ADVERTISEMENT

ನಾನೇ ಅಭ್ಯರ್ಥಿ: ಕೋಳಿವಾಡ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 6:56 IST
Last Updated 28 ಅಕ್ಟೋಬರ್ 2017, 6:56 IST
ನಾನೇ ಅಭ್ಯರ್ಥಿ: ಕೋಳಿವಾಡ ಸ್ಪಷ್ಟನೆ
ನಾನೇ ಅಭ್ಯರ್ಥಿ: ಕೋಳಿವಾಡ ಸ್ಪಷ್ಟನೆ   

ರಾಣೆಬೆನ್ನೂರು: ‘2018ರ ವಿಧಾನಸಭಾ ಚುನಾವಣೆಯಲ್ಲಿ ರಾಣೆಬೆನ್ನೂರು ಕ್ಷೇತ್ರದಿಂದ ನಾನೇ ಸ್ಪರ್ಧಿಸುತ್ತೇನೆ. ಇದು ಸೂರ್ಯ–ಚಂದ್ರರು ಇರುವಷ್ಟೇ ಸತ್ಯ’ ಎಂದು ವಿಧಾನ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ನಿವೃತ್ತಿ ಹೊಂದಲಿದ್ದು, ಪುತ್ರ ಪ್ರಕಾಶ ಕೋಳಿವಾಡ ಸ್ಪರ್ಧಿಸುತ್ತಾರೆ ಎಂದು ಕೆಲವರು ಹಸಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಆದರೆ, ಕೋಳಿವಾಡ ಇನ್ನೂ ಗಟ್ಟಿಮುಟ್ಟಾಗಿದ್ದು, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದೂ ಶತಃ ಸಿದ್ಧ’ ಎಂದರು.

‘ನಮ್ಮ ಕ್ಷೇತ್ರದ ಮತದಾರರು ನನ್ನ ಮೇಲೆ ಇಟ್ಟಿರುವ ಅಭಿಮಾನದಿಂದ 5 ಬಾರಿ ಶಾಸಕನಾಗಿದ್ದೇನೆ. ಈ ಹಿಂದೆ ಸಚಿವ ಮತ್ತು ಈಗ ವಿಧಾನಸಭಾ ಅಧ್ಯಕ್ಷನಾಗಿದ್ದೇನೆ. ಚುನಾವಣೆಯಲ್ಲಿ ಮತದಾರರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದೇನೆ. ಆದರೆ, ಕ್ಷೇತ್ರದ ಜನತೆಯ ಋಣವನ್ನು ಹಲವು ಜನ್ಮ ಪಡೆದರೂ ತೀರಿಸಲು ಸಾಧ್ಯವಿಲ್ಲ’ ಎಂದರು.

ADVERTISEMENT

ಹುಟ್ಟುಹಬ್ಬ: ‘ಅಭಿಮಾನಿಗಳು ನನ್ನ 74 ನೇ ಹುಟ್ಟುಹಬ್ಬವನ್ನು ನವೆಂಬರ್ 5 ರಂದು ಆಚರಿಸಲು ಉತ್ಸುಕರಾಗಿದ್ದು, ಸಮ್ಮತಿಸಿದ್ದೇನೆ. ಇಲ್ಲಿನ ಬಿ.ಟಿ.ಪಾಟೀಲ ಮೈದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಅಂದು, 101 ಜೋಡಿಗಳ ‘ಸರ್ವ ಧರ್ಮ ಸಾಮೂಹಿಕ ವಿವಾಹ’ ನಡೆಯಲಿದೆ. ಸಚಿವ ರಾಮಲಿಂಗಾರಡ್ಡಿ, ಎಚ್‌.ಕೆ.ಪಾಟೀಲ, ರುದ್ರಪ್ಪ ಲಮಾಣಿ ಮತ್ತಿತರರು ಪಾಲ್ಗೊಳ್ಳುವರು’ ಎಂದರು.

ಚಾಲನೆ: ಅಂದು ಮುಖ್ಯಮಂತ್ರಿಗಳು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವರು. ₹8.50 ಅನುದಾನದ ನಗರದ ಸಾರ್ವಜನಿಕ ಆಸ್ಪತ್ರೆಯ ಮೊದಲ ಮಹಡಿ ಕಟ್ಟಡ ಕಾಮಗಾರಿ ಉದ್ಘಾಟನೆ, ಅಮೃತ ಯೋಜನೆಯ ₹135.43 ಕೋಟಿ ಅನುದಾನದ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆ, ₹30.49 ಕೋಟಿ ಅನುದಾನದಲ್ಲಿ ನಗರ ಒಳಚರಂಡಿ ಯೋಜನೆಯ ಕೊಳವೆ ಮಾರ್ಗ ಮತ್ತು ₹46.84 ಕೋಟಿ ಅನುದಾನದ ಎರಡನೇ ಹಂತದ ಒಳಚರಂಡಿ ಕೊಳವೆ ಮಾರ್ಗದ ಲೋಕಾರ್ಪಣೆ ಹಾಗೂ ₹ 4.45 ಕೋಟಿ ಅನುದಾನದಲ್ಲಿ ಎಪಿಎಂಸಿ ಪ್ರಾಂಗಣದಲ್ಲಿ ಕೆ.ಬಿ.ಕೋಳಿವಾಡ ಸಭಾ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸುವರು ಎಂದರು.

ತಾಲ್ಲೂಕಿನ ಆರೇಮಲ್ಲಾಪುರ ಭಾಗದ ಜಮೀನುಗಳಿಗೆ ನೀರಾವರಿ ಕಲ್ಪಿಸುವ ₹136.20 ಕೋಟಿ ಅನುದಾನದ ತುಂಗಾ ಮೇಲ್ದಂಡೆ ನೀರಾವರಿ ಯೋಜನೆ ಲೋಕಾರ್ಪಣೆ, ₹30.50 ಕೋಟಿಯ ದೊಡ್ಡ ಕೆರೆಗೆ ನೀರು ತುಂಬಿಸುವುದು. 120 ಅಂಗವಿಕಲರಿಗೆ ಯಂತ್ರಚಾಲಿತ ತ್ರಿಚಕ್ರ ವಾಹನಗಳ ವಿತರಣೆ ಸೇರಿದಂತೆ ಒಟ್ಟು ₹ 400 ಕೋಟಿ ಅನುದಾನದ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಉದ್ಘಾಟನೆಗೊಳ್ಳಲಿವೆ’ ಎಂದರು.

ಬಸನಗೌಡ ಮರದ, ಸಣ್ಣತಮ್ಮಪ್ಪ ಬಾರ್ಕಿ, ಏಕನಾಥ ಭಾನುವಳ್ಳಿ, ಕೆ.ಡಿ. ಸಾವುಕಾರ, ಪುಟ್ಟಪ್ಪ ಮರಿಯಮ್ಮನವರ, ಶರತ್ಚಂದ್ರ ದೊಡ್ಡಮನಿ, ಮಂಜನಗೌಡ ಪಾಟೀಲ, ಇಕ್ಬಾಲ್‌ಸಾಬ್‌ ರಾಣೆಬೆನ್ನೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.