ADVERTISEMENT

ಚಿಣ್ಣರ ಚಟುವಟಿಕೆಯ ನೆಮ್ಮದಿಯ ತಾಣಗಳು...

ಮಾರುತಿ ಪೇಟಕರ
Published 14 ನವೆಂಬರ್ 2017, 6:48 IST
Last Updated 14 ನವೆಂಬರ್ 2017, 6:48 IST
ಹಾನಗಲ್‌ ಟ್ರೀ ಫಾರ್ಕ್‌ನಲ್ಲಿ ಸಿದ್ಧಗೊಂಡ ಮಕ್ಕಳ ಆಟಿಕೆ ಉದ್ಯಾನ
ಹಾನಗಲ್‌ ಟ್ರೀ ಫಾರ್ಕ್‌ನಲ್ಲಿ ಸಿದ್ಧಗೊಂಡ ಮಕ್ಕಳ ಆಟಿಕೆ ಉದ್ಯಾನ   

ಹಾನಗಲ್‌: ನಗರೀಕರಣ ಬೆಳೆದಂತೆಲ್ಲ ಖಾಲಿ ಜಾಗವೆಲ್ಲ ನಿವೇಶನಗಳಾಗಿ ಬದಲಾಗುತ್ತಿವೆ. ಮಕ್ಕಳು ಬಹುತೇಕ ರಸ್ತೆಗಳ ಫುಟ್‌ಪಾತ್‌ನಲ್ಲೇ ಆಡುವ ಸ್ಥಿತಿ ಬಹುತೇಕ ಕಡೆಗಿದೆ. ಶಾಲಾ–ಕಾಲೇಜುಗಳಲ್ಲೂ ಆಟೋಟಕ್ಕೆ ಜಾಗವಿಲ್ಲ ಎಂಬ ಸ್ಥಿತಿ ಸಾಮಾನ್ಯವಾಗುತ್ತಿದೆ.

ಆದರೆ, ಹಾನಗಲ್‌ ತಾಲ್ಲೂಕು ಕೇಂದ್ರದಲ್ಲಿರುವ ಕುಮಾರೇಶ್ವರ ವಿರಕ್ತಮಠದ ಆವರಣದಲ್ಲಿ ನಿರ್ಮಾಣಗೊಂಡ ಮಕ್ಕಳ ಉದ್ಯಾನ ಮತ್ತು ಅರಣ್ಯ ಇಲಾಖೆಯ ಟ್ರೀ ಪಾರ್ಕ್‌ನಲ್ಲಿರುವ ಮಕ್ಕಳ ಆಟಿಕೆಯ ಸ್ಥಳವು ಈ ಕೊರಗು ನೀಗಿಸಿದೆ.

ಮಕ್ಕಳ ಉದ್ಯಾನದ ಕೊರತೆ ಮನಗಂಡು ‌ಸಂಸದ ಶಿವಕುಮಾರ ಉದಾಸಿ ತಮ್ಮ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಇಲ್ಲಿನ ಕುಮಾರೇಶ್ವರ ಮಠದ ಆವರಣದಲ್ಲಿ ನಿರ್ಮಿಸಿದ ಮಕ್ಕಳ ಉದ್ಯಾನವು ಪಟ್ಟಣದ ಚಿಣ್ಣರ ನೆಚ್ಚಿನ ತಾಣವಾಗಿ ರೂಪುಗೊಂಡಿದೆ.

ADVERTISEMENT

₹20 ಲಕ್ಷ ವೆಚ್ಚದಲ್ಲಿ ಎರಡು ವರ್ಷದ ಹಿಂದೆ ಆರಂಭಗೊಂಡ ಈ ಉದ್ಯಾನದಲ್ಲಿ ವಿವಿಧ ಬಗೆಯ ಆಟಿಕೆಗಳಿವೆ. ಜಗ್ಗು–ಬಗ್ಗು ಆಟ, ಸ್ಟ್ರಿಂಗ್‌ ಮೇಲಿನ ಬೈಕ್‌ ಆಟ, ಜಾರು ಗುಂಡಿ, ಜೋಕಾಲಿ, ದೈಹಿಕ ಕಸರತ್ತಿನ ಮತ್ತು ವ್ಯಾಯಾಮದ ಆಟಗಳು ಚಿಣ್ಣರನ್ನು ಆಕರ್ಷಿಸುತ್ತಿವೆ.

