ADVERTISEMENT

ಜಿಲ್ಲೆಯಾದ್ಯಂತ ‘ದೀಪಾವಳಿ’ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 7:06 IST
Last Updated 20 ಅಕ್ಟೋಬರ್ 2017, 7:06 IST

ಹಾವೇರಿ: ಮೊದಲ ಮೂರು ತಿಂಗಳು ಮಳೆಯ ಕೊರತೆ, ಬಳಿಕ ಬಂದ ಭಾರಿ ಮಳೆಯಿಂದ ‘ಮುಂಗಾರು’ ಬೆಳೆ ನಷ್ಟವಾಗಿದೆ. ಆದರೆ, ಮೂರು ವರ್ಷದ ಬರದ ಬಳಿಕ ನದಿಯಲ್ಲಿ ನೀರಿನ ಹರಿವು ಹಾಗೂ ಪ್ರಮುಖ ಕೆರೆ ಕಟ್ಟೆಗಳಲ್ಲಿ ಕೋಡಿ ಬಿದ್ದಿದೆ. ಬೆಳೆ ನಷ್ಟದ ನಡುವೆಯೂ ಭರವಸೆ ಮೂಡಿಸಿದೆ.

ಹೀಗಾಗಿ ಆರ್ಥಿಕ ಸಂಕಷ್ಟದಲ್ಲೂ ಜಿಲ್ಲೆಯಾದ್ಯಂತ ದಿೀಪಾವಳಿ ಬೆಳಗಿದೆ. ‘ಸಾಂಪ್ರದಾಯಿಕ ನಂಬಿಕೆ ಮತ್ತು ಹಿಂಗಾರು ಕೈ ಹಿಡಿಯಲಿದೆ’ ಎಂಬ ಆಶಯವೇ ಈ ಬಾರಿಯ ‘ದೀಪ’ದ ಹಬ್ಬದ ಸಂಭ್ರಮಕ್ಕೆ ಕಾರಣವಾಗಿದೆ.

ಅಮವಾಸ್ಯೆಯ ದಿನ ವರ್ತಕರು, ವ್ಯಾಪಾರಿಗಳು , ಉದ್ಯಮಿಗಳು ಲಕ್ಷ್ಮೀಯನ್ನು ಆರಾಧಿಸಿದರು. ಮನೆಗಳಲ್ಲಿ ಗೃಹಿಣಿಯರು, ಮಕ್ಕಳು ಸಮೀಪದ ದೇಗುಲಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಹಬ್ಬದ ಕಾರಣ ಆತ್ಮೀಯರಿಗೆ ಉಡುಗೊರೆನೀಡಿ, ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಭಾಗದಲ್ಲಿ ದೀಪಾವಳಿಯನ್ನು ನಾಲ್ಕು ದಿನ ಆಚರಿಸುವ ವಾಡಿಕೆಯೂ ಇದೆ. ಇದರಿಂದಾಗಿ ಹಲವೆಡೆ ದೀಪಾವಳಿಯು ಮಂಗಳವಾರದಿಂದಲೇ ಪ್ರಾರಂಭವಾಗಿದೆ.

ADVERTISEMENT

ಗಂಗಾ ಪೂಜೆ: ನೀರು ತುಂಬುವ ಹಬ್ಬಕ್ಕಾಗಿ ಸೋಮವಾರವೇ ಬಚ್ಚಲಮನೆಯ ನೀರು ಕಾಯಿಸುವ ಹಂಡೆಯನ್ನು ಸ್ವಚ್ಛಗೊಳಿಸಿ, ಸಿಂಗರಿಸಿ ನೀರು ತುಂಬಿ ಗಂಗಾ ಪೂಜೆ ನೆರವೇರಿಸುವ ಮೂಲಕ ಬೆಳಕಿನ ಹಬ್ಬಕ್ಕೆ ಮುನ್ನುಡಿ ಬರೆದರು. ಗಂಗಾ ಪೂಜೆಯಲ್ಲಿ ಪಾತ್ರೆಗಳನ್ನು ಹಿಂಡೆಲೆಕ್ಕಿ ಬಳ್ಳಿ, ಮಾಹಾಲಿಂಗನ ಬಳ್ಳಿ ಹಾಗೂ ಪುಂಡಿ ನಾರಿನಿಂದ ಅಲಂಕರಿಸಿದ್ದರು. ಬುಧವಾರ ಬೆಳಿಗ್ಗೆ ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

‘ನವ ವಿವಾಹಿತ ಅಳಿಯನಿಗೆ ಮಾವನ ಮನೆಯಲ್ಲಿ ದೀಪಾವಳಿಯು ವಿಶೇಷವಾಗಿದೆ. ಎಣ್ಣೆ ಸ್ನಾನ ಮಾಡಿ ಬರುವ ಪುರುಷರಿಗೆ ಮಹಿಳೆಯರು ತಿಲಕ ಇಟ್ಟು ಆರತಿ ಬೆಳಗುವುದು ವಾಡಿಕೆ. ಬಳಿಕ ಶಾವಿಗೆ, ಬೆಲ್ಲ ಹಾಗೂ ಹಾಲನ್ನು ಸವಿಯುತ್ತಾರೆ’ ಎಂದು ನಗರದ ನಿವೃತ್ತ ಶಿಕ್ಷಕ ಆರ್‌.ಎನ್‌.ಕರ್ಜಗಿ ತಿಳಿಸಿದರು. ಮನೆಗಳ ಮುಂಭಾಗದಲ್ಲಿ ಆಕಾಶ ಬುಟ್ಟಿಗಳನ್ನು ಕಟ್ಟಿ, ಮುಸ್ಸಂಜೆಗೆ ಮಣ್ಣಿನ ಹಣತೆಗಳನ್ನು ಹಚ್ಚಿಟ್ಟರು. ಇಡೀ ನಗರವೇ ದೀಪದ ಬೆಳಕಲ್ಲಿ ಕಂಗೊಳಿಸಿತು.

ಇಂದು ಬಲಿಪಾಡ್ಯ: ‘ದೀಪಾವಳಿಯಲ್ಲಿ ಇಂದು ಪ್ರಮುಖ ದಿನ. ನಗರದ ಪ್ರತಿ ಮನೆಗಳಲ್ಲಿ ದನದ ಕೊಟ್ಟಿಗೆ ಅಥವಾ ಮನೆಯ ಆವರಣ ಗೋಡೆಯ ಒಳಗೆ ಸೆಗಣಿಯಿಂದ ಪ್ರತಿಷ್ಠಾಪಿಸಿದ ಹಟ್ಟಿಲಕ್ಕವ್ವನವಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಬಳಿಕ ಆರತಿ ಬೆಳಗಿ ಹಬ್ಬದೂಟ ಸವಿಯುವುದು ವಾಡಿಕೆ’ ಎಂದು ನಗರದ ದಾಕ್ಷಾಯಿಣಿ ಗಾಣಿಗೇರ ತಿಳಿಸಿದರು. ಬಲಿಪಾಡ್ಯದಂದು ಮಧ್ಯಾಹ್ನ ನಗರದ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕೊಬ್ಬರಿ ಹೋರಿ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.