ADVERTISEMENT

ನಕಲಿ ರಸೀದಿ ವಿರುದ್ಧ ಶಿದ್ದೇಶ್ವರ ನಗರ ನಿವಾಸಿಗಳ ಆಕ್ರೋಶ....

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 5:20 IST
Last Updated 15 ಸೆಪ್ಟೆಂಬರ್ 2011, 5:20 IST

ರಾಣೆಬೆನ್ನೂರು: ಶಿದ್ದೇಶ್ವರ ನಗರದ ಹಳೇ ವಾರ್ಡನಲ್ಲಿ ವಾಸಿಸುತ್ತಿರುವ ಫಲಾನುಭವಿಗಳು ನಮಗೆ ಹಣ ವಾಪಸ್ಸು ಬೇಡ, ಪಟ್ಟಾ ನೀಡಬೇಕೆಂದು ಒತ್ತಾಯಿಸಿ ಸೋಮವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಕೆಲ ಕಾಲ ಪ್ರತಿಭಟನೆ ನಡೆಸಿದರು.

ಶಿದ್ದೇಶ್ವರನಗರದ ಹಳೇ ವಾರ್ಡಿನಲ್ಲಿ ಕಳೆದ 60-70 ವರ್ಷಗಳಿಂದ ವಾಸಿಸುತ್ತಿರುವ ಜನತೆಗೆ ಪಟ್ಟಾ ನೀಡುತ್ತೇವೆ ಎಂದು ನಗರಸಭೆ ಕಂದಾಯ ಅಧಿಕಾರಿಗಳು 25 ಜನರಿಗೆ ತಲಾ ರೂ.5 ಸಾವಿರ ಕಳೆದ ತಿಂಗಳು ವಸೂಲಿ ಮಾಡಿ ಬಿಳಿ ಹಾಳೆ ಮೇಲೆ ಸೀಲು ಸಿಕ್ಕಾ ಹಾಕಿ ನಕಲಿ ರಸೀದಿ ನೀಡಿದ್ದರು.

ಈ ಕುರಿತು ಸೋಮವಾರ ನಗರಸಭೆ ವಿಶೇಷ ಸಭೆ ಮುಗಿದ ಮೇಲೆ ನಕಲಿ ರಸೀದಿ ನೀಡಿದ ಕುರಿತು,  ಪಟ್ಟಾ ನೀಡಲು ವಸೂಲಿ ಮಾಡಿದ ಹಣ ಯಾವ ಬ್ಯಾಂಕಿನಲ್ಲಿ ಜಮಾ ಮಾಡಿದ್ದೀರಿ ಎಂದು ಪೌರಾಯುಕ್ತ ರನ್ನು ಕೇಳಿ ದಾಗ ಅವರು ನಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ, ತಾವು ರೂ.5ಸಾವಿರ ತುಂಬಲು ಆದೇಶ ನೀಡಿಲ್ಲ, ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.

ಕೂಡಲೇ ನಾರಾಯಣ ಡೊಂಬರ, ದುರುಗಪ್ಪ ಹುಲಗಮ್ಮನವರ ಮತ್ತಿತರ ಕಂದಾಯ ಅಧಿಕಾರಿಗಳು ಸೋಮವಾರ ರಾತ್ರಿ ಏಕಾಏಕಿ  ಶಿದ್ದೇಶ್ವರ ನಗರದ ಫಲಾನುಭವಿಗಳ ಮನೆಗಳಿಗೆ ಹೋಗಿ ರಸೀದಿ ವಾಪಸ್ಸು ಕೊಡ್ರಿ, ನಿಮ್ಮ ಹಣ ಈಗಲೇ ವಾಪಸ್ಸು ನೀಡುತ್ತೇವೆ ಎಂದಾಗ ಸಿಟ್ಟಿಗೆದ್ದ ಫಲಾನುಭವಿಗಳು  ತಮ್ಮ ವಾರ್ಡಿನ ಸದಸ್ಯ ಗೋಪಾಲ ಪಾಳೇದ ಅವರೊಂದಿಗೆ ಸೇರಿ ದಿಢೀರನೇ ಪ್ರತಿಭಟನೆ ಆರಂಭಿಸಿದರು.

ಸಂಚಾರಿ ಠಾಣೆ ಎದುರುಗಡೆ ರಾಷ್ಟ್ರೀಯ ಹೆದ್ದಾರಿಗೆ ಕಲ್ಲು ಹಾಗೂ ಖಾಲಿ ಬಾಟಲಿ ತುಂಬಿದ ಚೀಲಗಳನ್ನು ಹಾಕಿ ಹೆದ್ದಾರಿ ಬಂದ್ ಮಾಡಿ ತೀವ್ರ ಪ್ರತಿಭಟನೆ ನಡೆಸಿದರು. ನಗರಸಭಾ ಅಧ್ಯಕ್ಷ ಶೇಖಪ್ಪ ಹೊಸಗೌಡ್ರ ಘಟನಾ ಸ್ಥಳಕ್ಕೆ ಧಾವಿಸಿ, ಬೆಳಿಗ್ಗೆ ನಗರಸಭೆಗೆ ಬಂದು ಚರ್ಚಿಸಿ ಪರಿಹಾರ ಕಂಡುಕೊಳ್ಳೋಣ ಎಂದು ಮನವಿ ಮಾಡಿ ದರೂ ಫಲಾನುಭವಿಗಳು ಒಪ್ಪದೇ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.

