ADVERTISEMENT

`ದಡವ ಸೇರಿಸಯ್ಯ' ಧ್ವನಿಸುರುಳಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 9:49 IST
Last Updated 20 ಜೂನ್ 2013, 9:49 IST

ಹಾವೇರಿ: ಅಭಿನವ ರಾಜಕುಮಾರ ಎಂದೇ ಖ್ಯಾತರಾದ ಅಶೋಕ ಬಸ್ತಿ ಪ್ರಥಮ ಬಾರಿಗೆ ಹಾಡಿರುವ ನಿಜಶರಣ ಅಂಬಿಗರ ಚೌಡಯ್ಯನವರ ಭಕ್ತಿ ಗೀತೆಗಳ `ದಡವ ಸೇರಿಸಯ್ಯ' ಎನ್ನುವ ಹಾಡಿನ ಸಿ.ಡಿ.ಯನ್ನು ಬುಧವಾರ ಬಿಡುಗಡೆ ಮಾಡಲಾಯಿತು.

ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಹೊಳೆ ನರಸಿಪುರದ ಅಂಬಿಗರ ಚೌಡಯ್ಯನವರ ಪೀಠದ ಶಾಂತಮುನಿ ಶ್ರೀಗಳು ನಾಡಿಗೆ ಅರ್ಪಣೆ ಮಾಡಿದರು

ಶಾಂತಮುನಿ ಶ್ರೀಗಳು ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿರುವ ಅಂಕು ಡೊಂಕುಗಳನ್ನು ತಿದ್ದಲು ಶ್ರಮಿಸಿದ್ದಾರೆ. ಅವರ ವಿಚಾರಗಳನ್ನು ಹಾಡಿನ ಮೂಲಕ ಜನರಿಗೆ ತಲುಪಿಸಬೇಕಾದ ಅಗತ್ಯತೆಯಿದೆ ಎಂದು ಹೇಳಿದರು.

ಜು.ರಾಜಕುಮಾರ ಎಂದು ಪ್ರಚಲಿತವಾಗಿರುವ ದೇವಗಿರಿಯ ಅಶೋಕ ಬಸ್ತಿ ಅವರು, ಡಾ.ರಾಜಕುಮಾರ ಅವರನ್ನು ಜನಮಾನಸಲ್ಲಿ ಜೀವಂತ ಇರಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಅಂಬಿಗರ ಚೌಡಯ್ಯನವರ ಕುರಿತ ಭಕ್ತಿಗಳನ್ನು ಹಾಡುವ ಮೂಲಕ ಚೌಡಯ್ಯನವರನ್ನು ಜನತೆಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಅವರಿಗೆ ಸಮಾಜ ಬೆಂಬಲ, ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದರು. ಅಭಿನವ ರಾಜಕುಮಾರ್ ಅಶೋಕ ಬಸ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಬೆಳಗಾವಿ ಜಿಲ್ಲೆ ಸತ್ತಿಯ ಮಲ್ಲಿಕಾರ್ಜುನ ದೇವರು, ಸವಣೂರು ದೊಡ್ಡ ಹುಣಸೆ ಮರದ ಚನ್ನಬಸವ ಶ್ರೀಗಳು, ಕೂಡಲದ ಮಠದ ಮಹೇಶ್ವರ ದೇವರು, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ನೆಹರೂ ಓಲೇಕಾರ, ಡಾ.ಎಸ್.ಕೆ.ಮೇಲಕರ, ಎಚ್.ಆರ್.ಐರಣಿ, ಎಚ್.ಎಚ್.ಕುದರಿಹಾಳ, ಮಂಜು ಸುಣಗಾರ, ಹಾಲಪ್ಪ ಎಮ್ಮೆನಹಳ್ಳಿ, ಪುಟ್ಟಪ್ಪ ಕಟ್ಟಿಮನಿ, ಮೇಘರಾಜ ಮತ್ತಿತರರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಭಕ್ತಿ ಗೀತೆಗಳ ಸಾಹಿತ್ಯ, ಸಂಗೀತ ನೀಡಿದ ಕಲಾವಿದರಿಗೆ ಹಾಗೂ ಶ್ರೀಗಳಿಗೆ ಅಭಿನವ ರಾಜಕುಮಾರ್ ಅಶೋಕ ಬಸ್ತಿ ಸಾಂಸ್ಕೃತಿಕ ಮಿತ್ರ ಮಂಡಳಿಯಿಂದ ಸನ್ಮಾನಿಸಲಾಯಿತು.

ಸುರೇಶ ಬಾರ್ಕಿ ಸ್ವಾಗತಿಸಿದರು. ರುದ್ರೇಶ ಬಾರ್ಕಿ ನಿರೂಪಿಸಿದರು.ರಾಜು ಬಾರ್ಕಿ ವಂದಿಸಿದರು. ಕಾರ್ಯಕ್ರಮದ ನಂತರ ಮಿಮಿಕ್ರಿ ದಯಾನಂದ ಹಾಗೂ ಮಿಮಿಕ್ರಿ ಗೋಪಿ ಅವರಿಂದ ಮನರಂಜನೆ ಕಾರ್ಯಕ್ರಮ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.