ADVERTISEMENT

ದಾಸೋಹದಲ್ಲಿ ಸ್ವಚ್ಛತೆ, ಸುರಕ್ಷತೆ ಇರಲಿ: ಶೋಭಾ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 6:35 IST
Last Updated 21 ಮಾರ್ಚ್ 2012, 6:35 IST

ಸವಣೂರ: ಅಕ್ಷರ ದಾಸೋಹ ಯೋಜನೆಯ ಯಶಸ್ಸು ಬಿಸಿಊಟದ ಸ್ವಚ್ಛತೆ, ಸುರಕ್ಷತೆ ಹಾಗೂ ಗುಣಮಟ್ಟವನ್ನು ಅವಲಂಬಿಸಿದೆ. ಪ್ರತಿ ಮಗುವಿಗೂ ಪರಿಪೂರ್ಣ ಆಹಾರ ಲಭಿಸಬೇಕು ಎಂಬ ಸರಕಾರದ ಉದ್ದೇಶ ಈಡೇರಬೇಕಿದೆ ಎಂದು ಜಿ.ಪಂ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಡಾ. ಶೋಭಾ ನಿಸ್ಸೀಮಗೌಡ್ರ ತಿಳಿಸಿದರು.

ಸವಣೂರಿನ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಅಕ್ಷರ ದಾಸೋಹ ಯೋಜನೆಯ ಬಿಸಿ ಊಟದ ಸಿಬ್ಬಂದಿಗಳಿಗೆ ಇತ್ತಿಚಿಗೆ ಎರ್ಪಡಿಸಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಬಿಸಿ ಊಟದ ಸಿಬ್ಬಂದಿಗಳು ತರಕಾರಿಗಳ ಯಥೇಚ್ಛ ಬಳಕೆ, ನೀರಿನ ಶುದ್ಧತೆ ಹಾಗೂ ನೈರ್ಮಲ್ಯತೆಗೆ ಆದ್ಯತೆ ನೀಡುವಂತೆ ಸೂಚಿಸಿದರು.

ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್. ರಂಗಸ್ವಾಮಿ, ಅಡುಗೆ ಸಿಬ್ಬಂದಿಗಳ ಕರ್ತವ್ಯ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ವಿವರಿಸಿ ದರು. ತಾ.ಪಂ ಅಧ್ಯಕ್ಷ ಮಾಲತೇಶ ಬಿಜ್ಜೂರ, ನಿಮ್ಮ ಕರ್ತವ್ಯದಲ್ಲಿ ನಿಷ್ಕಾಳಜಿ ತೋರದೆ ಪ್ರತಿನಿತ್ಯ ಅತ್ಯಂತ ಎಚ್ಚರಿಕೆಯಿಂದ ಅಡುಗೆ ಸಿದ್ಧಪಡಿಸಿ. ಮಕ್ಕಳಿಗೆ ಯಾವುದೇ ತೊಂದರೆ ಎದುರಾಗದಂತೆ ಮುಂಜಾಗ್ರತೆ ವಹಿಸಿ ಎಂದರು.

ಸವಣೂರಿನ ಅಗ್ನಿಶಾಮಕ ಠಾಣಾಧಿಕಾರಿ ಗುರು ರಾಜಣ್ಣ, ತೀವೃ ಸ್ವರೂಪದಲ್ಲಿ ಅಗ್ನಿ ವ್ಯಾಪಿಸಿದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಯೊಂದಿಗೆ ವಿವರಿಸಿದರು.  ಯೋಜನೆ ಯ ಜಿಲ್ಲಾ ಶಿಕ್ಷಣಾಧಿಕಾರಿ ಝೆಡ್.ಎಂ ಖಾಜಿ, ಅಡುಗೆ ಸಹಾಯಕರು ಸಿದ್ದತೆ, ಹೊಂದಾಣಿಕೆ ಹಾಗೂ ಸುರಕ್ಷತೆಗೆ ಪ್ರಾಮುಖ್ಯತೆ ನೀಡಿ. ಮಕ್ಕಳ ಬಗ್ಗೆ ನೈಜ ಕಾಳಜಿ ಹೊಂದಿ ಎಂದು ಸೂಚಿಸಿದರು.

ಸವಣೂರಿನ ಸಹಾಯಕ ನಿರ್ದೆಶಕರಾದ  ಎಮ್.ಎನ್ ಅಡಿವೆಪ್ಪನವರ್, ಅಡುಗೆ ಸಿಬ್ಬಂದಿ, ಪಾಲಕರು, ಶಾಲಾ ಶಿಕ್ಷಕರ ಸಮನ್ವಯತೆಯೊಂದಿಗೆ ಯೋಜನೆ ಯಶಸ್ವಿಗೊಳ್ಳುತ್ತದೆ ಎಂದರು.ಶಿವಾನಂದ ಬಡಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಶಿಕ್ಷಕರಾದ ಜಿ.ಬಿ ಕಾಗಿ ಕಾರ್ಯಕ್ರಮ ನಿರ್ವಹಿಸಿದರು. ದಿನೇಶ ಅತಿಥಿಗಳನ್ನು ವಂದಿಸಿದರು. ತಾ.ಪಂ ಕಾರ್ಯಾಲಯ ಹಾಗೂ ಅಕ್ಷರ ದಾಸೋಹ ಯೋಜನೆಯ ವತಿಯಿಂದ ಕಾರ್ಯಾಗಾರ ಕಾರ್ಯಕ್ರಮ ನೆರವೇರಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.