ADVERTISEMENT

ಬದಲಿ ಬೆಳೆಗೂ ಬರುವುದೇ ಕುತ್ತು!

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2017, 8:50 IST
Last Updated 7 ಅಕ್ಟೋಬರ್ 2017, 8:50 IST
ಹಾನಗಲ್‌ ನ ತಿಳವಳ್ಳಿಯಲ್ಲಿ ಬೆಳೆ ಹಾನಿಯಾಗಿರುವುದು
ಹಾನಗಲ್‌ ನ ತಿಳವಳ್ಳಿಯಲ್ಲಿ ಬೆಳೆ ಹಾನಿಯಾಗಿರುವುದು   

ಹಾವೇರಿ: ಸತತ ಬರದ ಕಾರಣ ಸಾಂಪ್ರದಾಯಿಕ ಬೆಳೆಯನ್ನೇ ಬದಲಾವಣೆ ಮಾಡಿದ್ದ ಹಾನಗಲ್ ರೈತರಿಗೆ, ಈಚೆಗೆ ಸುರಿಯುತ್ತಿರುವ ಅಧಿಕ ಮಳೆಯಿಂದ ‘ಕೈಗೆ ಬಂದ ತುತ್ತು ಬಾಯಿಗಿಲ್ಲ’ ಎಂಬ ಭಯ ಕಾಡಿದೆ.

ರಾಜ್ಯದ ಕೇಂದ್ರದಂತಿರುವ ಹಾವೇರಿ ಜಿಲ್ಲೆಯ ಪಶ್ಚಿಮ ಮತ್ತು ಪೂರ್ವದ ನಡುವೆಯೇ ವಿಭಿನ್ನತೆ ಇದೆ. ಸಂಸ್ಕೃತಿ, ಜೀವನ ಪದ್ಧತಿ, ಭೌಗೋಳಿಕ ಲಕ್ಷಣಗಳ ನಡುವೆಯೇ ಕೃಷಿ ಹಾಗೂ ಮಳೆಯಲ್ಲೂ ವ್ಯತ್ಯಯವಿದೆ. ಪಶ್ಚಿಮದ ಹಾನಗಲ್‌ ಮತ್ತು ಪೂರ್ವದ ರಾಣೆಬೆನ್ನೂರು ನಡುವೆ ವಾರ್ಷಿಕ ವಾಡಿಕೆ ಮಳೆಯಲ್ಲೇ 449 ಮಿ.ಮೀ. ಅಂತರವಿದೆ. ಇತರ ತಾಲ್ಲೂಕುಗಳಿಗಿಂತ ಹಾನಗಲ್‌ ನಲ್ಲಿ ಪ್ರತಿವರ್ಷ 207 ಮಿ.ಮೀ. ಅಧಿಕ ಮಳೆ ಸುರಿಯುತ್ತದೆ.

‘ಮಲೆನಾಡಿನ ಸೆರಗು’ ಎನ್ನುವ ಹಾನಗಲ್ ಪ್ರದೇಶದ ಸಾಂಪ್ರದಾಯಿಕ ಬೆಳೆ ಭತ್ತ. ಅದಕ್ಕಾಗಿಯೇ ‘ಭತ್ತದ ಕಣಜ’ ಎಂದೂ ಬಣ್ಣಿಸುತ್ತಾರೆ. ಭತ್ತವು ಅಧಿಕ ನೀರಿನ ಬೆಳೆ. ಸತತ ಬರ ಮತ್ತು ಮುಂಗಾರು ಆರಂಭಿಕ ಕೊರತೆ ಕಾರಣ, ಇಲ್ಲಿನ ರೈತರು ಬದಲಿ ಬೆಳೆಯಾದ ಗೋವಿನ ಜೋಳ ನಾಟಿ ಮಾಡಿದ್ದರು.

