡಿರುವ ಬಿಳಿ ಬಣ್ಣದ ಆಕಾರವನ್ನು ಕಂಡು ಚಕಿತಗೊಂಡ ಕುಟುಂಬದ ಸದಸ್ಯರು ಸಮೀಪದ ಮಸೀದಿಯಲ್ಲಿ ಪ್ರಾರ್ಥನೆಯಲ್ಲಿ ತೊಡಗಿದ್ದ ಅಕ್ಬರ್ ಮುಲ್ಲಾ ಅವರ ಗಮನಕ್ಕೆ ತಂದಿದ್ದಾರೆ.
ಸುದ್ದಿ ಹರಡುತ್ತಿದ್ದಂತೆ ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಮುಸ್ಲಿಂ ಸಮುದಾಯ ಮುಗಿಬಿದ್ದು ನೋಡಿದ್ದಾರಲ್ಲದೆ, ಭಯ, ಭಕ್ತಿ ಸಮರ್ಪಿಸಿದ್ದಾರೆ.
ಕೂಸನೂರ ಸಮೀಪದ ವರದಾನದಿ ದಂಡೆಯಲ್ಲಿನ ಹನುಮಂತಪ್ಪ ಆಲೂರ ಅವರ ಹೊಲದ ಪಕ್ಕದಲ್ಲಿ ಶುಬಾನ್ ಷಾ ವಲಿ ದರ್ಗಾವಿದೆ.
ಈ ದರ್ಗಾದ ಆವರಣದಲ್ಲಿನ ಹುಲ್ಲು ಮೇಯುತ್ತಿದ್ದ ಆಕಳು ಈಗ ನಕ್ಷತ್ರ ಮತ್ತು ಅರ್ಧ ಚಂದ್ರಾಕೃತಿ ಹಣೆಪಟ್ಟಿಯುಳ್ಳ ಕರುವಿಗೆ ಜನ್ಮ ನೀಡಿದ್ದು, ಮುಸ್ಲಿಂ ಜನರ ಭಾವನೆ, ನಂಬಿಕೆಗಳಿಗೆ ಕಾರಣವಾಗಿದ್ದರೆ, ಹಿಂದೂ ಸಮಾಜದ ಜನರಲ್ಲಿ ವಿಸ್ಮಯ ಮೂಡಿಸಿದೆ.
ಗ್ರಾಮದ ಅಲ್ಲಾಭಕ್ಷ ಕಚವಿ ಎಂಬ ಹಿರಿಯರ ಪ್ರಕಾರ `ಚಾಂದ-ತಾರಾ~ ಮೂಡಿದೆ.
ಇದು ದೇವರ ಕೃಪೆ ಎಂಬುದು ಸತ್ಯ. ದೇವರ ಸೃಷ್ಟಿಯಲ್ಲಿ ಧಾರ್ಮಿಕ ಭಾವನೆ ಕಂಡು ಬಂದಿದ್ದು, ಶುಭ ಸೂಚನೆ ಎಂದಿದ್ದಾರೆ.
ಸುತ್ತಲಿನ ಗ್ರಾಮಸ್ಥರು ಈ ಕರುವಿನ ದರ್ಶನಕ್ಕೆ ಬರುತ್ತಿದ್ದಾರೆ ಎಂದು ಗ್ರಾಮಸ್ಥರಾದ ವಿರೂಪಾಕ್ಷಪ್ಪ ಸುರಳೇಶ್ವರ, ಚನ್ನಬಸಪ್ಪ ಬಂಕೋಳ್ಳಿ, ಸದಾಗೌಡ್ರ ಕನ್ವೇಶ್ವರ, ವಿರೇಶ ಹಂಪಣ್ಣನವರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.