ADVERTISEMENT

‘ನನ್ನ ಗೆಲುವು ಸಂಪತ್ತಿಗೆ ಸವಾಲ್‌’

ಜಿಲ್ಲೆಯಲ್ಲಿ ಗೆದ್ದ ಅಭ್ಯರ್ಥಿಗಳ ಸಂಭ್ರಮಾಚರಣೆ; ಎಲ್ಲೆಡೆ ಪಟಾಕಿ ಸಿಡಿತದ ಸದ್ದು

​ಪ್ರಜಾವಾಣಿ ವಾರ್ತೆ
Published 16 ಮೇ 2018, 12:22 IST
Last Updated 16 ಮೇ 2018, 12:22 IST

ಹಾನಗಲ್‌: ‘ಕಾಂಗ್ರೆಸ್‌ನಿಂದ ಭವಿಷ್ಯ ಇಲ್ಲ ಎಂಬುದನ್ನು ಅರಿತಿರುವ ರಾಜ್ಯ ಮತದಾರರು ಕಾಂಗ್ರೆಸ್‌ ಮುಕ್ತ ಭಾರತ ಕರೆಗೆ ಸಾಥ್‌ ನೀಡಿದ್ದಾರೆ’ ಎಂದು ಬಿಜೆಪಿ ಶಾಸಕ ಸಿ.ಎಂ.ಉದಾಸಿ ಹೇಳಿದರು.

ಫಲಿತಾಂಶದ ನಂತರ ಇಲ್ಲಿನ ಕುಮಾರೇಶ್ವರ ವಿರಕ್ತಮಠಕ್ಕೆ ಭೇಟಿ ನೀಡಿ ಗದ್ದುಗೆಗೆ ಪೂಜೆ ಸಲ್ಲಿಸಿ, ಹೊರಭಾಗದ ಪಿಳ್ಳನಕಟ್ಟಿ ಆಂಜನೇಯ ದೇಗುಲದಲ್ಲಿ ವಿಶೇಷ ಪೂಜೆ ಬಳಿಕ ಮಾತನಾಡಿದರು. ‘1972 ರಿಂದಲೂ ಹೊರಗಿನ ಅಭ್ಯರ್ಥಿಗೆ ಕ್ಷೇತ್ರದ ಮತದಾರರು ಮಣೆ ಹಾಕಿಲ್ಲ. ಈ ಸಂಪ್ರದಾಯ ಈ ಚುನಾವಣೆಯಲ್ಲೂ ಮುಂದುವರೆದಿದೆ. ಕ್ಷೇತ್ರದವರಲ್ಲದ ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರನ್ನು ಮತದಾರರು ತಿರಸ್ಕರಿಸಿದ್ದಾರೆ’ ಎಂದರು.
‘ಈ ಚುನಾವಣೆ ಒಂದು ಅರ್ಥದಲ್ಲಿ ಸಂಪತ್ತಿಗೆ ಸವಾಲ್‌ ಎನ್ನುವಂತಿತ್ತು, ಕಾಂಗ್ರೆಸ್‌ ವಿರೋಧಿ ಅಲೆ ಗಮನದಲ್ಲಿಟ್ಟುಕೊಂಡು ಹಣ, ಹೆಂಡದ ಮೂಲಕ ಆಮಿಷ ತೋರಿಸಿದ್ದ ಕಾಂಗ್ರೆಸ್ಸಿಗರಿಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ’ ಎಂದರು.

‘ಅಭಿವೃದ್ಧಿ ತುಡಿತದ ವ್ಯಕ್ತಿಯನ್ನು ಕ್ಷೇತ್ರದ ಜನ ಬೆಂಬಲಿಸುತ್ತಾರೆ. ಹಿಂದೆ ಸಚಿವನಾಗಿದ್ದ ವೇಳೆ ಉಳಿದುಕೊಂಡಿದ್ದ ಅಭಿವೃದ್ಧಿ ಕಾರ್ಯಗಳಿಗೆ ಈಗ ಆದ್ಯತೆ ನೀಡುತ್ತೇನೆ. ಮುಖ್ಯವಾಗಿ ನೀರಾವರಿ, ಉದ್ಯೋಗ ಸೃಷ್ಟಿಯತ್ತ ಹೆಚ್ಚಿನ ಗಮನ ಹರಿಸುತ್ತೇನೆ’ ಎಂದರು.

ADVERTISEMENT

‘ದೊಡ್ಡ ಪಕ್ಷವಾಗಿ ಹೊಮ್ಮಿರುವ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಲಿದೆ. ಹಿಂದೆ ಪಿಡಬ್ಲುಡಿ ಖಾತೆ ನಿಭಾಯಿಸಿದ ಅನುಭವ ಇದೆ. ನಾನು ಸಚಿವ ಆಕಾಂಕ್ಷಿ ಅಲ್ಲ. ಹಿರಿತನ ಗುರುತಿಸಿ ಯಾವುದೇ ಖಾತೆ ನೀಡಿದರೂ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ’ ಎಂದು ಹೇಳಿದರು.

ಉದಾಸಿ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಪಟ್ಟಣದ ಗಾಂಧಿ ವೃತ್ತದಲ್ಲಿ ಜಮಾಯಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಗುಲಾಲು ಎರಚಿ ಸಂಭ್ರಮ

ಬ್ಯಾಡಗಿ: ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ಗೆಲುವಿನ ಹಿನ್ನೆಲೆಯಲ್ಲಿ ಕಾರ್ಯಕರ್ತರು ಗುಲಾಲು ಎರಚಿ ಸಂಭ್ರಮಿಸಿದರು. ಕೆಲವರ ಬೈಕ್‌ಗೆ ಬಿಜೆಪಿ ದ್ವಜ ಕಟ್ಟಿಕೊಂಡು ಘೋಷಣೆ ಕೂಗಿದರು. ಹಳೆ ಪುರಸಭೆ, ಸುಭಾಷ ನಗರದಲ್ಲಿ ಪಟಾಕಿ ಸದ್ದು ಕೇಳಿತು.

ಹಿನ್ನೆಲೆ: ತಾಲ್ಲೂಕಿನ ಮೋಟೆಬೆನ್ನೂರಿನ ವಿರೂಪಾಕ್ಷಪ್ಪ ರುದ್ರಪ್ಪ ಬಳ್ಳಾರಿ 2013ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲುಂಡರು. ಕೆಜೆಪಿ ಹಾಗೂ ಬಿಜೆಪಿ ಮತಗಳ ವಿಭಜನೆಯಿಂದ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿಗೆ ಸಹಕಾರಿಯಾಗಿತ್ತು. ಆದರೆ ಈ ಬಾರಿ ಅದೃಷ್ಟ ಒಲಿದಿದೆ.

ಗ್ರಾಮದಲ್ಲಿ ನರ್ಸರಿಯಿಂದ ಪದವಿ ತರಗತಿಯವರೆಗೆ ಶಿಕ್ಷಣ ಸಂಸ್ಥೆ ತೆರೆದಿದ್ದಾರೆ. ಪತ್ನಿ ಶಾಂತಮ್ಮ, ಮೂವರು ಪುತ್ರರಿದ್ದಾರೆ. ಹಿರಿಯ ಮಗ ಕ್ರಶರ್ ಉದ್ಯಮಿ, ಯುವರಾಜ ಮರಳು ವ್ಯವಹಾರ, ಮೂರನೇ ಮಗ ಪ್ರಶಾಂತ  ಟ್ರ್ಯಾಕ್ಟರ್ ಶೋರೂಂ ಇಟ್ಟುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.