ADVERTISEMENT

ನಿರ್ವಹಣೆಯ ಕೊರತೆ, ಬಾಡುತ್ತಿವೆ ಗಿಡಗಳು

ಗಿಡಗಳಿಗೆ ಟ್ರೀಗಾರ್ಡ್‌ನಿಂದಲೂ ರಕ್ಷಣೆ ಇಲ್ಲ; ಪುರಸಭೆ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಹಿಡಿಶಾಪ

​ಪ್ರಜಾವಾಣಿ ವಾರ್ತೆ
Published 5 ಮೇ 2018, 12:11 IST
Last Updated 5 ಮೇ 2018, 12:11 IST
ಬ್ಯಾಡಗಿ ಪಟ್ಟಣದ ಸ್ಟೇಷನ್ ರಸ್ತೆಯ ರಸ್ತೆ ವಿಭಜಕದಲ್ಲಿ ನೆಡಲಾಗಿರುವ ಗಿಡಗಳು ಬಾಡಿರುವುದು
ಬ್ಯಾಡಗಿ ಪಟ್ಟಣದ ಸ್ಟೇಷನ್ ರಸ್ತೆಯ ರಸ್ತೆ ವಿಭಜಕದಲ್ಲಿ ನೆಡಲಾಗಿರುವ ಗಿಡಗಳು ಬಾಡಿರುವುದು   

ಬ್ಯಾಡಗಿ: ‘ಗಿಡ ಬೆಳೆಸಿ ಪರಿಸರ ಉಳಿಸಿ’ ಎಂಬ ಘೋಷಣೆಯು ಘೋಷಣೆಯಾಗಿಯೇ ಉಳಿದಿದೆ. ಹಣ ಖರ್ಚು ಮಾಡಿ ಗಿಡಗಳನ್ನು ನೆಟ್ಟು, ರಕ್ಷಣೆಗೆ ಮುಂದಾಗದ ಸ್ಥಳೀಯ ಪುರಸಭೆ ವಿರುದ್ಧ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಿಡಗಳನ್ನು ಹಚ್ಚಿದ ಬಳಿಕ ಅವುಗಳಿಗೆ ಕಾಲಕಾಲಕ್ಕೆ ನೀರು ಹಾಕಿ ಪೋಷಣೆ ಮಾಡಬೇಕು. ಆದರೆ, ಪುರಸಭೆ ಗಿಡಗಳನ್ನು ನೆಟ್ಟು ಕೈ ತೊಳೆದುಕೊಂಡಿದೆ. ಅವುಗಳ ರಕ್ಷಣೆಗೆ ಬರುತ್ತಿಲ್ಲ. ಹೀಗಾಗಿ ಬೆಳೆದುನಿಂತ ಗಿಡಗಳು ಒಣಗುತ್ತಿವೆ. ಈಗಲಾದರೂ ಅವುಗಳಿಗೆ ನೀರುಣಿಸಿ ಪೋಷಣೆ ಮಾಡಬೇಕು ಎಂದು ಪರಿಸರ ಪ್ರೇಮಿ ಮಂಜುನಾಥ ಶಿರವಾಡಕರ ಆಗ್ರಹ.

ಪಟ್ಟಣದ ಅಂದವನ್ನು ಹೆಚ್ಚಿಸಲು ಮತ್ತು ವಾಹನಗಳಿಂದ ಬರುವ ಹೊಗೆ ನಿಯಂತ್ರಿಸುವ ಉದ್ದೇಶದಿಂದ ರಸ್ತೆ ವಿಭಜಕದಲ್ಲಿ ಗಿಡ ಹಚ್ಚಲಾಗಿತ್ತು. ಆದರೆ, ಅವು ನೀರಿಲ್ಲದೆ ಒಣಗುತ್ತಿವೆ.

ADVERTISEMENT

50 ಗಿಡಗಳಿಗೆ ಸುಮಾರು ₹1.15 ಲಕ್ಷ ಖರ್ಚು ಮಾಡಿ ಟ್ರೀಗಾರ್ಡ್‌ಗಳನ್ನು ಹಾಕಿಸಲಾಗಿದೆ. ಗಿಡಗಳ
ರಕ್ಷಣೆಗೆಂದು ಹಾಕಿದ ಟ್ರೀಗಾರ್ಡ್‌ನ್ನು ಕಿಡಿಗೇಡಿಗಳು ಕಿತ್ತು ಹಾಕಿದ್ದಾರೆ. ನಿಜವಾದ ಉದ್ದೇಶ ವಿಫಲವಾಗಿದೆ ಎಂದು ಮಾಜಿ ಸೈನಿಕ, ಪರಿಸರ ಪ್ರೇಮಿ ರಾಜಣ್ಣ ಹೊಸಳ್ಳಿ ದೂರುತ್ತಾರೆ.

