ADVERTISEMENT

ನೀರಾವರಿಗೆ ಹೆಚ್ಚಿನ ಆದ್ಯತೆ: ಕಾರಜೋಳ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 7:55 IST
Last Updated 16 ಅಕ್ಟೋಬರ್ 2012, 7:55 IST

ಹಾನಗಲ್: `ನೀರು ಸದ್ಭಳಕೆ ಉದ್ದೇಶದಿಂದ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಉತ್ತರ ಕರ್ನಾಟಕ ಭಾಗದ ನದಿ, ಹಳ್ಳಗಳಿಗೆ ಅಡ್ಡಲಾಗಿ 546 ಬ್ಯಾರೇಜ್‌ಗಳನ್ನು ನಿರ್ಮಾಣ ಮಾಡಲಾಗಿದೆ~ ಎಂದು ಸಣ್ಣ ನೀರಾವರಿ ಇಲಾಖೆ   ಸಚಿವ ಗೋವಿಂದ ಕಾರಜೋಳ ಹೇಳಿದರು.

ಹಾನಗಲ್ ತಾಲ್ಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳ ಪರಿಶೀಲನೆ ಶನಿವಾರ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ಧಿಗೋಷ್ಠಿಯಲ್ಲಿ  ಮಾತನಾಡಿದರು.

`ನಾಲ್ಕು ವರ್ಷದ ಅವಧಿಯಲ್ಲಿ ರಾಜ್ಯ ಸರಕಾರದಿಂದ ನೀರಾವರಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಎಸ್.ಸಿ ಮತ್ತು ಎಸ್.ಟಿ ಜನಾಂಗದ ಕೃಷಿ      ಭೂಮಿಯ `ಗಂಗಾ ಕಲ್ಯಾಣ ಯೋಜನೆ~ ಅಡಿಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಈಗಾಗಲೇ ರೂ. 11.50 ಕೋಟಿ ವಿನಿಯೋಗಿಸಲಾಗಿದೆ. ಅಲ್ಲದೆ ಜಿಲ್ಲೆಯಲ್ಲಿ 149 ಬಾಂದಾರ್ ನಿರ್ಮಾಣದಿಂದ 8186 ಹೆಕ್ಟೇರ್ ಹೊಸ ಅಚ್ಚುಕಟ್ಟು ಭೂಮಿ ರಚನೆಯಾಗಿದೆ. ಇದಕ್ಕೆ ರೂ. 123 ಕೋಟಿ ವೆಚ್ಚವಾಗಿದೆ. ಜಲ ಸಂವರ್ಧನೆ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ರೂ. 43 ಕೋಟಿ ವೆಚ್ಚದಲ್ಲಿ 200 ಕೆರೆಗಳ ದುರಸ್ತಿ, ನೀರು ಸ್ಥಿರೀಕರಣ ಕೈಗೆತ್ತಿ ಕೊಳ್ಳಲಾಗಿದೆ. ಈಗಾಗಲೇ ರೂ. 30 ಕೋಟಿ ಕಾಮಗಾರಿ ಪೂರ್ಣಗೊಂಡಿದೆ~ ಎಂದರು.

ಹಾನಗಲ್ ತಾಲ್ಲೂಕಿನಲ್ಲಿ ಮೊದಲ ಹಂತದಲ್ಲಿ 229 ಕೆರೆಗಳ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದೆ. ಎರಡನೇ ಹಂತದ ಜಲ ಸಂವರ್ಧನ ಯೋಜನೆ ರಾಜ್ಯದ 18 ಜಿಲ್ಲೆಯಲ್ಲಿ ಚಾಲನೆಯಲ್ಲಿದ್ದು, ಇದೇ ಡಿಸೆಂಬರ್ ತಿಂಗಳಲ್ಲಿ ಯೋಜನೆ ಅಂತ್ಯಗೊಳ್ಳಲಿದೆ. ಈ ಯೋಜನೆಯಿಂದ ಅಂತರ್‌ಜಲ ಮಟ್ಟ ಹೆಚ್ಚಳ, ನೀರಿನ ಸಂಗ್ರಹದಂತಹ ಹಲವಾರು ಅನುಕೂಲತೆಗಳು ಸಾಧ್ಯವಾಗಿವೆ. ಪ್ರತಿ ಜಿಲ್ಲೆಯಲ್ಲಿ ಇಲಾಖೆಯ ಕಾಮಗಾರಿಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪ್ರಶ್ನೆಗೆ ಕಾರಜೋಳ ಉತ್ತರಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ, ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ ಮತ್ತಿತರರು ಉಪಸ್ಥಿತರಿದ್ದರು.

ನಂತರ ಹಾನಗಲ್ಲಿನ ಆನಿಕೆರೆ, ಮಕರವಳ್ಳಿ ಏತ ನೀರಾವರಿ, ಶೇಷಗಿರಿ ಬ್ಯಾರೇಜ್ ಮತ್ತಿತರೆಡೆ ಸಣ್ಣ ನೀರಾವರಿ ಇಲಾಖೆಯಿಂದ ನಡೆದಿರುವ ಕಾಮ ಗಾರಿಗಳನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಸಚಿವ ಸಿ.ಎಂ. ಉದಾಸಿ, ಜಿಲ್ಲಾ ಪಂಚಾಯಿತಿ ಉಪಾ ಧ್ಯಕ್ಷೆ ಗೀತಾ ಅಂಕಸಖಾನಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಲಿತವ್ವ ಹಿರೇಮಠ, ಉಪಾಧ್ಯಕ್ಷ ನಿಂಗಪ್ಪ ಗೊಬ್ಬೇರ, ಇಲಾಖೆಯ    ಎಂಜನಿಯರ್ ಚಪ್ಪರದ ಮುಂತಾದ ವರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.