ಪೊಲೀಸ್ ವೃತ್ತನಿರೀಕ್ಷಕ ಎಂ.ಎಸ್. ಪಾಟೀಲ ಹಾಗೂ ಸಿಬ್ಬಂದಿ ಪ್ರತಿಭಟನಾಕಾರರ ಮನವೊಲಿಸಿ ರಸ್ತೆ ತೆರವುಗೊಳಿಸಿದರು. ಇದೇ ಸಂದರ್ಭದಲ್ಲಿ  ನಗರಸಭಾ ಸದಸ್ಯ ಗೋಪಾಲ ಪಾಳೇದ ಅವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ಶಾಂತವ್ವ ಲಕ್ಷ್ಮಪ್ಪ ಅಮಾಸಿ, ಪಾಂಡಪ್ಪ ಹೊಸ ಪೇಟೆ, ಚಿಕ್ಕಣ್ಣ ಕುಲಕರ್ಣಿ, ವಿರುಪಾಕ್ಷಪ್ಪ ಸಾಲಿ, ಭರಮಪ್ಪ ತುಮ್ಮಿನಕಟ್ಟಿ, ಗುರುನಾಥ ಕದರಮಂಡ ಲಗಿ, ರಾಮಚಂದ್ರಪ್ಪ, ಕೇಶಪ್ಪ ಕದರಮಂಡಲಗಿ, ಈರಪ್ಪ, ಇಂದ್ರವ್ವ ಕದರಮಂಡಲಗಿ, ರಾಜೇಶಾಬ್ ಚಳಗೇರಿ, ಪಾರವ್ವ ಬೆನಕನಕೊಂಡ, ಈರಪ್ಪ ವಿಭೂತಿ, ಗಂಗವ್ವ ಚಿನ್ನಿಕಟ್ಟಿ, ರತ್ನವ್ವ ಜೋಗಾರ, ಪ್ರಕಾಶ ಬುರಡೀಕಟ್ಟಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪೊಲೀಸರಿಗೆ ದೂರು: ಮಂಗಳವಾರ ಬೆಳಿಗ್ಗೆ ಮತ್ತೆ ಕಂದಾಯ ಅಧಿಕಾರಿಗಳು ಮತ್ತೆ ಹಣ ವಾಪಸ್ಸು ನೀಡಲು ಬಂದಾಗ ಫಲಾನುಭವಿಗಳು ಮತ್ತು ಸಾರ್ವ ಜನಿಕರು ಕಂದಾಯ ಅಧಿಕಾರಿ ದುರುಗಪ್ಪ ಹುಲಗಮ್ಮ ನವರ ಅವರನ್ನು ಹಣ ಸಮೇತ ಹಿಡಿದು ತಂದು ಪೊಲೀ ಸರಿಗೆ ಒಪ್ಪಿಸಿದರು.
 
ಪ್ರಕಾಶ ಶೇಖಪ್ಪ. ಬುರಡೀಕಟ್ಟಿ, ದೇವಿಂದ್ರಪ್ಪ ಅಗಡಿ, ನೀಲವ್ವ ಬುರಡೀ ಕಟ್ಟಿ, ಇಂದ್ರವ್ವ ಕದರಮಂಡಲಗಿ, ಗಂಗವ್ವ ಚಿನ್ನಿಕಟ್ಟಿ, ವಿಠೋಬಾ ಅಗಡಿ ಮುಂತಾದ ಫಲಾನು ಭವಿಗಳು ಕಂದಾಯ ಅಧಿಕಾರಿಗಳು ನಕಲಿ ರಸೀದಿ ನೀಡಿ 25 ಜನರಿಗೆ ತಲಾ 5 ಸಾವಿರ ಪಡೆದಿದ್ದಾರೆ  ಎಂದು ಜಿಲ್ಲಾಧಿ ಕಾರಿ ಎಚ್.ಜಿ. ಶ್ರೀವರ ಹಾಗೂ ಎಸ್ಪಿ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧಿಕಾರಿಗಳಿಗೆ ಮನವಿ: ಜಿಲ್ಲಾಧಿಕಾರಿಗಳು ಶಿದ್ದೇ ಶ್ವರ ನಗರದ ಫಲಾನುಭವಿಗಳ ಮನವಿಯನ್ನು ಸ್ವೀಕ ರಿಸಿ, ನಕಲಿ ರಸೀದಿ ನೀಡಿ ಹಣ ತುಂಬಿಸಿಕೊಂಡ ಕಂದಾಯ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.