‘ಪುರಸಭೆಯಲ್ಲಿ ಟ್ಯಾಂಕರ್ ಇದೆ, ಚಾಲಕರಿದ್ದಾರೆ, ಸ್ವಚ್ಛತೆಗೆ ಸಿಬ್ಬಂದಿ ಇದ್ದಾರೆ. ಗಿಡದ ಸುತ್ತಲೂ ಕಳೆ ಬೆಳೆದಿದ್ದು, ಅದನ್ನು ಸ್ವಚ್ಛಗೊಳಿಸಿ, ಎರಹುಳು ಗೊಬ್ಬರದ ಜೊತೆಗೆ ವಾರಕ್ಕೊಮ್ಮೆ ನೀರು ಹಾಕಿದರೆ ಗಿಡಗಳು ಹುಲುಸಾಗಿ ಬೆಳೆಯುತ್ತವೆ. ಆದರೆ, ಅಷ್ಟು ಕೆಲಸ ಮಾಡಲು ಪುರಸಭೆ ಮನಸು ಇದ್ದಂತಿಲ್ಲ’ ಎಂಬುದು ಅವರ ಅಸಮಾಧಾನ.

‘ಗಿಡಗಳ ನಿರ್ವಹಣೆಯು ಪುರಸಭೆಯ ಕೆಲಸ, ಒಣಗುತ್ತಿರುವ ಗಿಡಗಳ ರಕ್ಷಣೆ ಮಾಡಲು ನೀರು ಹಾಕಿಸುವಂತೆ ನಾವು ಹಲವಾರು ಬಾರಿ ಆರೋಗ್ಯ ನಿರೀಕ್ಷಕರ ಗಮನಕ್ಕೆ ತಂದಿದ್ದೇವೆ. ಇವತ್ತು ಮಾಡಿಸುತ್ತೇವೆ, ನಾಳೆ ಹಾಕಿಸುತ್ತೇವೆ ಎಂದು ಭರವಸೆ ಕೊಡುತ್ತಾರೆ. ಆದರೆ, ಕೆಲಸ ಮಾತ್ರ ಆಗುತ್ತಿಲ್ಲ. ಚುನಾವಣೆ ಬಂದ ಕಾರಣ ನಾವೂ ಚುನಾವಣೆಯಲ್ಲಿ ಬ್ಯೂಸಿಯಾಗಿದ್ದೇವೆ.ನಾಳೆಯೆ ಕೆಲಸ ಮಾಡಿಸಲು ಸೂಚಿಸುತ್ತೇವೆ’ ಎಂದು 5ನೇ ವಾರ್ಡ್ ಸದಸ್ಯ ನಾರಾಯಣಪ್ಪ ಕರ್ನೂಲ ಹಾಗೂ 6 ನೇ ವಾರ್ಡ್ ಸದಸ್ಯೆ ನೀಲವ್ವ ದೊಡ್ಮನಿ ‘ಪ್ರಜಾವಾಣಿ‘ಗೆ ತಿಳಿಸಿದರು.

ಪ್ರಸ್ತುತ 40 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಹಾಗೂ ಭಾರಿ ಬಿಸಿಲು ಇದೆ. ದಿನಕ್ಕೊಂದು ಬಾರಿಯಾದರೂ ಗಿಡಗಳಿಗೆ ನೀರುಣಿಸುವುದು ಅಗತ್ಯವಾಗಿದೆ ಎಂಬುದು ಪರಿಸರ ಪ್ರೇಮಿಗಳ ವಾದವಾಗಿದೆ.
**
ಒಂದೆರಡು ದಿನದಲ್ಲಿ ಗಿಡದ ಸುತ್ತಲಿನ ಕಳೆ‌ ‌‌ಸ್ವಚ್ಛಗೊಳಿಸಿ ನೀರು ಹಾಕಿಸುವ ವ್ಯವಸ್ಥೆ ಮಾಡಲಾಗುವುದು
– ರವಿಕೀರ್ತಿ, ಆರೋಗ್ಯ ನಿರೀಕ್ಷಕ, ಪುರಸಭೆ

– ಪ್ರಮೀಳಾ ಹುನಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.