ಉದ್ಯಾನದ ತುಂಬ ನೆಲಕ್ಕೆ ಮರಳು ಹರಡಲಾಗಿದೆ. ಆಡುವಾಗ ಮಕ್ಕಳು ಆಯತಪ್ಪಿ ಬಿದ್ದರೂ ಗಂಭೀರ ಗಾಯ ಆಗದಂತೆ ಜಾಗೃತೆ ವಹಿಸಲಾಗಿದೆ. ಉದ್ಯಾನದಲ್ಲಿನ ದೊಡ್ಡ ಮರದ ಅಡಿಯಲ್ಲಿ ಪೋಷಕರ ವಿಶ್ರಾಂತಿಗೂ ವ್ಯವಸ್ಥೆ ಇದೆ.

ಉದ್ಯಾನದ ಸುತ್ತಲೂ ಮೆಸ್‌ (ಕಬ್ಬಿಣದ ಬೇಲಿ) ಹಾಕಲಾಗಿದ್ದು, ಇದಕ್ಕೆ ಹೊಂದಿಕೊಂಡು ನಡಿಗೆ ಪಥ ಇದೆ. ಸ್ಥಳೀಯ ಪುರಸಭೆ ಉದ್ಯಾನದ ನಿರ್ವಹಣೆಯ ಹೊಣೆ ಹೊತ್ತಿದ್ದು, ಇದರ ಮೇಲ್ವಿಚಾರಣೆಗೆ ಸಿಬ್ಬಂದಿಯನ್ನು ನೇಮಿಸಿದೆ. ನಿತ್ಯ ಸಂಜೆ ಎರಡು ತಾಸು ತೆರೆಯುವ ಉದ್ಯಾನ, ಭಾನುವಾರ ಮಾತ್ರ ಬೆಳಿಗ್ಗೆಯಿಂದ ಸಂಜೆ ತನಕ ಮುಕ್ತವಾಗಿರುತ್ತದೆ.

ಟ್ರೀ ಪಾರ್ಕ್‌ ಮಕ್ಕಳ ಉದ್ಯಾನ: ಅರಣ್ಯ ಇಲಾಖೆಯ ಟ್ರೀ ಪಾರ್ಕ್‌ನಲ್ಲಿರುವ ಮಕ್ಕಳ ಉದ್ಯಾನ ಇದೀಗ ಪಟ್ಟಣ ಆಕರ್ಷಣೆಯ ಕೇಂದ್ರ. ಮಠದ ಆವರಣದಲ್ಲಿನ ಮಕ್ಕಳ ಆಟಿಕೆ ಸಾಮಗ್ರಿಗಳೇ ಇಲ್ಲೂ ಇವೆ. ಆದರೆ ವಿನ್ಯಾಸದಲ್ಲಿ ಭಿನ್ನತೆಗಳಿವೆ. ಬಿದಿರು, ನೀಲಗಿರಿ ಮರಗಳನ್ನು ಬಳಸಿಕೊಂಡು ರೂಪಿಸಿರುವ ಸಾಂಪ್ರದಾಯಿಕ ಜೋಕಾಲಿ, ಹಗ್ಗದ ಸಾಹಸ ಆಟಗಳು ಚೆನ್ನಾಗಿವೆ.

‘ಅರಣ್ಯದೆಡೆಗೆ ಆಸಕ್ತಿ, ವನ್ಯ ಜೀವಿಗಳ ಬಗ್ಗೆ ಪ್ರೀತಿ, ಕಾಳಜಿ ಮೂಡಿಸುವ ನಿಟ್ಟಿನಲ್ಲಿ ಟ್ರೀ‍ ಪಾರ್ಕ್‌ನ ಮುಖ್ಯ ಮಾರ್ಗದಲ್ಲಿ 110 ನಾಮಫಲಕ ಸ್ಥಾಪಿಸಲಾಗಿದೆ. ವಿವಿಧ ತಳಿಯ ಗಿಡ–ಮರಗಳ ಮಾಹಿತಿ, ಪ್ರಾಣಿ–ಪಕ್ಷಿಗಳ ಬಗ್ಗೆ ವಿವರಣೆಯನ್ನು ಸಚಿತ್ರವಾಗಿ ನೀಡುವ ಯತ್ನ ಮಾಡಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಎಸ್‌.ಶಿವರಾತ್ರೇಶ್ವರಸ್ವಾಮಿ ಹೇಳಿದರು.

‘ಹೊರಾಂಗಣದ ಆಟವಿಲ್ಲದಂತಾಗಿ ಮಂಕಾಗುತ್ತಿದ್ದ ಮಕ್ಕಳಲ್ಲಿ ಪಟ್ಟಣದಲ್ಲಿರುವ ಎರಡೂ ಉದ್ಯಾನಗಳು ಉತ್ಸಾಹ ತುಂಬುತ್ತಿವೆ’ ಎಂದು ವಕೀಲರಾದ ರವಿಬಾಬು ಪೂಜಾರ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.