ADVERTISEMENT

ಚಿರತೆಗಳ ದಾಳಿ: 7 ಕುರಿಗಳ ಬಲಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 9:25 IST
Last Updated 26 ಫೆಬ್ರುವರಿ 2012, 9:25 IST

ಹಿರೇಕೆರೂರ: ತಾಲ್ಲೂಕಿನ ಹಳೇನಿಡ ನೇಗಿಲು ಗ್ರಾಮದ ಹೊರವಲಯದಲ್ಲಿ ಶುಕ್ರವಾರ ರಾತ್ರಿ ಚಿರತೆಗಳು ದಾಳಿ ನಡೆಸಿ 7 ಕುರಿಗಳನ್ನು ಕೊಂದು ಹಾಕಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ  ಉಂಟು ಮಾಡಿವೆ.
ಗ್ರಾಮದ ಹಾಲೇಶ ನಾಯ್ಕ ಅವರ 2, ಸೋಮಪ್ಪ ನಾಯ್ಕ ಅವರ 2 ಹಾಗೂ ವೀರೇಶ ನಾಯ್ಕ ಅವರ 3 ಕುರಿಗಳು ಚಿರತೆಗಳ ದಾಳಿಯಿಂದ ಸಾವನ್ನಪ್ಪಿವೆ. ದಾಳಿಯಿಂದ ರೂ  55 ಸಾವಿರ ಹಾನಿ ಯಾಗಿದೆ ಎಂದು ಅಂದಾಜು ಮಾಡಲಾಗಿದೆ.

ಮುಂದಿನ ತಿಂಗಳು ನಡೆಯುವ ಜಾತ್ರೆಗಾಗಿ ಸಾಕಿದ್ದ ಕುರಿಗಳನ್ನು ಹೊರ ವಲಯದಲ್ಲಿರುವ ದೊಡ್ಡಿಯಲ್ಲಿ ಕಟ್ಟ ಲಾಗಿತ್ತು. ರಾತ್ರಿ 8 ಗಂಟೆಯ ಸುಮಾರಿಗೆ ಯಾರೂ ಇಲ್ಲದ ವೇಳೆ ಮೂರು ಚಿರತೆಗಳು ದಾಳಿ ನಡೆಸಿ ಕುರಿ ಗಳನ್ನು ಕೊಂದು ಹಾಕಿವೆ. ಇವುಗಳಲ್ಲಿ ಒಂದು ತಾಯಿ ಚಿರತೆ ಹಾಗೂ ಎರಡು ಮರಿಗಳಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ರಾತ್ರಿ ಮತ್ತೆ ಈ ಭಾಗದಲ್ಲಿ ಸುಳಿ ದಾಡಿದ ಚಿರತೆಗಳನ್ನು ಗ್ರಾಮಸ್ಥರು ಗದ್ದಲ ಮಾಡಿ ಓಡಿಸಿದ್ದಾರೆ.
`ಹಗ್ಗದಿಂದ ಬಿಗಿಯಾಗಿ ಕಟ್ಟಲಾಗಿದ್ದ ಕುರಿಗಳನ್ನು ಚಿರತೆಗಳು ಒಂದೊಂದಾಗಿ ಸಾಯಿಸಿವೆ. ಸಮಾನ್ಯವಾಗಿ ಬೇಟೆಯಾಡುವ ಚಿರತೆಯು ಅದನ್ನು ಮರದ ಮೇಲೇರಿ ತಿನ್ನುತ್ತದೆ. ಆದರೆ ಇಲ್ಲಿ ಹಗ್ಗದಿಂದ ಕಟ್ಟಿದ ಕಾರಣ ಹೊತ್ತೊಯ್ಯಲು ಸಾಧ್ಯವಾಗದೇ ಅಲ್ಲಿಯೇ ಬಿಟ್ಟು ಪರಾರಿಯಾಗಿವೆ  ಎನ್ನುತ್ತಾರೆ ಮರಣೋತ್ತರ ಪರೀಕ್ಷೆ ನಡೆಸಿದ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಗೋಪಿನಾಥ.

ಕಳೆದ ಮೂರ‌್ನಾಲ್ಕು ತಿಂಗಳಿಂದ ಈ ಭಾಗದಲ್ಲಿ ಚಿರತೆಯ ಹಾವಳಿ ವ್ಯಾಪಕವಾಗಿದ್ದು, ಇಲ್ಲಿಯವರೆಗೆ ಸುಮಾರು 25-30 ಕುರಿ ಮತ್ತು ಮೇಕೆಗಳು ಚಿರತೆಗೆ ಬಲಿಯಾಗಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಹಿರೇಕೆರೂರ ಪಿಎಸ್‌ಐ ಜಿ.ಟಿ.ಶ್ರೀಶೈಲಮೂರ್ತಿ, ಆರ್‌ಎಫ್‌ಒ ಶಿವಾನಂದ ಪೂಜಾರ ಸ್ಥಳಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.