ADVERTISEMENT

ಕೃಷಿ ಇಲಾಖೆ ಅಂಕಿಅಂಶಗಳ ಪ್ರಕಾರ ಈ ಬಾರಿ ಹಾನಗಲ್ ಹೋಬಳಿಯ 5,954, ಅಕ್ಕಿಆಲೂರಿನ 6,220 ಮತ್ತು ಬೊಮ್ಮನಹಳ್ಳಿಯ 5,810 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬದಲಾಗಿ ಅಲ್ಪಾವಧಿ ಹಾಗೂ ಕಡಿಮೆ ನೀರಿನ ಬೆಳೆಗಳಾದ ಗೋವಿನಜೋಳ, ಸೋಯಾಬಿನ್, ಹತ್ತಿ ಇತ್ಯಾದಿ ಬಿತ್ತನೆ ಮಾಡಿದ್ದರು. ಕಡಿಮೆ ನೀರಿನ ಈ ಬೆಳೆಗಳು ಹೂವಾಡಿ, ಕಾಳು ಕಟ್ಟಿದ್ದವು. ಏತ ನೀರಾವರಿ ಮೂಲಕ ಕೆರೆಗಳನ್ನು ತುಂಬಿಸಿರುವುದೂ ರೈತರಿಗೆ ಪೂರಕವಾಗಿತ್ತು. ಇನ್ನೇನು, ಒಂದೆರಡು ವಾರದಲ್ಲಿ ‘ಭರ್ಜರಿ ಫಸಲು ಗ್ಯಾರೆಂಟಿ’ ಎನ್ನುವಾಗಲೇ ಮಳೆ ಆರ್ಭಟಿಸಿದೆ.

ರೈತರು: ‘ಅಧಿಕ ನೀರಿನಲ್ಲಿ ಬೆಳೆಯುವ ಭತ್ತಕ್ಕೆ ಮಳೆಗೆ ಹೊಂದಿಕೊಳ್ಳುವ ಗುಣವಿದೆ. ಆದರೆ, ಗೋವಿನ ಜೋಳಕ್ಕೆ ಬಿಸಿಲು ಬೇಕು. ಹೀಗಾಗಿ ಬೆಳೆ ಬದಲಾವಣೆಯೂ ಕೈಕೊಡುವ ಸಾಧ್ಯತೆಯೇ ಹೆಚ್ಚಾಗಿದೆ’ ಎನ್ನುತ್ತಾರೆ ರೈತರು.‘ನಾವು ಸಾಂಪ್ರದಾಯಿಕವಾಗಿ ಭತ್ತ ಬೆಳೆಯುವವರು. ಜುಲೈ ಅಂತ್ಯದ ತನಕ ಮಳೆ ಕೊರತೆ ಕಾರಣ ಮೆಕ್ಕೆ ಜೋಳ ನಾಟಿ ಮಾಡಿದ್ದೆವು. ಬಿತ್ತನೆಯೂ ವಿಳಂಬವಾಗಿತ್ತು. ಆದರೂ ಚಿಗುರೊಡೆದು ಕಾಯಿಕಟ್ಟುವ ಹಂತಕ್ಕೆ ಬಂದಿದೆ. ಈಚೆಗೆ ಸುರಿಯುತ್ತಿರುವ ಮಳೆಯಿಂದ ಮತ್ತೆ ಆತಂಕ ಕಾಡಿದೆ’ ಎನ್ನುತ್ತಾರೆ ತಿಳವಳ್ಳಿಯ ರೈತ ಹನುಮಂತಪ್ಪ ಬಸಪ್ಪ ಬೂದನೂರ್.

ಜಿಲ್ಲೆಯಲ್ಲೇ ಅಂತರ: ‘ಮಳೆ, ಕೃಷಿ, ಮಣ್ಣಿನ ಗುಣ, ಸಸ್ಯ ಸಂಪತ್ತು ಆಧರಿಸಿ ಕೃಷಿ ಪ್ರದೇಶವನ್ನು ವಿಂಗಡಿಸುತ್ತಾರೆ. ಈ ಪೈಕಿ ಹಾನಗಲ್ 9ನೇ ವಲಯದಲ್ಲಿದ್ದರೆ, ಇತರ ತಾಲ್ಲೂಕುಗಳು 8 ನೇ ವಲಯಕ್ಕೆ ಸೇರಿವೆ’ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಬಿಜಾಪುರ.

ಜಿಲ್ಲೆಯ ಪಶ್ಚಿಮದ ಹಾನಗಲ್ ಹೊಲಗಳಲ್ಲಿ ನೀರು ನಿಲ್ಲಿಸಿ ಭತ್ತ ಬೆಳೆದರೆ, ಪೂರ್ವದ ರಾಣೆಬೆನ್ನೂರ, ಸವಣೂರ ಭಾಗದಲ್ಲಿ ತುಂತುರು ನೀರಾವರಿಗೆ ಮೊರೆ ಹೋಗುತ್ತಾರೆ. ಈ ವರ್ಷದ ಅನಿಯಂತ್ರಿತ ಮಳೆಯು ರೈತರ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.