ADVERTISEMENT

ಜಿಲ್ಲಾ ನೂತನ ನ್ಯಾಯಾಧೀಶ ಎಸ್.ಪಿ. ಸಂದೇಶ ಮನದಾಳದ ಮಾತು

​ಪ್ರಜಾವಾಣಿ ವಾರ್ತೆ
Published 22 ಮೇ 2012, 7:25 IST
Last Updated 22 ಮೇ 2012, 7:25 IST
ಜಿಲ್ಲಾ ನೂತನ ನ್ಯಾಯಾಧೀಶ ಎಸ್.ಪಿ. ಸಂದೇಶ ಮನದಾಳದ ಮಾತು
ಜಿಲ್ಲಾ ನೂತನ ನ್ಯಾಯಾಧೀಶ ಎಸ್.ಪಿ. ಸಂದೇಶ ಮನದಾಳದ ಮಾತು   

ಹಾವೇರಿ: ಸಣ್ಣ ವಯಸ್ಸಿನಲ್ಲಿ ಜಿಲ್ಲಾ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮಂಡ್ಯ, ಮೈಸೂರಿನ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿರುವ ಎಸ್.ಪಿ.ಸಂದೇಶ ಅವರು ಜಿಲ್ಲೆಯ ಜಿಲ್ಲಾ ನೂತನ ನ್ಯಾಯಾಧೀಶರಾಗಿ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ.
 
ಮೈಸೂರಿನಲ್ಲಿ ಹತ್ತು ಹಲವು ಹೊಸ ಯೋಜನೆಗಳ ಮೂಲಕ ಗಮನ ಸೆಳೆದಿರುವ ಅವರು, ಮೈಸೂರಿನಿಂದ ವರ್ಗವಾಗಿ ಹಾವೇರಿ ಜಿಲ್ಲೆಗೆ ಆಗಮಿಸಿರುವ ಸಂದರ್ಭದಲ್ಲಿ ತಮ್ಮ ಆದ್ಯತೆ ಹಾಗೂ ಕನಸುಗಳ ಕುರಿತು `ಪ್ರಜಾವಾಣಿ~ಯೊಂದಿಗೆ ಹಂಚಿಕೊಂಡ ಅನಿಸಿಕೆ, ಅಭಿಪ್ರಾಯಗಳ ಪೂರ್ಣಪಾಠ ಇಲ್ಲಿದೆ.

ಪ್ರಜಾವಾಣಿ: ನೂತನ ನ್ಯಾಯಾಧೀಶರಾದ ತಾವು ಜಿಲ್ಲೆಯಲ್ಲಿ ಯಾವುದಕ್ಕೆ ಆದ್ಯತೆ ನೀಡುತ್ತೀರಿ?
ನ್ಯಾಯಾಧೀಶರು:
ದೇಶದ ಬಹುತೇಕ ನ್ಯಾಯಾಲಯದಲ್ಲಿ ನ್ಯಾಯದಾನ ವಿಳಂಬ ಎಂಬ ಮಾತಿದೆ. ಅದನ್ನು ಹೋಗಲಾಡಿಸಲು ಉಚ್ಛ, ಸರ್ವೋಚ್ಛ ನ್ಯಾಯಾಲಯಗಳು ರೂಪಿಸಿರುವ ತ್ವರಿತಗತಿ ನ್ಯಾಯದಾನದ ಯೋಜನೆಗಳ ಅನುಷ್ಠಾನಗೊಳಿಸಲು ಆದ್ಯತೆ, ಪ್ರಮುಖವಾಗಿ ಐದು ವರ್ಷದಿಂದ ಏಳು ವರ್ಷಗಳ ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸಲು ಹೆಚ್ಚಿನ ಒತ್ತು ನೀಡಲಾಗುವುದು.

ಪ್ರ: ನ್ಯಾಯದಾನ ವಿಳಂಬ ತಡೆಯಲು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ?
ನ್ಯಾ: ನ್ಯಾಯಾಲಯದಲ್ಲಿ ವಿಚಾರಣೆ ಜತೆಗೆ ಲೋಕಅದಾಲತ್, ಮಧ್ಯಸ್ಥಿಕೆ ಕೇಂದ್ರಗಳಗಳು ಕಾರ್ಯ ನಿರ್ವಹಿಸುತ್ತವೆ. ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ತ್ವರಿತ ನ್ಯಾಯ ಒದಗಿಸಲಾಗುವುದು. ವಕೀಲರು ಹಾಗೂ ನ್ಯಾಯಾಂಗ ಇಲಾಖೆ ಸಿಬ್ಬಂದಿ ಒಗ್ಗೂಡಿಸಿ ಕೆಲಸ ಮಾಡಿಸಿದರೆ, ನ್ಯಾಯದಾನ ವಿಳಂಬವಾಗದಂತೆ ನೋಡಿಕೊಳ್ಳಬಹುದಾಗಿದೆ.

