ADVERTISEMENT

ತಾಪಂ ಕಚೇರಿಗೆ ಮುತ್ತಿಗೆ ಹಾಕಿ ಗ್ರಾಮಸ್ಥರ ಧರಣಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 10:40 IST
Last Updated 25 ಫೆಬ್ರುವರಿ 2012, 10:40 IST

ರಾಣೆಬೆನ್ನೂರು: ತಾಲ್ಲೂಕಿನ ಹೊಸ ಹೊನ್ನತ್ತಿ ಗ್ರಾಮಸ್ಥರು ಕುಡಿಯುವ ನೀರನ್ನು ಹೊಲಕ್ಕೆ ಹಾಯಿಸಿಕೊಳ್ಳುವ ವ್ಯಕ್ತಿಯ ಮೇಲೆ  ಹಾಗೂ ಈತನ ಜೊತೆಗೆ ಶಾಮೀಲಾದ ಗ್ರಾಪಂ ಸದಸ್ಯರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ತಾಪಂ ಮುತ್ತಿಗೆ ಹಾಕಿ ಶುಕ್ರವಾರ ಪ್ರತಿಭಟನೆ ಮಾಡಿದರು. 

ಕಳೆದ ಫೆ.21 ರಂದು  ಹೊಸ ಹೊನ್ನತ್ತಿ ಗ್ರಾಮದ ಯಲ್ಲಾಪುರ ಕ್ರಾಸ್ ಬಳಿ ಬೋರ್‌ವೆಲ್‌ನಿಂದ ದುರುಗಪ್ಪ ಮೈಲಪ್ಪ ಹರಿಜನ ಎಂಬುವನು ಕಳೆದ ಅನೇಕ ದಿನಗಳಿಂದ ಕುಡಿಯುವ ನೀರಿನ ಬೋರ್‌ವೆಲ್ ಪೈಪ್‌ಲೈನಿಂದ  ನಸುಕಿನ ಜಾವ ದಿನಾಲು ಹೊಲಕ್ಕೆ ಹಾಯಿಸಿ ಕೊಳ್ಳುವದನ್ನು ಗ್ರಾಮಸ್ಥರು ಹಿಡಿದು ಗಾಪಂ ಅಧ್ಯಕ್ಷ, ಪಿಡಿಓ, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗೆ ಮತ್ತು ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಅಧಿಕಾರಿಗಳು ಮೂರಾಲ್ಕು ದಿನ ಗಳಾದರೂ ಯಾವುದೇ ಕ್ರಮ ತೆಗೆದು ಕೊಳ್ಳದ ಕಾರಣ ಗ್ರಾಮಸ್ಥರು ತಾಪಂ ಮುತ್ತಿಗೆ ಹಾಕಿ ಗೇಟ್ ಬಂದ ಮಾಡಿ ಪ್ರತಿಭಟನೆ ನಡೆಸಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ಹೊಲಕ್ಕೆ ನೀರು ಹಾಯಿಸಿಕೊಳ್ಳುವ ವ್ಯಕ್ತಿಯ ಜೊತೆಗೆ ಶಾಮೀಲಾದ ಗ್ರಾಪಂ ಸದಸ್ಯರಾದ  ಶಂಕ್ರಪ್ಪ ಹಳ್ಳೆಪ್ಪನವರ, ಲಕ್ಷ್ಮವ್ವ ಹುಳ್ಳೇರ ಮತ್ತು ವಾಟರ್‌ಮನ್ ತಿರುಕಪ್ಪ ಹುಲ್ಮನಿ ಎಂಬುವರು ಶಾಮೀಲಾಗಿದ್ದಾರೆ ಇವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರು ದೂರಿದರು.

ಪಿಡಿಓ ಎನ್.ಎಸ್. ಬಾಗಲಕೋಟಿ ಮತ್ತು ಗ್ರಾಪಂ ಅಧ್ಯಕ್ಷ ಎಂ.ಎಚ್. ಹದ್ದಣ್ಣನವರ ಫೆ.22 ರಂದು ಹೊಲಕ್ಕೆ ನೀರು ಹಾಯಿಸಿಕೊಂಡವನ ಮೇಲೆ ಪೊಲೀಸರಿಗೆ ದೂರು ಸಲ್ಲಿಸಿದರೂ ಕೂಡ ಯಾವುದೆ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು  ಆರೋಪಿಸಿದರು.

ಕಾರ್ಯನಿರ್ವಾಹಕ ಅಧಿಕಾರಿಗಳು ಇಷ್ಟರಲ್ಲಿಯೇ ನೀರು ಹಾಯಿಸಿಕೊಂಡ ವ್ಯಕ್ತಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆದರು. ದೇವರಾಜ ಯರೇಶೀಮಿ, ರೈತ ಸಂಘದ ಈರಪ್ಪ ಬುಡಪನಹಳ್ಳಿ, ಈರಪ್ಪ ಓಲೇಕಾರ, ರೇಣುಕಾ ಶಾಖಾರ, ಮಂಜವ್ವ ಯಲ್ಲಮ್ಮನವರ, ಕುರುವತ್ತೆಪ್ಪ ಧೂಳೆಪ್ಪನವರ, ಚಂದ್ರಪ್ಪ ಕನ್ನಮವಮನವರ, ವನಜಾಕ್ಷವ್ವ , ಶರಣಪ್ಪ ಮಳ್ಳಪ್ಪನವರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.