ADVERTISEMENT

ಪ್ರಜಾತಂತ್ರದಲ್ಲಿ ಪ್ರತಿ ಮತವೂ ಪ್ರತಿಷ್ಠಿತ

ಬುದ್ಧಿ ಮಾಂದ್ಯರು, ಸಾರ್ವಜನಿಕರಿಗೆ ‘ಮತದಾನ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 11:33 IST
Last Updated 29 ಏಪ್ರಿಲ್ 2018, 11:33 IST

ಹಾವೇರಿ: ‘ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಪಾತ್ರ ಬಹು ಮುಖ್ಯವಾಗಿದೆ. ಪ್ರಜಾತಂತ್ರವನ್ನು ಸದೃಢಗೊಳಿಸಲು ಅಂಗವಿಕಲರು ಸೇರಿದಂತೆ ಪ್ರತಿ ಮತವೂ ಪ್ರತಿಷ್ಠಿತವಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ಎಂ.ವಿ. ಹೇಳಿದರು.

ನಗರದ ಡಿ.ದೇವರಾಜ ಅರಸು ಭವನದಲ್ಲಿ ಶನಿವಾರ ನಡೆದ ಅಂಗವಿಕಲರು, ಬುದ್ಧಿ ಮಾಂದ್ಯರು ಹಾಗೂ ಸಾರ್ವಜನಿಕರಿಗೆ ‘ಮತದಾನ ಜಾಗೃತಿ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸಂವಿಧಾನವು ಎಲ್ಲರನ್ನೂ ಸಮಾನವಾಗಿ ಕಂಡಿದೆ. ಬಡವ -ಬಲ್ಲಿದ ಎನ್ನದೇ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ ಎಂದರು.

ADVERTISEMENT

ಜಿಲ್ಲೆಯಲ್ಲಿ ಸುಮಾರು 12,900ಕ್ಕೂ ಅಧಿಕ ಅಂಗವಿಕಲ ಮತದಾರರು ಇದ್ದು, ಮೇ 12ರಂದು ಮುಕ್ತವಾಗಿ ನಿರ್ಭಿತಿಯಿಂದ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವವನ್ನು ಗೆಲ್ಲಿಸಬೇಕು. ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಅಂಗವಿಕಲರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, ಜಿಲ್ಲೆಯಲ್ಲಿ 14 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಚುನಾವಣಾ ಅಧಿಕಾರಿ, ಸಿಬ್ಬಂದಿ ಎಲ್ಲರೂ ಮಹಿಳೆಯರೇ ಆಗಿರುತ್ತಾರೆ ಎಂದರು.

ಬಳಿಕ ಮತದಾನ ಜಾಗೃತಿ ಕುರಿತು ನಾಟಕ ಪ್ರದರ್ಶಿಸಲಾಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಕೆ.ನಾಗರಾಜ, ಹಿರಿಯ ಸಾಹಿತಿ ಸತೀಶ ಕುಲಕರ್ಣಿ,ಹಿರಿಯ ನಾಗರಿಕ ಹಾಗೂ ಅಂಗವಿಕಲರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ, ಶಿಕ್ಷಕ ನಾಗರಾಜ, ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯದರ್ಶಿ ಜಾಫರ್‌ ಸುತಾರ್, ಪರಿಮಳಾ ಜೈನ್, ಶಾಲಿನಿ ಕಮ್ಮಾರ, ಹಸೀನಾ, ಮುತ್ತುರಾಜ ಮಾದರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.