ADVERTISEMENT

ಜೀವ ತೆಗೆಯುತ್ತಿರುವ ತುಂಗಾ ಕಾಲುವೆಗಳು

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 8:00 IST
Last Updated 19 ಜನವರಿ 2012, 8:00 IST

ರಟ್ಟೀಹಳ್ಳಿ: ತುಂಗಾ ಮೇಲ್ದಂಡೆ ಯೋಜನೆಯು ಜಾರಿಯಾದಾಗ ಜನತೆಯ ಸಂತೋಷ ಮುಗಿಲು ಮುಟ್ಟಿತ್ತು. ಆ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ.  ರೈತರ ಪ್ರಗತಿಗಾಗಿ ನಿರ್ಮಿಸಿದ ಕಾಲುವೆಗಳು ಅವರ ಜೀವ ತೆಗೆಯಲು ನಿಂತಿರುವುದು ಮಾತ್ರ ರೈತರ ದುರದೃಷ್ಟ.

ಹೌದು, ಬಹು ನಿರೀಕ್ಷಿತ ತುಂಗಾ ಮೇಲ್ದಂಡೆ ಕಾಲುವೆಗಳು ರೈತರಿಗೆ ದೊಡ್ಡ ತಲೆನೋವು ತಂದಿಟ್ಟಿವೆ. ಆರಂಭದಲ್ಲಿ ರೈತರ ಹೊಲ, ಗದ್ದೆ, ತೋಟಗಳು ಕಾಲುವೆ ಕಾಲುವೆ ಕೆಲಸಕ್ಕೆ ಬಲಿಯಾದವು.  ವರ್ಷಗಟ್ಟಲೇ ಅಲೆದು ಅಲೆದು ಹೈರಾಣಾಗಿ, ಪ್ರತಿಭಟನೆ ಮಾಡಿ ಪರಿಹಾರ ಪಡೆಯುವಲ್ಲಿ ರೈತರು ರೋಸಿ ಹೋದರು.
 
ಕಾಲುವೆ ಕೆಲಸ ಮುಗಿಯುವುದು ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಸಮಸ್ಯೆಗಳು ಉದ್ಭವಿಸಿದ್ದವು. ಈ ಎಲ್ಲ ಸಮಸ್ಯೆಗಳು ಪರಿಹಾರವಾಗಿ ಕಾಲುವೆ ನೀರು ಹರಿದು ಬಂತು. ನೀರು ಕಂಡ ರೈತರೂ ಸಂತೋಷ ಪಟ್ಟರು. ಆದರೆ ಆ  ಉಪ ಕಾಲುವೆಗಳು ಅಲ್ಲಲ್ಲಿ ಒಡೆದು ಅಪಾರ ಪ್ರಮಾಣದ ನೀರು ಹರಿದು ಬೆಳೆಯೆಲ್ಲಾ ನಾಶವಾಯಿತು. ಇದೆಲ್ಲಕ್ಕಿಂತ ಮಿಗಿಲಾಗಿ  ಈ ಕಾಲುವೆಗಳು ರೈತರ ಪ್ರಾಣಕ್ಕೇ ಕುತ್ತು ತಂದಿವೆ.

ಈ ಕಾಲುವೆಯಲ್ಲಿ ಬಿದ್ದ ಹಲವು ರೈತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ರಟ್ಟೀಹಳ್ಳಿ ಸಮೀಪದ  ಪರ್ವತಸಿದ್ಗೇರಿ (1), ಕಡೂರ (2), ಮಾವಿನತೋಪ (1), ಹಲಗೇರಿ (3), ಶಿರಗಂಬಿ (1), ದೊಡ್ಡಗುಬ್ಬಿ (1)....ಇದು ತಂಗಾ ಮೇಲ್ದಂಡೆ ಕಾಲುವೆಗೆ ಬಲಿಯಾದ ರೈತರ ಸಂಖ್ಯೆ.  ಕಾಲುವೆ ಎರಡೂ ಬದಿಗೆ ಇಳಿಜಾರಾಗಿ ನಿರ್ಮಾಣ ಮಾಡಿರುವುದರಿಂದ ಬಿದ್ದವರು ಮೇಲೆಳಲು ಸಾಧ್ಯವೇ ಇಲ್ಲದಂತ ಪರಿಸ್ಥಿತಿ ಇದೆ.
 
