ADVERTISEMENT

ಜಾತಿ ಬೀಜ ಬಿತ್ತುವ ಬಿಜೆಪಿಗೆ ಭವಿಷ್ಯವಿಲ್ಲ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2017, 9:09 IST
Last Updated 29 ನವೆಂಬರ್ 2017, 9:09 IST

ಶಿಗ್ಗಾವಿ: ‘ಜಾತಿಯ ಬೀಜ ಬಿತ್ತುವ ಮೂಲಕ ಜನರಿಗೆ ಮೋಸ ಮಾಡುವ ಬಿಜೆಪಿಗೆ ಮುಂಬರುವ ದಿನಗಳಲ್ಲಿ ಭವಿಷ್ಯವಿಲ್ಲ. ಜಾತ್ಯತೀತ ನಿಟ್ಟಿನಲ್ಲಿ ಸುಮಾರು ವರ್ಷಗಳ ಕಾಲ ಆಡಳಿತ ನಡೆಸಿ ಜನಮೆಚ್ಚಿಗೆಗೆ ಪಾತ್ರವಾದ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಅಜ್ಜಂಪೀರ್‌ ಖಾದ್ರಿ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಶರೀಫ್‌ ಭವನದಲ್ಲಿ ಮಂಗಳವಾರ ನಡೆದ ತಾಲ್ಲೂಕು ಕಾಂಗ್ರೆಸ್‌ ಸಮಾವೇಶದ ಪೂರ್ವಭಾವಿ ಸಭೆ ಹಾಗೂ ಪಕ್ಷದ ತಾಲ್ಲೂಕು ಘಟಕದ ಕಾರ್ಯದರ್ಶಿಯಾಗಿ ನೇಮಕಗೊಂಡ ವೀರೇಶ ಆಜೂರ ಅವರಿಗೆ ಪಕ್ಷದ ಧ್ವಜ ನೀಡಿ ಸನ್ಮಾನಿಸಿ ಅವರು ಮಾತನಾಡಿದರು.

‘ಬಿಜೆಪಿಗೆ ಈಗಾಗಲೇ ಭಯ ಹುಟ್ಟಿಕೊಂಡಿದೆ. ಯಾವುದೇ ತಂತ್ರಗಾರಿಕೆ ನಡೆಯದಂತಾಗಿದೆ. ಕಳೆದ ಎರಡು ಬಾರಿ ಮೋಸ ಮಾಡಲಾಗಿದೆ. ಆದರೆ ಈ ಬಾರಿ ಎಚ್ಚೆತ್ತುಕೊಂಡಿದ್ದೇವೆ. ಖಾದ್ರಿಗೆ ಟಿಕೆಟ್‌ ನೀಡುವವರು ಕಾಂಗ್ರೆಸ್‌ ಪಕ್ಷದ ವರಿಷ್ಠರೇ ವಿನಾ ಬಿಜೆಪಿಯವರಲ್ಲ. ಟಿಕೆಟ್‌ ಸಿಗುವುದಿಲ್ಲ ಎಂದು ಹೇಳಲು ಬಿಜೆಪಿಗೆ ಅರ್ಹತೆಗಳಿಲ್ಲ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ADVERTISEMENT

‘ಹಣ ನೀಡಿ ರಾಜಕಾರಣ ಮಾಡುವ ಪ್ರವೃತ್ತಿ ಕಾಂಗ್ರೆಸಿನಲ್ಲಿ ಇಲ್ಲ. ಸರ್ವಧರ್ಮದಡಿಯಲ್ಲಿ, ಸಾಮಾಜಿಕ ನ್ಯಾಯದಡಿಯಲ್ಲಿ ಕಾಂಗ್ರೆಸ್‌ ಆಡಳಿತ ಮಾಡುತ್ತ ಬಂದಿದೆ’ ಎಂದರು. ‘ಕಾರ್ಯಕರ್ತರು ಬೂತ್‌ಮಟ್ಟದಿಂದ ಪಕ್ಷವನ್ನು ಗಟ್ಟಿಗೊಳಿಸುವ ಕಾರ್ಯ ಮಾಡಬೇಕು. ಯಾವುದೇ ಭಿನ್ನಾಭಿಪ್ರಾಯ  ಇದ್ದರೆ, ಅವುಗಳನ್ನು ಬದಿಗಿಟ್ಟು ಡಿಸೆಂಬರ್ 5ರಂದು ಶಿಗ್ಗಾವಿಯಲ್ಲಿ ನಡೆಯುವ ಸಮಾವೇಶ ಯಶಸ್ಸಿಗೆ ಶ್ರಮಿಸಬೇಕು’ ಎಂದು ಕಾರ್ಯಕರ್ತರಿಗೆ ಸೂಚಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ತಾಲ್ಲೂಕು ಘಟಕದ ಕಾರ್ಯದರ್ಶಿ ವೀರೇಶ ಆಜೂರ, ‘ಕಾಂಗ್ರೆಸ್‌ ತತ್ವ –ಸಿದ್ಧಾಂತದ ಅಡಿಯಲ್ಲಿ ಕಾರ್ಯಕರ್ತನ್ನಾಗಿ ದುಡಿದಿದ್ದೆ. ಇದೀಗ ಪಕ್ಷವು ಗುರುತಿಸಿ ಸ್ಥಾನಮಾನ ನೀಡಿದೆ. ಪಕ್ಷದ ಏಳ್ಗೆಗಾಗಿ ಇನ್ನಷ್ಟು ಶ್ರಮವಹಿಸುತ್ತೇನೆ’ ಎಂದರು.

ಕಾಂಗ್ರೆಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್‌.ವೆಂಕೋಜಿ, ಸವಣೂರ ಘಟಕದ ಅಧ್ಯಕ್ಷ ನಾಗಪ್ಪ ತಿಪ್ಪಕ್ಕನವರ, ನಾಗೇಶ ಮೊತ್ತೆ, ಹನುಮರೆಡ್ಡಿ ನಡುವಿನಮನಿ, ಬಸನಗೌಡ ದುಂಡಿಗೌಡ್ರ, ಡಾ.ಬಿ.ಎಚ್‌.ವೀರಣ್ಣ, ಶಿವಾನಂದ ಬಾಗೂರ, ರಾಜು ಕಮ್ಮಾರ, ಬಾಬಾ ತರಿನ, ಎ.ಸಿ.ಜಮಾದಾರ, ಫಕ್ಕೀರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.