ADVERTISEMENT

`ಜನಸಂಖ್ಯೆ ನಿಯಂತ್ರಣಕ್ಕೆ ಒತ್ತು ನೀಡಿ'

ವಿಶ್ವ ಜನಸಂಖ್ಯೆ ದಿನಾಚರಣೆ ಕಾರ್ಯಕ್ರಮದಲ್ಲಿ ಚನ್ನಬಸಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 6:44 IST
Last Updated 1 ಆಗಸ್ಟ್ 2013, 6:44 IST

ಹಾವೇರಿ: `ತೀವ್ರಗತಿಯಲ್ಲಿ ಏರುತ್ತಿರುವ ಜನಸಂಖ್ಯೆ ದೇಶದ ಅಭಿವೃದ್ಧಿಗೆ ಮಾರಕವಾಗುವುದರ ಜತೆಗೆ ಹತ್ತು ಹಲವು ಸಮಸ್ಯೆಗಳಿಗೆ ನಾಂದಿ ಹಾಡಲಿದೆ. ಸಮಸ್ಯೆಗಳಿಂದ ಹೊರ ಬಂದು ದೇಶವನ್ನು ಅಭಿವೃದ್ಧಿಯತ್ತ ಸಾಗಿಸಲು ಜನಸಂಖ್ಯೆ ನಿಯಂತ್ರಣಕ್ಕೆ ಪ್ರತಿಯೊಬ್ಬರು ಒತ್ತು ನೀಡಬೇಕಿದೆ' ಎಂದು ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಹೇಳಿದರು.

ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕು ಆರೋಗ್ಯಧಿಕಾರಿಗಳ ಕಚೇರಿ, ವಾರ್ತಾ ಇಲಾಖೆ ಹಾಗೂ ಹುಕ್ಕೇರಿಮಠದ ಶಿವಲಿಂಗೇಶ್ವರ ಮಹಿಳಾ ಪದವಿ ಹಾಗೂ ಪದವಿಪೂರ್ವ ಮಹಾವಿದ್ಯಾಲಯ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು.

ಬಡತನ, ಅಜ್ಞಾನ, ಮಾಹಿತಿಯ ಕೊರತೆ, ಮೂಢನಂಬಿಕೆಗಳು, ಬಾಲ್ಯ ವಿವಾಹ ಹಾಗೂ ಕಡಿಮೆ ಸಾಕ್ಷರತಾ ಪ್ರಮಾಣದಿಂದ ಜನಸಂಖ್ಯೆ ಅಧಿಕವಾಗುತ್ತಿದೆ. ಯಾವುದೇ ಒಂದು ದೇಶದ ಜನಸಂಖ್ಯೆ ಹೆಚ್ಚಾದಲ್ಲಿ ವಾಸಿಸಲು ಮನೆ, ಆಹಾರ ಹಾಗೂ ದುಡಿಯಲು ಭೂಮಿ ಕೊರತೆ ಎದುರಾಗಲಿದೆ.  ಈಗ ತೈಲೋತ್ಪನ್ನಗಳನ್ನು ಆಮದು ಮಾಡಿಕೊಳ್ಳುವಂತೆ ಮುಂದಿನ ದಿನಗಳಲ್ಲಿ ಆಹಾರ ಆಮದು ಮಾಡಿಕೊಳ್ಳವ ಸ್ಥಿತಿ ನಿರ್ಮಾಣವಾದರೂ ಆಶ್ಚರ್ಯಪಡಬೇಕಿಲ್ಲ. ಅದಕ್ಕಾಗಿ ಪ್ರತಿಯೊಬ್ಬರು ಜನಸಂಖ್ಯೆ ನಿಯಂತ್ರಣಕ್ಕೆ ಗಮನ ಹರಿಸಬೇಕು ಎಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ ಪ್ರಾಸ್ತಾವಿಕವಾಗಿ ಮಾತನಾಡಿ, 1981 ರಲ್ಲಿ ಭಾರತದ ಜನನ ಪ್ರಮಾಣ 34 ರಷ್ಟಿತ್ತು. ಪ್ರಸ್ತುತ 2013 ರಲ್ಲಿ ಅದು 21 ಕ್ಕೆ ಇಳಿಕೆಯಾಗಿದೆ. ಇದೇ ರೀತಿ ಕರ್ನಾಟಕದಲ್ಲಿ 1981 ರಲ್ಲಿ ಜನನ ಪ್ರಮಾಣ 28 ರಷ್ಟಿತ್ತು. ಪ್ರಸ್ತುತ 2013 ರಲ್ಲಿ 19 ಕ್ಕೆ ಇಳಿಕೆಯಾಗಿದೆ. ಅದೇ ರೀತಿ ಮರಣ  ಪ್ರಮಾಣ ಕೂಡ 9.1 ರಿಂದ 7.1 ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದರು.

2013 ಜನಸಂಖ್ಯಾ ದಿನಾಚರಣೆಯ ಘೋಷಣೆಯು `ಚಿಕ್ಕ ಕುಟುಂಬ-ಸುಖಿ ಕುಟುಂಬ, ಹೆಣ್ಣಿರಲಿ ಗಂಡಿರಲಿ ಕುಟುಂಬಕ್ಕೆ ಒಂದೇ ಮಗು ಇರಲಿ' ಎಂದು ಯುವಜನತೆ ಪ್ರತಿಜ್ಞೆ ಮಾಡುವುದರಿಂದ ಜನಸಂಖ್ಯೆಯನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು.

ತಹಶೀಲ್ದಾರ್ ಶಿವಲಿಂಗು ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯೆ ಡಾ.ಸವಿತಾ ಹಿರೇಮಠ ಹಾಗೂ ಎಸ್.ಬಿ ಅಣ್ಣಿಗೇರಿ  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಸಜ್ಜನ ಅವರು ಕುಟುಂಬ ಕಲ್ಯಾಣ ನಿಯಂತ್ರಣ ಕಾರ್ಯಕ್ರಮಗಳ ಕುರಿತು ಹಾಗೂ ಅರ್ಥಶಾಸ್ತ್ರ ಉಪನ್ಯಾಸಕ ವಿ.ವಿ.ಚರಂತಿಮಠ ಅವರು ಜನಸಂಖ್ಯಾ ನಿಯಂತ್ರಣ ಹಾಗೂ ಸ್ಥಿರತೆ ಕುರಿತು ಉಪನ್ಯಾಸ ನೀಡಿದರು.

ಡಿ.ಸಿ.ಬೆಂಡಿಗೇರಿ ಸ್ವಾಗತಿಸಿ, ನಿರೂಪಿಸಿದರು. ರಂಗಣ್ಣ ರಾಠೋಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.