ಈಜು ಬಂದರೆ ಪರವಾಗಿಲ್ಲ, ಇಲ್ಲದಿದ್ದರೆ ಶವವಾಗುವುದು ಗ್ಯಾರಂಟಿ. ನೀರು ತುಂಬಿ ಹರಿದಾಗ ಮಧ್ಯದಲ್ಲಿ ರಭಸವಿದ್ದರೂ ಕಣ್ಣಿಗೆ ಗೋಚರವಾಗುವುದಿಲ್ಲ. ಅಲ್ಲಲ್ಲಿ ಹೂಳು ತುಂಬಿರುವುದೂ ಕೂಡಾ ಸಾವಿಗೆ ಕಾರಣವಾಗುತ್ತಿದೆ. ಕಾಲುವೆಯ ಎರಡೂ ಬದಿಗೆ ರಕ್ಷಣಾ ಗೋಡೆ ನಿರ್ಮಿಸುವುದು ಅಸಾಧ್ಯವಾದ ಕೆಲಸ. ಹೀಗಾಗಿ ಕಾಲುವೆಯ ಬಳಿ ಇರುವ ಗ್ರಾಮಗಳ ಗ್ರಾಮಸ್ಥರು ಭಾರಿ ಮುಂಜಾಗ್ರತಾ ಕ್ರಮ ಅನುಸರಿವುದು ಅವಶ್ಯಕ. ಅಲ್ಲಿನ ಗ್ರಾಮ ಪಂಚಾಯಿತಿಗಳು ಇತ್ತ ಕಡೆ ಗಮನ ಹರಿಸಿ ಮುಗ್ಧ ಜೀವಗಳು ಬಲಿಯಾಗುವುದನ್ನು ತಪ್ಪಿಸಬೇಕು.

ಜೀವ ರಕ್ಷಣಾ ಸಾಮಾಗ್ರಿ ಬೇಕು: ರೈತರ ಜೀವ ತೆಗೆಯುತ್ತಿರುವ ತುಂಗಾ ಮೇಲ್ದಂಡೆ ಕಾಲುವೆಗಳಿಂದ ಜೀವ ಉಳಿಸಿಕೊಳ್ಳಲು ಗ್ರಾಮ ಪಂಚಾಯಿತಿಗಳು ಸಜ್ಜಾಗಬೇಕಿದೆ.  ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಜೀವ ರಕ್ಷಣಾ ಸಾಮಾಗ್ರಿಗಳನ್ನು ತರಿಸಿ ಇಡಬೇಕು.
 
ಕಾಲುವೆಗಳ ಬಳಿ ಅಪಾಯ ಇರುವ ಕಡೆಗಳಲ್ಲಿ ಸೂಚನಾ ಫಲಕಗಳನ್ನು ಹಾಕಬೇಕು. ಅದಕ್ಕಿಂತಲೂ ಹೆಚ್ಚಾಗಿ ಪಾಲಕರು ಪೋಷಕರು ಎಚ್ಚೆತ್ತುಕೊಂಡು ತಮ್ಮ ಮಕ್ಕಳು ಕಾಲುವೆ ಬಳಿ ಹೋಗದಂತೆ ನೋಡಿ ಕೊಳ್ಳಬೇಕು. ಹೆಣ್ಣು ಮಕ್ಕಳು ಬಟ್ಟೆ ತೊಳೆಯಲು ಹೋಗುವುದು ಸಾಮಾನ್ಯ, ಹೀಗಾಗಿ ಅವರೂ ಕೂಡಾ ಮಕ್ಕಳನ್ನು ಕರೆದುಕೊಂಡು ಹೋಗದಂತೆ ಎಚ್ಚರವಹಿಸಬೇಕು. ಕಾಲುವೆ ಬಳಿ ಆಟ ಆಡಲು ಹೋಗಲೇಬಾರದು. ಈ ನಿಟ್ಟನಲ್ಲಿ ಎಚ್ಚೆತ್ತುಕೊಂಡು ಎಲ್ಲಾ ಗ್ರಾಮ ಪಂಚಾಯಿತಿಗಳು ಕಾರ್ಯಪ್ರವೃತ್ತ ರಾಗಬೇಕು. ಆಮೂಲಕ ಮುಗ್ಧ ರೈತರ ಪ್ರಾಣ ಕಾಪಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.