ADVERTISEMENT

ಪುರಸಭೆ ಅಧ್ಯಕ್ಷರ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 5:30 IST
Last Updated 7 ಜನವರಿ 2012, 5:30 IST

ಹಾನಗಲ್:  ಪುರಸಭೆಯ ನೂತನ ಅಧ್ಯಕ್ಷರಾಗಿ ಹಸಿನಾಬೀ ನಾಯ್ಕನವರ ಅವಿರೋಧವಾಗಿ ಆಯ್ಕೆಗೊಂಡರು.
 ಹಿಂದಿನ ಅವಧಿಯ ಅಧ್ಯಕ್ಷೆ ಲಕ್ಷ್ಮವ್ವ ಹಳೇಕೋಟಿ ರಾಜಿನಾಮೆ ಸಲ್ಲಿಸಿದ್ದರಿಂದ ತೆರ ವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಹಸಿನಾಭಿ ನಾಯ್ಕನವರ ಆಯ್ಕೆಯಾದರು ಹಸಿನಾಬೀ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಎಸ್.ಎ.ಎನ್.ರುದ್ರೇಶ ಕರ್ತವ್ಯ ನಿರ್ವಹಿಸಿದರು.

 ಈ ಸಂದರ್ಭದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ನೂತನ ಅಧ್ಯಕ್ಷರಿಗೆ ಶುಭಾಷಯ ಕೋರಿ ಮಾತನಾಡಿದ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ, ಅಭಿವೃದ್ಧಿ ದೃಷ್ಟಿಯಿಂದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ‌್ಯ ನಿರ್ವಹಿಸಿದಾಗ ರಾಜಕೀಯ ಕ್ಷೇತ್ರದಲ್ಲಿ ಜನಪ್ರಿ ಯತೆ ಕಂಡು ಕೊಳ್ಳಲು ಸಾಧ್ಯ. ಪುರಸಭೆಯ ನೂತನ ಕಟ್ಟಡದ ನಿರ್ಮಾಣ ಸೇರಿದಂತೆ ಪಟ್ಟಣದ ಸರ್ವಾಂಗಿಣ ಬೆಳವಣಿಗೆಯ ಗುರಿ ಸಾಧಿಸಲು ಪುರಸಭೆ ಸದಸ್ಯರು ಒಗ್ಗಟ್ಟಾಗಿ ಮುಂದುವರೆಯಬೇಕು. ಈಗಾಗಲೇ ಪಟ್ಟಣದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಮೀಪದ ಮಹರಾಜಪೇಟ ಹತ್ತಿರ  ಹೆಲಿಪ್ಯಾಡ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಐತಿಹಾಸಿಕ ಆನಿಕೇರೆಯನ್ನು  ರೂ. 3.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ ಸುಂದರ ಪ್ರವಾಸಿ ತಾಣವನ್ನಾಗಿಸುವುದು. ರೂ. 2.5 ಕೋಟಿ ವೆಚ್ಚದಲ್ಲಿ ಮಿನಿ ವಿಧಾನಸೌಧ ಸಮೀಪ ಸರಕಾರಿ ಕಾರ‌್ಯಾಲಯಗಳ ಸಂಕೀರ್ಣ ನಿರ್ಮಾಣ, ಕುಮಾರೇಶ್ವರ ಮಠದ ಸಮೀಪ ರೂ. 65 ಲಕ್ಷ ವೆಚ್ಚದ ಯಾತ್ರಿ ನಿವಾಸ ಹಾಗೂ ಗ್ರೀಕ್ ಮಾದರಿಯ ರಂಗ ಮಂದಿರ, ರೂ. 75 ಲಕ್ಷದಲ್ಲಿ ಸ್ಟೇಟ್ ಬ್ಯಾಂಕ್ ಎದುರು ಕಾಂಕ್ರಿಟ್ ರಸ್ತೆ ಕಾಮ ಗಾರಿ, ನೂತನ ಸಾರ್ವಜನಿಕ ಗ್ರಂಥಾಲಯ ಹತ್ತಿರ ರೂ. 2.5 ಕೋಟಿ ವೆಚ್ಚದ ಸಾಂಸ್ಕೃತಿಕ ಭವನ, ಕ್ರೀಡಾಂಗಣದಲ್ಲಿ ಈಜುಕೊಳ ಮತ್ತು ಬಾಲಭವನ ನಿರ್ಮಾಣ ಸೇರಿದಂತೆ ರೂ. 9 ಕೋಟಿ ವೆಚ್ಚದಲ್ಲಿ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಇವೆಲ್ಲ ಹಾನಗಲ್ ಪಟ್ಟಣದ ಅಭಿವೃದ್ಧಿಯ ಯೋಜನೆ ಗಳಾಗಿದ್ದು, ಪುರಸಭೆ ಸದಸ್ಯರು ಅಭಿವೃದ್ಧಿ ಕಾರ‌್ಯಗಳತ್ತ ಜವಾಬ್ದಾರಿ ವಹಿಸಬೇಕು ಎಂದರು.

 ಎಪಿಎಂಸಿ ಅಧ್ಯಕ್ಷ ಬಿ.ಎಸ್.ಅಕ್ಕಿವಳ್ಳಿ, ರೈತ ಮುಖಂಡ ಎ.ಎಸ್.ಬಳ್ಳಾರಿ, ಪುರಸಭೆ ಮಾಜಿ ಅಧ್ಯಕ್ಷ  ಕಲ್ಯಾಣಕುಮಾರ ಶೆಟ್ಟರ, ಲಕ್ಷ್ಮವ್ವ ಹಳೆ ಕೋಟಿ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ ಮೂಡ್ಲಿ, ಸದಸ್ಯರಾದ ನಾಗರಾಜ ಉದಾಸಿ, ವಿಕಾಸ ನಿಂಗೋಜಿ, ರವಿ ಕಲಾಲ, ವಿದ್ಯಾ ಲಿಂಗೇರಿ, ಸಂಜು ಕಲಾಲ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.