ADVERTISEMENT

ಪೊಲೀಸ್ ಸರ್ಪಗಾವಲಿನಲ್ಲಿ ಸಂದರ್ಶನ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 9:15 IST
Last Updated 12 ಅಕ್ಟೋಬರ್ 2012, 9:15 IST

ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದ ದಿ ಮಾಡರ್ನ್ ಇಂಗ್ಲಿಷ್ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಶಿಕ್ಷಕರ ನೇಮಕಾತಿ ಮಾಡುವ ಸಂದರ್ಭದಲ್ಲಿ ಹಿಂದೆ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಆದ್ಯತೆ ನೀಡಬೇಕೆಂದು ಸಂಸ್ಥೆ ಅಧ್ಯಕ್ಷ ಎಂ.ಸಿ. ಪಾಟೀಲ ಅವರಿಗೆ ಇಲ್ಲಿನ ಸಾರ್ವಜನಿಕರು ಒತ್ತಾಯಿಸಿದರು.

ಬಂಕಾಪುರ ನಾಡ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ನಡೆಯುವ ದಿ ಮಾಡರ್ನ್ ಇಂಗ್ಲಿಷ್ ಪ್ರೌಢಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ನಡೆದ ಸಂದರ್ಶನ ಪ್ರಕ್ರಿಯೆಯನ್ನು ಪೊಲೀಸ್ ಸರ್ಪಗಾವಲಿನಲ್ಲಿ ಮಗಿಸಲಾಯಿತು. ಆದರೆ ನೇಮಕಾತಿ ಸಂದರ್ಭದಲ್ಲಿ ಈ ಪ್ರೌಢಶಾಲೆಯಲ್ಲಿ ಸುಮಾರು 8-10ವರ್ಷಗಳಿಂದ ಸೇವೆ ಸಲ್ಲಿಸಿದ ಶಿಕ್ಷಕರ ಸೇವೆಯನ್ನು ಪರಿಗಣಿಸಿ ಅಂತಹವರಿಗೆ ನೇಮಕಾತಿಯಲ್ಲಿ  ಆದ್ಯತೆ ನೀಡಬೇಕು. ಅದರಿಂದ ಶಿಕ್ಷಣ ಸಂಸ್ಥೆ ಜೊತೆಗೆ ಪಟ್ಟಣದ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ ಎಂದು ಇಲ್ಲಿನ ಸಾರ್ವಜನಿಕರು ಆಡಳಿತ ಮಂಡಳಿಯನ್ನು ಒತ್ತಾಯಿಸಿದ್ದಾರೆ.

ರಾರಾಜಿಸಿದ ಕರಪತ್ರಗಳು: ನಾಡ ಶಿಕ್ಷಣ ಸಂಸ್ಥೆ ಮಾಡುತ್ತಿರುವ ಶಿಕ್ಷಕರ ನೇಮಕಾತಿಗೆ ಅಭ್ಯರ್ಥಿಗಳ ನಡುವೆ ಸವಾಲು (ಹರಾಜು) ನಡೆಸಿದ್ದಾರೆ. ಒಂದು ಹುದ್ದೆಗೆ ಸುಮಾರು ರೂ. 15 ಲಕ್ಷಗಳಿಂದ ರೂ 20ಲಕ್ಷಗಳವರೆಗೆ ಹಣ ನೀಡುವಂತೆ ಸಂದರ್ಶನಕ್ಕೆ ಬಂದ ಅಭ್ಯರ್ಥಿಗಳ ನಡುವೆ ಪೈಪೊಟಿ ನಡೆಸಿದ್ದಾರೆ. ಅಲ್ಲದೆ ಇದಕ್ಕಿಂತ ಹೆಚ್ಚಿಗೆ ಹಣ ಕೊಟ್ಟವರಿಗೆ ಮೊದಲ ಆದ್ಯತೆ ಎಂಬ ಕರಪತ್ರಗಳು ಶಾಲಾ ಆವರಣದಲ್ಲಿ ರಾರಾಜಿಸುತ್ತಿದ್ದವು.

ಪೊಲೀಸ್ ಸರ್ಪಗಾವಲು: ಬಂಕಾಪುರ ನಾಡ ಶಿಕ್ಷಣ ಸಂಸ್ಥೆ ಬುಧವಾರ ನಡೆಸಿದ ಶಿಕ್ಷಕರ ನೇಮಕಾತಿ ಸಂದರ್ಭ ವಿಧಾನ ಸಭಾ, ಲೋಕಸಭಾ ಚುನಾವಣೆ ನಡೆಯುತ್ತಿರುವಂತೆ ವಾತಾವರಣ ಕಂಡುಬಂದಿತು. ಎಲ್ಲಿ ನೋಡಿದರೂ ಪೊಲೀಸರೇ ಕಾಣುತ್ತಿದ್ದರು.

ಕೋರ್ಟ್ ಮೆಟ್ಟಿಲೇರಿದ ಶಿಕ್ಷಕ: ಅನುದಾನ ರಹಿತವಾಗಿ ಸುಮಾರು 8-10 ವರ್ಷಗಳಿಂದ ಸೇವೆ ಸಲ್ಲಿಸಿದ ಬಂಕಾಪುರದ ಬಸವರಾಜ ದ್ಯಾಮಣ್ಣ ಸವೂರ ಎಂಬ ಶಿಕ್ಷಕರು ತಮಗೆ ಈ ಸಂಸ್ಥೆಯಿಂದ ಅನ್ಯಾಯವಾಗುತ್ತಿದೆ. ಹಿಂದಿನ ಸೇವೆ ಪರಿಗಣಿಸಿ ನೇಮಕಾತಿ ಮಾಡಿಕೊಳ್ಳಬೇಕು ಎಂದು ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಗೆ ಮನವಿ ಮಾಡಿದರೂ ನನಗೆ ನೇಮಕಾತಿ ಆದೇಶ ನೀಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಹೀಗಾಗಿ ನನಗೆ ನ್ಯಾಯ ನೀಡಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಸಂದರ್ಶನ ನಡೆಸಬಹುದು ಆದರೆ ತೀರ್ಮಾನ ಆಗುವವರೆಗೆ ನೇಮಕಾತಿ ಆದೇಶ ಪ್ರತಿ ನೀಡದಂತೆ ಶಿಕ್ಷಣ ಸಂಸ್ಥೆಗೆ ಧಾರವಾಡ ಹೈಕೋರ್ಟ್ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.