ಪ್ರ: ನ್ಯಾಯಾಂಗ ಇಲಾಖೆಯ ಸುಧಾರಣೆಗೆ ಕೈಗೊಳ್ಳುವ ಕಾರ್ಯಗಳೇನು?
ನ್ಯಾ: ಜಿಲ್ಲೆಯ ಏಳು ತಾಲ್ಲೂಕುಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಅಲ್ಲಿನ ನ್ಯಾಯಾಧೀಶರುಗಳೊಂದಿಗೆ ಚರ್ಚಿಸಿ ನ್ಯಾಯದಾನದ ವ್ಯವಸ್ಥೆ ಚುರುಕುಗೊಳಿಸಲಾಗುವುದು. ಆಡಳಿತ ವ್ಯವಸ್ಥೆಯಲ್ಲಿ ಸಿಬ್ಬಂದಿ ಕೆಲಸಕ್ಕೆ ಕಾಲಮಿತಿ ನಿಗದಿಗೊಳಿಸುವುದು, ಅವರ ಕಡೆ ಬರುವ ಪ್ರಮಾಣ ಪತ್ರ ಹಾಗೂ ದಾಖಲಾತಿಗಳನ್ನು ಪ್ರಾಮಾಣಿಕತೆಯಿಂದ ಬೇಗ ವಿಲೇವಾರಿ ಮಾಡುವಂತಹ ಸುಧಾರಣೆಗಳನ್ನು ಜಾರಿಗೆ ತರಲಾಗುವುದು.

ಪ್ರ: ತಾವು ಇಟ್ಟುಕೊಂಡ ಕನಸುಗಳೇನು?
ನ್ಯಾ: ನ್ಯಾಯ ಬಯಸಿ ನ್ಯಾಯಾಲಯಕ್ಕೆ ಬರುವ ಜನರಿಗೆ ಅನ್ಯಾಯವಾಗಬಾರದು ಮತ್ತು ನ್ಯಾಯದಿಂದ ವಂಚಿತರಾಗಬಾರದು. ಜನರು ನ್ಯಾಯಾಂಗದ ಮೇಲೆ ಇಟ್ಟ ವಿಶ್ವಾಸಕ್ಕೆ ಯಾವುದೇ ತರಹದ ಧಕ್ಕೆ ಬರದಂತೆ ನೋಡಿಕೊಳ್ಳುವುದು ಹಾಗೂ ನ್ಯಾಯಾಂಗದ ಮೇಲೆ ಮತ್ತಷ್ಟು ವಿಶ್ವಾಸ ಹುಟ್ಟುವಂತೆ ಮಾಡುವ ಮೂಲಕ ರಾಜ್ಯದಲ್ಲಿಯೇ ಮಾದರಿ ಜಿಲ್ಲೆಯನ್ನಾಗಿ ಮಾಡುವ ಕನಸು ಇದೆ.

ಪ್ರ: ನ್ಯಾಯಾಲಯದಲ್ಲಿ ಬಡ ಜನರಿಗೆ ಇರುವ ಅನುಕೂಲತೆಗಳೇನು?
ನ್ಯಾ: ಕರ್ಚು, ವೆಚ್ಚಕ್ಕೆ ಹೆದರಿ ಅನ್ಯಾಯಕ್ಕೊಳಗಾದ ಬಡವ್ಯಕ್ತಿ ನ್ಯಾಯ ಕೇಳುವುದಕ್ಕೆ ಹಿಂದೇಟು ಹಾಕಬಾರದು. ಹಿಂದುಳಿದ ಹಾಗೂ ಆರ್ಥಿಕವಾಗಿ ಹಿಂದುಳಿದ ಜನರಿಗಾಗಿ ಜಿಲ್ಲಾ ನ್ಯಾಯಾಲಯದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತದೆ. ಆ ಮೂಲಕ ಬಡ ಜನರಿಗೂ ಅನುಕೂಲ ಕಲ್ಪಿಸಲಾಗುವುದು.  

ಪ್ರ: ಜಿಲ್ಲಾ ವಕೀಲರ ಸಂಘದಿಂದ ಸಮರ್ಪಕ ಸಹಕಾರ ನೀರೀಕ್ಷಿಸುವಿರಾ?

ನ್ಯಾ: ನ್ಯಾಯಾಂಗ ಸಂಸ್ಥೆ ಒಂದು ಕುಟುಂಬ ಇದ್ದಂತೆ, ಕುಟುಂಬದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಇರುವಂತೆ ಇಲ್ಲಿನ ವಕೀಲರ ಸಂಘದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇರುವ ಬಗ್ಗೆ ಕೇಳಿದ್ದೇನೆ. ತಾವು ಮಧ್ಯಸ್ಥಿಕೆವಹಿಸಿ ಎಲ್ಲರನ್ನು ಒಗ್ಗೂಡಿಸಿ ಪರಸ್ಪರ ಸಹಕಾರದಿಂದ ಕೆಲಸ ಮಾಡಿಕೊಂಡು ಹೋಗಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.